ಇತ್ತೀಚಿನ ಸುದ್ದಿ
ಸುರತ್ಕಲ್ ನಿರುಪಯುಕ್ತ ಟೋಲ್ ಗೇಟ್ ತಕ್ಷಣ ತೆರವುಗೊಳಿಸಿ, ಇಲ್ಲವೆ ತೀವ್ರ ಪ್ರತಿಭಟನೆ ಎದುರಿಸಿ: ಹೋರಾಟ ಸಮಿತಿ ಎಚ್ಚರಿಕೆ
12/12/2023, 22:31

ಸುರತ್ಕಲ್(reporterkarnataka.com): ಸುರತ್ಕಲ್ ನ ನಿರುಪಯುಕ್ತ ಟೋಲ್ ಗೇಟ್ ತಕ್ಷಣ ತೆರವುಗೊಳಿಸಿ, ಇಲ್ಲವೆ ತೀವ್ರ ಪ್ರತಿಭಟನೆ ಎದುರಿಸಿ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.
ವರ್ಷದ ಹಿಂದೆ ಟೋಲ್ ಸಂಗ್ರಹ ರದ್ದುಗೊಂಡಿರುವ ಸುರತ್ಕಲ್ ಟೋಲ್ ಗೇಟ್ ನ ನಿರುಪಯೋಗಿ ಅವಶೇಷಗಳನ್ನು ತೆರವುಗೊಳಿಸದೆ ಅಪಾಯಕಾರಿಯಾಗಿ ಉಳಿಸಿರುವುದರಿಂದ ಅಪಘಾತಗಳು, ಪ್ರಾಣಹಾನಿ ಸಂಭವಿಸುತ್ತಿದೆ. ಈ ಕುರಿತು ಹಲವು ಬಾರಿ ಎಚ್ಚರಿಸಿದರೂ ಸ್ಥಳೀಯ, ಶಾಸಕ, ಸಂಸದರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಇದೀಗ ಟ್ರಕ್ ಒಂದು ಟೋಲ್ ಗೇಟ್ ಗೆ ಡಿಕ್ಕಿ ಹೊಡೆದು ಟೋಲ್ ಗೇಟ್ ನ ಅವಶೇಷಗಳು ಕುಸಿಯುವ ಭೀತಿ ಎದುರಾಗಿದೆ, ಸ್ಥಳದಲ್ಲಿ ಅಪಾಯಕಾರಿ ಸ್ಥಿತಿ ನಿರ್ಮಾಣಗೊಂಡಿದೆ. ಸಂಬಂಧ ಪಟ್ಟವರು ತಕ್ಷಣವೇ ಅಪಾಯಕಾರಿ ಸ್ಥಿತಿಯಲ್ಲಿರುವ ಟೋಲ್ ಗೇಟ್ ಅನ್ನು ತೆರವುಗೊಳಿಸಿ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದಿದ್ದಲ್ಲಿ ನಿರುಪಯುಕ್ತ ಟೋಲ್ ಗೇಟ್ ತೆರವುಗೊಳಿಸಲು ಹೋರಾಟ ಸಮಿತಿಯೇ ಮತ್ತೊಮ್ಮೆ “ನೇರ ಕಾರ್ಯಾಚರಣೆ” ಯಂತಹ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.
ಸುರತ್ಕಲ್ ಟೋಲ್ ಗೇಟ್ ನಲ್ಲಿ ಟೋಲ್ ಸಂಗ್ರಹ ರದ್ದತಿಗಾಗಿ ಹೋರಾಟ ಸಮಿತಿ ಏಳು ವರ್ಷಗಳ ಕಾಲ ಸತತ ಹೋರಾಟ ನಡೆಸಬೇಕಾಯ್ತು.
ಆ ಸಂದರ್ಭದಲ್ಲೂ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಟೋಲ್ ಗುತ್ತಿಗೆದಾರರ ಪರವಾಗಿಯೇ ನಿಂತಿದ್ದರು, ಟೋಲ್ ಗೇಟ್ ಮುಚ್ಚುವ ಜನಾಗ್ರಹವನ್ನು ಲಘುವಾಗಿಸಲು ಯತ್ನಿಸಿದರು. ಜನತೆಯ ಸಂಘಟಿತ ಹೋರಾಟಗಳು ಮಾತ್ರ ಜನಪ್ರತಿನಿಧಿಗಳ ಕುಟಿಲತೆಯನ್ನು ವಿಫಲಗೊಳಿಸಿತ್ತು.
