ಇತ್ತೀಚಿನ ಸುದ್ದಿ
ತಲಪಾಡಿಯ ಶಾರದಾ ಪದವಿ ಕಾಲೇಜು: ವಿದ್ಯಾರ್ಥಿಗಳಲ್ಲಿ ಸ್ವಯಂ ಜಾಗೃತಿ ಹಾಗೂ ಮತದಾನದ ಅರಿವು ಮೂಡಿಸಲು ಉಪನ್ಯಾಸ
29/01/2022, 08:43
ಮಂಗಳೂರು( reporterkarnataka.com): ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಮತದಾನದ ಮಹತ್ವ ಮತ್ತು ಪ್ರಜೆಗಳ ಮೇಲಿರುವ ಜವಾಬ್ದಾರಿಯ ಕುರಿತು ವಿದ್ಯಾರ್ಥಿಗಳಲ್ಲಿ ಸ್ವಯಂ ಜಾಗೃತಿ ಹಾಗೂ ಮತದಾನದ ಅರಿವು ಮೂಡಿಸಲು ಉಪನ್ಯಾಸ ಕಾರ್ಯಕ್ರಮ ತಲಪಾಡಿಯ ಶಾರದಾ ಪದವಿ ಕಾಲೇಜಿನಲ್ಲಿ ಕಾಲೇಜು ಆಯೋಜಿಸಲಾಯಿತು.
ಭಾರತದ ಚುನಾವಣಾ ಆಯೋಗ ಸ್ಥಾಪನೆಯಾದ 1950’ರ ಜನವರಿ 25’ರಂದು ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಮೇಲಿರುವ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರಾದ್ಯಂತ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವಾಗಿ ಆಚರಿಸಲಾಗುತ್ತದೆ. ಅದೇ ಪ್ರಯುಕ್ತ ಶಾರದಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ‘ಮತದಾನದ ಹಕ್ಕಿನ ಮಹತ್ವದ ಅರಿವು ಮತ್ತು ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಉಳಿಸುವ ಸಂಕಲ್ಪದ ವಿಚಾರವಾಗಿ ಉಪನ್ಯಾಸ ಕಾರ್ಯಕ್ರಮವು ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಡಾ.ಶಿವಪ್ರಕಾಶ(ನಿರ್ದೇಶಕರು ಫಿಶರೀಸ್ ಕಾಲೇಜು ಮಂಗಳೂರು) ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಭಾರತೀಯರಾಗಿ, ಭಾರತ ದೇಶದ ಪ್ರಜೆಗಳಾಗಿ ನಾವೆಲ್ಲರೂ ಹೆಮ್ಮೆ ಪಡಬೇಕಾದ ವಿಷಯ, ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡು ಅತ್ಯಂತ ಅಪಾರ ನೈಸರ್ಗಿಕ ಸಸ್ಯ ವರ್ಗಗಳಿಂದ, ಹಿಮಾಲಯ ಪರ್ವತ ಶ್ರೇಣಿಯಿಂದ, ನದಿ ವನ ಸಾಗರಗಳ ಬೀಡಿನಿಂದ ವಿವಿಧ ಜಾತಿ-ಮತ-ಧರ್ಮಗಳ ಸಹಬಾಳ್ವೆ ಸಮನ್ವತೆಯ ಸೋದರತೆಯ ಸರ್ವಧರ್ಮ ಸಹಿಷ್ಣುಗಳಾಗಿ ಪ್ರಜಾಪ್ರಭುತ್ವದ ಪರಿಕಲ್ಪನೆಯ ಮೇರೆಗೆ “ಪ್ರಜೆಗಳೇ ಪ್ರಭುಗಳು” ಎಂದು “ವಸುದೈವ ಕುಟುಂಬಕಂ” ಎಂಬ ತತ್ವವನ್ನು ವಿಶ್ವಕ್ಕೆ ಸಾರಿ ಬೋಧಿಸಿ ಹೇಳಿದ ವಿಶ್ವಗುರು ಮಹಾನ್ ಭಾರತ ದೇಶದಲ್ಲಿ ಹುಟ್ಟಿದ ನಾವೇ ಭಾಗ್ಯವಂತರು ಎಂದರು.
ನಮ್ಮ ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಪ್ರೇಮ, ದೇಶಭಕ್ತಿಯನ್ನು ಕಣಕಣದಲ್ಲೂ ಜಾಗೃತಿ ಪಡಿಸಿ ಸಭಿಕರ ಮನಮುಟ್ಟುವಂತೆ ಪ್ರಸ್ತುತಪಡಿಸಿದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧೀಜಿಯವರ ಮುಂದಾಳತ್ವ ಹಾಗೂ ಅಹಿಂಸಾ ಮಾರ್ಗವನ್ನು ಸ್ಮರಿಸಿದರು.
ಉಪನ್ಯಾಸದ ಕೊನೆಯಲ್ಲಿ ಮತದಾನದ ಬಗ್ಗೆ ಜಾಗೃತಿಯನ್ನು ಮೂಡಿಸಲು ಭಸ್ಮಾಸುರ ವಧೆಯೆಂಬ ಭ್ರಷ್ಟಾಚಾರ ನಿರ್ಮೂಲನೆಯ ಕುರಿತಾದ ಒಂದು ಸಣ್ಣ ವಿಡಿಯೋ ತುಣುಕನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಲಾಯಿತು.
ಕಾಲೇಜಿನ ಪ್ರಾಂಶುಪಾಲೆ ಡಾ.ಮೀನಾ ಜೆ. ಪಣಿಕ್ಕರ್ ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣವನ್ನು ಮಾಡಿದರು. ಉಪಪ್ರಾಂಶುಪಾಲರಾದ ಗಾಯತ್ರಿ, ಉಪನ್ಯಾಸಕರು, ಸಂಚಾಲಕರಾದ ಸೂರಜ್ ದೇವಾಡಿಗ ಉಪಸ್ಥಿತರಿದ್ದರು.
ಲಕ್ಷ್ಮಿ ಹಾಗೂ ವೈಶಿಕ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಕ್ರಿಸ್ ಕೀರ್ತನ್ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಂಪನ್ಮೂಲ ವ್ಯಕ್ತಿಯನ್ನು ಸಭೆಗೆ ಪರಿಚಯಿಸಿದರು. ಅಡಿಬಾ ಪ್ರಥಮ ಗಣಕಯಂತ್ರ ವಿಭಾಗದ ವಿದ್ಯಾರ್ಥಿನಿ ಕಾರ್ಯಕ್ರಮವನ್ನು ನಿರೂಪಿಸಿದರು. ರೋಹನ್ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿ ವಂದಿಸಿ ಧನ್ಯವಾದ ಸಮರ್ಪಿಸಿದರು. ಶಾರದಾ ವಿದ್ಯಾನಿಕೇತನ ಪ್ರೌಢಶಾಲೆಯ ವಿದ್ಯಾರ್ಥಿಗಳು, ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಕ ಶಿಕ್ಷಕೇತರ ವರ್ಗದವರು, ದೈಹಿಕ ಶಿಕ್ಷಕರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.