ಇತ್ತೀಚಿನ ಸುದ್ದಿ
ಟಿ.ಬಿ.ಜಯಚಂದ್ರ ಅವರಿಗೆ ‘ಅತ್ಯುತ್ತಮ ಶಾಸಕ’ ಪ್ರಶಸ್ತಿ ಮುಖ್ಯಮಂತ್ರಿ ಪ್ರದಾನ
18/12/2024, 14:21
ಬೆಳಗಾವಿ ಸುವರ್ಣ ಸೌಧ (reporterkarnataka.com): ಶಿರಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಿರಿಯ ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ ಅವರು ‘ಅತ್ಯುತ್ತಮ ಶಾಸಕ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಈ ಇಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಸ್ಪೀಕರ್ ಯು.ಟಿ.ಖಾದರ್, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸದನದ ಕಾರ್ಯಕಲಾಪಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಜೊತೆಗೆ ಉತ್ತಮ ಸಂಸದೀಯ ಪಟುವಾಗಿ ಚರ್ಚೆಯ ಗುಣಮಟ್ಟ ಹೆಚ್ಚಿಸಲು ಅವರು ನೀಡಿರುವ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.
7ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಅವರು ಪ್ರಸ್ತುತ ನವದೆಹಲಿಯಲ್ಲಿ ಕರ್ನಾಟಕದ ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ಪ್ರತಿಪಕ್ಷದ ಉಪನಾಯಕರಾಗಿ, ಕೃಷಿ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳು, ಪಶುಸಂಗೋಪನೆ, ಮುಜರಾಯಿ ಹಾಗೂ ಸಣ್ಣ ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಅವರದ್ದಾಗಿದೆ. ಅಲ್ಲದೆ, ಈ ಮುನ್ನ ಕೂಡ ಅವರು ನವದೆಹಲಿಯಲ್ಲಿ ಕರ್ನಾಟಕದ ವಿಶೇಷ ಪ್ರತಿನಿಧಿಯಾಗಿದ್ದರು.
ಕೃಷಿ ಹಾಗೂ ನೀರಾವರಿ ಯೋಜನೆಗಳನ್ನು ರೂಪಿಸುವಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಾ ಬಂದಿರುವ ಇವರು, ಈ ಸಂಬಂಧ ವಿದೇಶಗಳಿಗೂ ಭೇಟಿ ನೀಡಿ ಆಳವಾದ ಅಧ್ಯಯನ ನಡೆಸಿದ್ದಾರೆ. ತುಮಕೂರು ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸಲು ಅವಿರತವಾಗಿ ಶ್ರಮಿಸಿ ಗಮನಸೆಳೆದಿದ್ದಾರೆ.
ಜಯಚಂದ್ರ ಅವರಿಗೆ ಈ ಪ್ರಶಸ್ತಿ ಸಂದಿರುವ ಸಂದರ್ಭದಲ್ಲಿ ಜನಪ್ರತಿನಿಧಿಗಳು ಪಕ್ಷಭೇದವಿಲ್ಲದೆ ಅವರನ್ನು ಅಭಿನಂದಿಸಿದ್ದಾರೆ.