ಇತ್ತೀಚಿನ ಸುದ್ದಿ
ಸುರತ್ಕಲ್: ಎಸ್ಸೆಸ್ಸೆಲ್ಸಿ ಪ್ರಿಪರೇಟರಿ ಪರೀಕ್ಷೆ ಬರೆದು ನಾಪತ್ತೆಯಾಗಿದ್ದ 4 ಮಂದಿ ಬಾಲಕರ ಮೃತದೇಹ ಹಳೆಯಂಗಡಿ ಬಳಿ ಪತ್ತೆ
28/02/2024, 10:26
ಸುರತ್ಕಲ್(reporterkarnataka.com) : ಮಂಗಳವಾರದಂದು ಎಸ್ಸೆಸ್ಸೆಲ್ಸಿ ಪ್ರಿಪರೇಟರಿ ಪರೀಕ್ಷೆ ಬರೆದ ಬಳಿಕ ನಾಪತ್ತೆಯಾಗಿದ್ದ ಸುರತ್ಕಲ್‌ನ ಖಾಸಗಿ ಅನುದಾನಿತ ಪ್ರೌಢಶಾಲೆಯ 4 ಮಂದಿ ವಿದ್ಯಾರ್ಥಿಗಳ ಮೃತದೇಹಗಳು ಹಳೆಯಂಗಡಿ ಕೊಪ್ಪಳ ಅಣೆಕಟ್ಟಿನ ರೈಲ್ವೇ ಸೇತುವೆ ಕೆಳಭಾಗದಲ್ಲಿ ಪತ್ತೆಯಾಗಿದೆ.
ಮೃತ ಬಾಲಕರನ್ನು ಅಗರಮೇಲು ನಿವಾಸಿ ಯಶ್ವಿತ್, ಹಳೆಯಂಗಡಿಯ ರಾಘವೇಂದ್ರ, ಚಿತ್ರಾಪುರದ ಅನ್ವಿತ್, ಗುಡ್ಡೆಕೊಪ್ಲದ ನಿರೂಪ್ ಎಂದು ಗುರುತಿಸಲಾಗಿದೆ. ಮಂಗಳವಾರ ಮಧ್ಯಾಹ್ನ ಇಂಗ್ಲಿಷ್ ಪೂರ್ವಭಾವಿ ಪರೀಕ್ಷೆ ಮುಗಿದಿದ್ದು ಬಳಿಕ ಯಶ್ವಿತ್, ರಾಘವೇಂದ್ರ, ಅನ್ವಿತ್ ಹಾಗೂ ನಿರೂಪ್ ನಾಪತ್ತೆ ಯಾಗಿದ್ದರು.
ಹಳೆಯಂಗಡಿ ಕರಿತೋಟದಲ್ಲಿ ನಂದಿನಿ ನದಿಯಲ್ಲಿ ಈಜಾಡಲು ಹೋಗಿ ನಾಲ್ವರು ವಿದ್ಯಾರ್ಥಿಗಳು ಅಸುನೀಗಿದ್ದಾರೆ. ನಾಪತ್ತೆ ಪ್ರಕರಣ ದಾಖಲಾಗುತ್ತಿದ್ದಂತೆ ಸುರತ್ಕಲ್ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಶಾಲೆ ಮತ್ತು ಬಸ್ ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳನ್ನು ತರಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಸುರತ್ಕಲ್ ಬಸ್ ನಿಲ್ದಾಣದಿಂದ ಬಸ್ ಹತ್ತಿ ಹಳೆಯಂಗಡಿ ಬಸ್ ನಿಲ್ದಾಣದಲ್ಲಿ ಇಳಿದಿರುವುದನ್ನು ಖಚಿತಪಡಿಸಿಕೊಂಡಿದ್ದರು. ವಿದ್ಯಾರ್ಥಿಯೋರ್ವನ ಬಳಿ ಇತ್ತೆನ್ನಲಾದ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ವಿದ್ಯಾರ್ಥಿಗಳು ನದಿಯ ದಡಕ್ಕೆ ಬಂದಿರುವುದು ಗಮನಕ್ಕೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ನದಿಯ ದಡದಲ್ಲಿ ಮಕ್ಕಳ ಶಾಲೆಯ ಚೀಲಗಳು, ಚಪ್ಪಲಿ, ಶಾಲೆಯ ಸಮವಸ್ತ್ರಗಳು ಪತ್ತೆಯಾಗಿವೆ.
ಸಂಶಯದಿಂದ ಸ್ಥಳೀಯರ ಸಹಕಾರದಿಂದ ನದಿಯಲ್ಲಿ ಹುಡುಕಾಡಿದಾಗ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ವೆನ್‌ಲಾಕ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.