ಇತ್ತೀಚಿನ ಸುದ್ದಿ
ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರ ವಿಠ್ಠಲ ಕಿಣಿಗೆ ಸನ್ಮಾನ: ಕ್ವಿಟ್ ಇಂಡಿಯಾ ಚಳುವಳಿ ನೆನಪಿಸಿದ ದೇಶದ ಕಟ್ಟಾಳು
09/08/2022, 22:07

ಮಂಗಳೂರು(reporterkarnataka.com): ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ
ಜಿಲ್ಲಾಡಳಿತದ ವತಿಯಿಂದ ನಗರದ ಅಳಕೆಯಲ್ಲಿರುವ ಸ್ವಗೃಹದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಮಟ್ಟಾರ ವಿಠ್ಠಲ ಕಿಣಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಅವರು ಮಟ್ಟಾರ ವಿಠ್ಠಲ ಕಿಣಿ ಅವರನ್ನು ಸನ್ಮಾನಿಸಿದರು.
ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ತಹಶೀಲ್ದಾರ್ ರಶ್ಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ಸ್ಥಳೀಯ ಕಾರ್ಪೋರೇಟರ್, ಕಂದಾಯ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಮಟ್ಟಾರು ವಿಠಲ ಕಿಣಿ ಅವರ ಕುಟುಂಬದ ಸದಸ್ಯರು, ಹಿತೈಷಿಗಳು ಈ ಸಂದರ್ಭದಲ್ಲಿದ್ದರು.
ಈ ವೇಳೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರೊಂದಿಗೆ ಮಾತನಾಡಿದ ಮಟ್ಟಾರ ವಿಠ್ಠಲ ಕಿಣಿಯವರು ಸ್ವಾತಂತ್ರ್ಯ ಚಳುವಳಿಯು ಬಹಳ ಸ್ಪೂರ್ತಿದಾಯಕವಾಗಿತ್ತು, ಯುವಕರಾದ ನಾವು 1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಗಾಂಧೀಜಿಯವರ ಕರೆಯ ಮೇರೆಗೆ ಭಾಗವಹಿಸಿದ ಅನುಭವವನ್ನು ಹಂಚಿಕೊಂಡರು.