ಇತ್ತೀಚಿನ ಸುದ್ದಿ
ಆಸ್ತಿ ತೆರಿಗೆ: ಪಾಲಿಕೆ ಸಭೆಯಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ತೀವ್ರ ತಿಕ್ಕಾಟ; ಯಾವುದೇ ರೂಲಿಂಗ್ ನೀಡದೆ ಸಭೆಯಿಂದ ಹೊರ ನಡೆದ ಮೇಯರ್!
29/02/2024, 13:02

ಮಂಗಳೂರು(reporterkarnataka.com): ಆಸ್ತಿ ತೆರಿಗೆ ಹೆಚ್ಚಳ ಕುರಿತಂತೆ ಆಡಳಿತರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ತಿಕ್ಕಾಟ ತಾರಕ್ಕೇರಿದ್ದು, ಪಾಲಿಕೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಮೇಯರ್ ಸದನದಿಂದ ಹೊರಗೆ ನಡೆದಿದ್ದಾರೆ.
ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಪಾಲಿಕೆಯ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಆಸ್ತಿ ತೆರಿಗೆ ಹೆಚ್ಚಳ ಕುರಿತಂತೆ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿಯ ಸಂಗೀತಾ ನಾಯಕ್ ಅವರು ಈ ಕುರಿತು ಸ್ಪಷ್ಟನೆ ನೀಡುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಕೈಯಲ್ಲಿ ಫ್ಲೇ ಕಾರ್ಡ್ ಪ್ರದರ್ಶಿಸುತ್ತಾ ಅಂಗಣಕ್ಕೆ ಇಳಿದು ಮೇಯರ್ ಪೀಠದ ಎದುರು ಆಗಮಿಸಿ ಧಿಕಾರ ಕೂಗಿದರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಪ್ರತಿಪಕ್ಷದ ಸದಸ್ಯರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಪ್ರತಿಪಕ್ಷದ ಸದಸ್ಯರು ತಮ್ಮ ಪಟ್ಟು ಬಿಡಲಿಲ್ಲ. ಪ್ರತಿಭಟನೆ ಮುಂದುವರಿಯುತ್ತಿದ್ದಂತೆ ಮೇಯರ್ ಸುಧೀರ್ ಶೆಟ್ಟಿ ಅವರು ಸಭೆಯಿಂದ ಹೊರಗೆ ನಡೆದರು. ಇದನ್ನು ನೋಡಿ ಆಡಳಿತ ಪಕ್ಷದ ಸದಸ್ಯರು ಕೂಡ ಸಭೆಯಿಂದ ಹೊರಗೆ ನಡೆದರು. ಪಾಲಿಕೆ ಕಮಿಷನರ್ ಅವರು ವೇದಿಕೆಯಿಂದ ಕೆಳಗಿಳಿದು ಅಧಿಕಾರಿಗಳ ಸಾಲಿನಲ್ಲಿ ಕುಳಿತರು.
ಈ ನಡುವೆ ಮೇಯರ್ ಅವರು ತಮ್ಮ ಕೊಠಡಿಯಲ್ಲಿ ಆಡಳಿತ ಪಕ್ಷದ ಹಿರಿಯ ಸದಸ್ಯರ ಜತೆ ಚರ್ಚೆ ನಡೆಸಿದರು. ನಂತರ ಮಾಧ್ಯಮಗಳಿಗೆ ಈ ಕುರಿತು ಸ್ಪಷ್ಟನೆ ನೀಡಿದರು. ಈ ಮಧ್ಯೆ ಪ್ರತಿಪಕ್ಷದ ನಾಯಕರು ಸದನದೊಳಗೆ ಕೈಯಲ್ಲಿ ಫ್ಲೇ ಕಾರ್ಡ್ ಪ್ರದರ್ಶಿಸುತ್ತಾ ಪ್ರತಿಭಟನೆ ಮುಂದುವರಿಸಿದರು. ಅಧಿಕಾರಿಗಳು ಹಾಗೂ ಮಾಧ್ಯಮದವರು ಉಪಸ್ಥಿತರಿದ್ದರು. ನಂತರ ಮೇಯರ್ ಅವರು ಅಧಿಕಾರಿಯೊಬ್ಬರನ್ನು ಸದನದೊಳಗೆ ಕಳುಹಿಸಿ ಸಭೆ ಮುಂದೂಡಿರುವ ಬಗ್ಗೆ ಮಾಹಿತಿ ನೀಡಿದರು. ಆದರೆ ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ, ಮಾಜಿ ನಾಯಕ ಎ.ಸಿ. ವಿನಯರಾಜ್ ಸೇರಿದಂತೆ ಕಾಂಗ್ರೆಸ್ ನ ಹಿರಿಯ ಸದಸ್ಯರು ಮೇಯರ್ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಮೇಯರ್ ಸದನಕ್ಕೆ ಬರುವಂತೆ ಆಗ್ರಹಿಸಿದರು.
ಮೇಯರ್ ಅವರು ಏಕಾಏಕಿಯಾಗಿ ಸಭೆಯಿಂದ ಹೊರಹೋಗುವಂತಿಲ್ಲ. ಸಭೆ ಮುಂದೂಡುವುದಾದರೆ ಅಥವಾ ರದ್ದು ಮಾಡುವುದಾದರೆ ಅವರು ಸಭೆಯಲ್ಲಿ ಮಾಹಿತಿ ನೀಡಬೇಕು. ಅಧಿಕಾರಿ ಮೂಲಕ ಅವರು ಸಭೆ ರದ್ದಾಗಿರುವ ಮಾಹಿತಿ ನೀಡುವಂತಿಲ್ಲ. ಏನು ಸದನಕ್ಕೊಂದು ಮರ್ಯಾದೆ ಇಲ್ಲವೇ ಎಂದು ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ ಪ್ರಶ್ನಿಸಿದರು.