ಇತ್ತೀಚಿನ ಸುದ್ದಿ
ತ.ನಾ. ಚುನಾವಣೆ | ಚಾಮರಾಜನಗರ ಸಮೀಪದ ಮೆಟ್ಟೂರು ಕ್ಷೇತ್ರದಿಂದ ವೀರಪ್ಪನ್ ಪುತ್ರಿ ವಿದ್ಯಾರಾಣಿ ಕಣಕ್ಕೆ
04/04/2026, 22:29
ಮೆಟ್ಟೂರು(reporterkarnataka.com): ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ಪಕ್ಕದಲ್ಲಿನ ಮೆಟ್ಟೂರಿನಿಂದ ನರಹಂತಕ ವೀರಪ್ಪನ್ ಪುತ್ರಿ ವಿದ್ಯಾರಾಣಿ ಕಣಕ್ಕಿಳಿದಿದ್ದಾರೆ. ಸಾಲ ಇದೆ ಎಂದು ತಿಳಿಸಿದ್ದಾರೆ.

ಸ್ಥಿರಾಸ್ತಿಗಳು ಇಲ್ಲ ಎಂದು ನಾಮಪತ್ರದಲ್ಲಿ ಘೋಷಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಮೆಟ್ಟೂರಿನ ಹಿನ್ನೀರಿನ ಮೂಲೆಕಾಡಿನಲ್ಲಿರುವ ವೀರಪ್ಪನ್ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿ ಅಖಾಡಕ್ಕೆ ಧುಮುಕಿದ್ದಾರೆ. ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಕೂಡ ಈ ಹಿಂದೆ ಚುನಾವಣೆಯಲ್ಲಿ ಆಸಕ್ತಿ ತೋರಿದ್ದರಾದರೂ ಈ ಬಾರಿ ಎಲ್ಲಿಯೂ ಕಾಣಿಸಿಕೊಂಡಿಲ್ಲ.
*ಡಿಕೆಶಿಯನ್ನು ಭೇಟಿಯಾಗಿದ್ದ ವಿದ್ಯಾರಾಣಿ*
ಮೆಟ್ಟೂರಿನ ಹಿನ್ನೀರಿನ ಮೂಲೆಕಾಡು ಎಂಬಲ್ಲಿರುವ ವೀರಪ್ಪನ್ ಸಮಾಧಿಗೆ ಪುತ್ರಿ ವಿದ್ಯಾ ಪೂಜೆ ಸಲ್ಲಿಸಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಇತ್ತೀಚೆಗಷ್ಟೇ ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದರು.
2020ರಲ್ಲಿ ತಮಿಳುನಾಡು ರಾಜಕಾರಣಕ್ಕೆ ಪ್ರವೇಶಿಸಿದ ವಿದ್ಯಾರಾಣಿ ಬಿಜೆಪಿ ಯುವ ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಆನಂತರ ಬಿಜೆಪಿ ತೊರೆದ ಅವರು, ನಾಮ್ ತಮಿಲರ್ ಕಚ್ಚಿ (ಎನ್‌ಟಿಕೆ) ಪಕ್ಷ ಸೇರ್ಪಡೆಯಾಗಿದ್ದಾರೆ.
*ಚುನಾವಣೆ ದಿನಾಂಕಗಳು*
ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಏ.9ಕ್ಕೆ, ತಮಿಳುನಾಡಲ್ಲಿ ಏಪ್ರಿಲ್ 23ಕ್ಕೆ ಮತ್ತು ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಮತದಾನ ನಡೆಯಲಿದೆ. 5 ರಾಜ್ಯಗಳ ಒಟ್ಟು 824 ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತಿದ್ದು 17.4 ಕೋಟಿ ಜನರು ಮತದಾನದ ಅರ್ಹತೆ ಪಡೆದಿದ್ದಾರೆ . ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೂ ಉಪಚುನಾವಣೆ ನಡೆಯಲಿದೆ. ಎರಡೂ ಕ್ಷೇತ್ರಗಳಲ್ಲಿ ಏಪ್ರಿಲ್ 9ರಂದು ಮತದಾನ ನಡೆದ್ರೆ ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.













