ಇತ್ತೀಚಿನ ಸುದ್ದಿ
ಶ್ವಾನಕ್ಕೇನು ಗೊತ್ತು ಬಾಬಾ ರಾಮ್ ದೇವ್ ಫ್ಯಾಕ್ಟರಿಯಿಂದ ಇಂತಹ ಹೊಲಸು ಬರುತ್ತದೆ ಎಂದು?: ಆದರೆ, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಗೊತ್ತು!!
10/06/2023, 18:47
ಮಂಗಳೂರು(reporterkarnataka.com): ದಯವಿಟ್ಟು ಈ ಶ್ವಾನದ ದಯನೀಯ ಪರಿಸ್ಥಿತಿಯನ್ನು ಗಮನಿಸಿ.. ಇದು ನಮ್ಮ ತುಳುನಾಡಿನ ಹೆಮ್ಮೆಯ ಶ್ವಾನ. ಸಕಲ ಜೀವರಾಶಿಯಲ್ಲಿ ನಮ್ಮ ಹಾಗೆ ಇದಕ್ಕೂ ಗೌರವಯುತವಾಗಿ ಬದುಕುವ ಹಕ್ಕಿದೆ. ಆದರೆ ಇದರ ಮೈಮೇಲೆ ಔಷಧ ಲೇಪಿಸಿರುವುದಲ್ಲ. ಬದಲಿಗೆ ಬಾಬಾ ರಾಮ್ ದೇವ್ ಅವರ ಪತಂಜಲಿ ಫುಡ್ಸ್ ನಿಂದ ತೋಕೂರು ತೋಡು ಮೂಲಕ ಫಲ್ಗುಣಿಗೆ ಸೇರುವ ಮಾರಕ ಕೈಗಾರಿಕಾ ತ್ಯಾಜ್ಯ ಅಂಟಿರುವುದು. ಶ್ವಾನಕ್ಕೇನು ಗೊತ್ತು ಯೋಗ ಗುರುಗಳ ಫ್ಯಾಕ್ಟರಿಯಿಂದ ಈ ರೀತಿಯ ಹೊಲಸು ಹೊರಬರುತ್ತದೆ ಎಂದು. ಆದರೆ ಇಲ್ಲಿನ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಇದೆಲ್ಲ ಗೊತ್ತು.
ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಬಾಬಾ ರಾಮ್ ದೇವ್ ಮಾಲಕತ್ವದ ಪತಂಜಲಿ ಫುಡ್ಸ್ (ರುಚಿ ಸೋಯಾ) ತುಳುನಾಡಿನ ಜೀವನದಿ ಫಲ್ಗುಣಿಗೆ ಮಾರಕ ಕೈಗಾರಿಕಾ ತ್ಯಾಜ್ಯ ಹರಿಸುವ ಕೊಳವೆಗಳು ಪತ್ತೆಯಾದ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ರೈತ, ದಲಿತ, ಕಾರ್ಮಿಕ, ಜನಪರ ಸಂಘಟನೆಗಳು ಹಾಗೂ ಎಡಪಕ್ಷಗಳ ಜಂಟಿ ನಿಯೋಗ ಇಂದು ಭೇಟಿ ಮಾಡಿ ಆಗಿರುವ ಹಾನಿಯನ್ನು ವೀಕ್ಷಿಸಿತು. ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರೈತ, ದಲಿತ, ಕಾರ್ಮಿಕ, ಜನಪರ ಸಂಘಟನೆಗಳು, ಎಡಪಕ್ಷಗಳ ಜಂಟಿ ನಿಯೋಗದಿಂದ ಸ್ಥಳ ಪರಿಶೀಲನೆ ನಡೆಸಿತು. ಈ ಕೈಗಾರಿಕಾ ತ್ಯಾಜ್ಯ ಮನುಷ್ಯರಿಗೆ ಮಾತ್ರವಲ್ಲ, ನಾಯಿ- ಬೆಕ್ಕು, ಹಕ್ಕಿ, ಹಾವು ಸೇರಿದಂತೆ ಸಕಲ ಜೀವ ಜಂತುಗಳಿಗೆ ಕೂಡ ಹಾನಿಕಾರಕ ಎನ್ನುವುದು ಈ ಶ್ವಾನ ಸಾಬೀತುಪಡಿಸಿದೆ. ಪರಂಜಲಿ ಕಂಪನಿಯು ಇಷ್ಟೆಲ್ಲ ಪರಿಸರಕ್ಕೆ ಹಾನಿಯುಂಟು ಮಾಡುತ್ತಿದ್ದರೂ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಮಾತ್ರ ಕಣ್ಮುಚ್ಚಿ ನಿದ್ರಿಸುತ್ತಿದೆ.