ಇತ್ತೀಚಿನ ಸುದ್ದಿ
ತಹಶೀಲ್ದಾರ್ ವಾಹನ ಚಾಲಕ ಆತ್ಮಹತ್ಯೆ: ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತದಿಂದ 8 ಲಕ್ಷ ರೂ. ಪರಿಹಾರ ಪ್ರಕಟ
31/01/2022, 13:26
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಶೃಂಗೇರಿ ತಹಶೀಲ್ದಾರರ ವಾಹನ ಚಾಲಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ,ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ಕೊನೆಗೂ 8 ಲಕ್ಷ ರೂ. ಪರಿಹಾರ ಪ್ರಕಟಿಸಿದೆ .
ಅಕ್ರಮ ಸಕ್ರಮ ಸಾಗುವಳಿ ಪತ್ರ ನೀಡಿಕೆ ಹಗರಣದಲ್ಲಿ ಒತ್ತಡ -ಮಾನಸಿಕ ಆಘಾತ- ಕಿರುಕುಳಕ್ಕೆ ಬೇಸತ್ತು ಜೀಪ್ ಚಾಲಕ ಈ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಹೆಗ್ತೂರು ವಿಜೇತ್ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದ.
ಶವವನ್ನು ಮರಣೋತ್ತರ ಪರೀಕ್ಷೆಗೆ ತಂದ ಸಂದರ್ಭದಲ್ಲಿ ಶೃಂಗೇರಿಯ ಮುಖ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ನಾಗರಿಕರು ಸ್ಥಳಕ್ಕೆ ಅಧಿಕಾರಿಗಳು ಬರಲು ವಿಳಂಬ ಮಾಡಿದ ಕ್ರಮ ಆಕ್ಷೇಪಿಸಿ ತರಾಟೆಗೆ ತೆಗೆದುಕೊಂಡರು ಜಿಲ್ಲಾಧಿಕಾರಿಗಳು ಬರುವಂತೆ ಪಟ್ಟು ಹಿಡಿದಿದ್ದರು .
ಶವದ ಮರಣೋತ್ತರ ಪರೀಕ್ಷೆ ಬಳಿಕ ರಸ್ತೆ ಮಧ್ಯೆ ಶವವನ್ನು ಇಟ್ಟು ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು .
ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಉಪವಿಭಾಗಾಧಿಕಾರಿ ನಾಗರಾಜ್ ,ಪ್ರತಿಭಟನಾನಿರತರ ಮನವೊಲಿಸಿ 8 ಲಕ್ಷ ರೂ ಪರಿಹಾರ ಪ್ರಕಟಿಸಿದೆ ಅಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು .
ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಟ್ಟು ಸ್ವಗ್ರಾಮಕ್ಕೆ ಪಾರ್ಥಿವ ಶರೀರರವನ್ನು ತೆಗೆದುಕೊಂಡು ಹೋಗಲಾಯಿತು .
ಈ ನಡುವೆ ಡೆತ್ ನೋಟ್ ಆಧರಿಸಿ ಕಛೇರಿಯಲ್ಲಿ ಪ್ರಥಮ ದರ್ಜೆ ಗುಮಾಸ್ತ ಶರತ್ ಹಾಗೂ ಶಿರಸ್ತೆದಾರ್ ರಾಘವೇಂದ್ರ ಹಾಗೂ ನಾಗೇಂದ್ರರನ್ನು ವಶಕ್ಕೆ ಪಡೆದು ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
ಈಗಾಗಲೇ ತಹಸೀಲ್ದಾರ್ ಅಂಬುಜಾ ಎಸಿಬಿ ಬಲೆಗೆ ಬಿದ್ದು ಅಮಾನತು ನಿರೀಕ್ಷೆಯಲ್ಲಿದ್ದಾರೆ . ಎಸಿಬಿ ಬಲೆಗೆ ಬಿದ್ದಿದ್ದ ಸಿದ್ಧಪ್ಪ ನನ್ನು ಅಮಾನತು ಮಾಡಿದ ಜಿಲ್ಲಾಡಳಿತ ನಂತರದ ದಿನಗಳಲ್ಲಿ ಅಕ್ರಮ ಸಕ್ರಮ ಸಾಗುವಳಿ ಚೀಟಿ ಹಗರಣ ಸಂಬಂಧ ಸತೀಶ್ , ಶಿವಕುಮಾರ್ ,ಸಂದೀಪ್ ರನ್ನು ಅಮಾನತು ಮಾಡಲಾಗಿತ್ತು.