ಟೋಲ್ ಸಂಗ್ರಹ ರದ್ದತಿ ಆದೇಶದ ಮುಂದೆ ನಿರುಪಯುಕ್ತ ಟೋಲ್ ಗೇಟ್ ಅವಶೇಷಗಳ ತೆರವು ತೀರಾ ಸಣ್ಣ ಕೆಲಸವಾಗಿದೆ. ಸಂಸದ, ಶಾಸಕರುಗಳು ಮನಸ್ಸು ಮಾಡಿದರೆ ಒಂದೆರಡು ದಿನಗಳಲ್ಲಿ ಟೋಲ್ ಅವಶೇಷಗಳನ್ನು ಸಂಬಂಧಪಟ್ಟವರು ತೆರವುಗೊಳಿಸುತ್ತಾರೆ. ಆದರೆ, ಇಂತಹ ಸಣ್ಣ ಕೆಲಸವನ್ನು ಮಾಡಲು ಮುಂದಾಗದ ಸಂಸದ, ಶಾಸಕರುಗಳು ತಾವು ಜನಪ್ರತಿನಿಧಿಗಳ ಕರ್ತವ್ಯ ನಿರ್ವಹಣೆಗೆ ಅನ್ ಫಿಟ್ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಜೊತೆಗೆ ತಮ್ಮ ಉದ್ದೇಶ, ನಿರೀಕ್ಷೆಗಳನ್ನು ಮೀರಿ ಸುರತ್ಕಲ್ ಟೋಲ್ ಗೇಟನ್ನು ಐತಿಹಾಸಿಕ ಹೋರಾಟದ ಮೂಲಕ ತೆರವುಗೊಳಿಸಿದ ಹೋರಾಟ ಸಮಿತಿ ಹಾಗೂ ನಾಗರಿಕರ ಮೇಲೆ ಅವಶೇಷ ತೆರವುಗೊಳಿಸದೆ ಸೇಡು ತೀರಿಸಿಕೊಳ್ಳುವಂತೆ ನಡೆದುಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಅಪಘಾತಗಳು, ಪ್ರಾಣ ಹಾನಿ ಸಂಭವಿಸುತ್ತಿದ್ದರೂ ನಿರುಪಯುಕ್ತ ಟೋಲ್ ಗೇಟ್ ಅನ್ನು ಹೆದ್ದಾರಿ ನಡುವೆಯೆ ಉಳಿಸಿ ವಾಹನ ಸವಾರರ ಪ್ರಾಣದ ಜೊತೆಗೆ ಚೆಲ್ಲಾಟ ಆಡುತ್ತಿದ್ದರೆ ಎಂದು ಹೋರಾಟ ಸಮಿತಿ ಅಪಾದಿಸಿದೆ.
ನಂತೂರು, ಸುರತ್ಕಲ್ ಹೆದ್ದಾರಿಯ ರದ್ದುಗೊಂಡಿರುವ ಸುಂಕವನ್ನು ಮತ್ತೆ ಸಂಗ್ರಹಿಸಲು ಹೋರಾಟ ಸಮಿತಿ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಅಪಾಯಕಾರಿ ಸ್ಥಿತಿಯಲ್ಲಿರುವ ಸುರತ್ಕಲ್ ನಿರುಪಯುಕ್ತ ಟೋಲ್ ಗೇಟ್ ಅವಶೇಷಗಳನ್ನು ತಕ್ಷಣವೇ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಸರಣಿ ಹೋರಾಟಗಳನ್ನು, ನಿರುಪಯುಕ್ತ ಟೋಲ್ ಗೇಟ್ ತೆರವಿಗೆ ಮತ್ತೊಮ್ಮೆ “ನೇರ ಕಾರ್ಯಾಚರಣೆ” ಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ,
ಅದಕ್ಕೆಲ್ಲ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟರೆ ಹೊಣೆಯಾಗುತ್ತಾರೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.