ಇತ್ತೀಚಿನ ಸುದ್ದಿ
ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆ: ಸರಕಾರಿ ನೌಕರರ ಸಂಘಕ್ಕೆ ಚುನಾವಣೆಗೆ ಸಿವಿಲ್ ಕೋರ್ಟ್ ತಡೆಯಾಜ್ಞೆ
10/01/2025, 10:02
ಮಂಗಳೂರು(reporterkarnataka.com):ಸುಪ್ರೀಂ ಕೋರ್ಟ್ ನೀಡಿದ್ದ ಸ್ಪಷ್ಟ ನಿರ್ದೇಶನ ಉಲ್ಲಂಘಿಸಿ ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ನ್ಯಾಯಾಂಗ ಇಲಾಖೆಯ ಕ್ಷೇತ್ರಕ್ಕೆ ನಡೆಸಲು ಉದ್ದೇಶಿಸಿದ ಚುನಾವಣೆಗೆ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯ ನಿರ್ಬಂಧಕಾಜ್ಞೆ ನೀಡಿದೆ.
ಈ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಸಂಘ ಹಾಗೂ ರಾಜ್ಯ ಸಂಘದ ಪದಾಧಿಕಾರಿಗಳ ಸ್ಥಾನಕ್ಕೆ ಮರು ಚುನಾವಣೆ ಸಾಧ್ಯತೆ ನಿಚ್ಚಳವಾಗಿದೆ.
ಮತದಾನದ ಸಂವಿಧಾನಾತ್ಮಕ ಹಕ್ಕಿನಿಂದ ನ್ಯಾಯಾಂಗ ಇಲಾಖಾ ನೌಕರರನ್ನು ವಂಚಿತರನ್ನಾಗಿ ಮಾಡಿದ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಗೆ 5 ಲಕ್ಷ ರೂಪಾಯಿ ದಂಡ ವಿಧಿಸಿ ದಿನಾಂಕ 27.12.2024 ರೊಳಗೆ ಚುನಾವಣೆ ನಡೆಸುವಂತೆ ಆದೇಶಿಸಿದ ಕರ್ನಾಟಕ ಹೈಕೋರ್ಟ್ ನ ಆದೇಶವನ್ನು ಪಾಲಿಸದೆ ಜಿಲ್ಲಾ ಸಂಘವು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ ವಿಶೇಷ ಅನುಮತಿ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸುವ ಹಂತದಲ್ಲಿ ವಜಾಗೊಳಿಸಿ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ನ್ಯಾಯಾಂಗ ಇಲಾಖೆಗೆ ಸಂಬಂಧಿಸಿದ ಚುನಾವಣೆಯ ದಿನಾಂಕ ನಿಗದಿಪಡಿಸಲು ಕರ್ನಾಟಕ ಹೈಕೋರ್ಟ್ ಗೆ ಮನವಿ ಸಲ್ಲಿಸಿ ಹೈಕೋರ್ಟ್ ನೀಡಿದ ದಿನಾಂಕದಂದು ಚುನಾವಣೆ ನಡೆಸುವಂತೆ ನಿರ್ದೇಶಿಸಿತ್ತು.
ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದಂತೆ ಹೈಕೋರ್ಟ್ ಗೆ ಮನವಿ ಸಲ್ಲಿಸಿ ಚುನಾವಣೆಗೆ ದಿನಾಂಕವನ್ನು ಪಡೆಯುವ ಬದಲು ತಮ್ಮ ಇಷ್ಟಾನುಸಾರ ದಿನಾಂಕ 7-1-2025 ರಂದು ನೂತನ ಚುನಾವಣಾ ವೇಳಾಪಟ್ಟಿ ಪ್ರಕಟಿಸಿ ದಿನಾಂಕ 10.1.2025 ರಂದು ನ್ಯಾಯಾಂಗ ಇಲಾಖೆಗೆ ಮರು ಚುನಾವಣೆ ನಡೆಸಲಾಗುವುದು ಎಂಬ ಪತ್ರಿಕಾ ಪ್ರಕಟಣೆಯನ್ನು ಚುನಾವಣಾ ಅಧಿಕಾರಿ ಹೊರಡಿಸಿದ್ದರು.
ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿ ನಾಮಪತ್ರ ಸ್ವೀಕರಿಸುವ, ಪರಿಶೀಲಿಸುವ, ಕ್ರಮಬದ್ಧ ನಾಮಪತ್ರಗಳನ್ನು ಸಲ್ಲಿಸಿದ ಅಭ್ಯರ್ಥಿಗಳ ಯಾದಿಯನ್ನು ಪ್ರಕಟಿಸುವ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು ಕೇವಲ ಚುನಾವಣೆ ನಡೆಸುವ ದಿನಾಂಕವನ್ನು ಕರ್ನಾಟಕ ಹೈಕೋರ್ಟ್ ನಿಂದ ಪಡೆದು ಚುನಾವಣೆ ನಡೆಸುವ ಪ್ರಕ್ರಿಯೆ ಮಾತ್ರ ಬಾಕಿ ಇತ್ತು. ಆದರೆ ಈ ಪ್ರಕ್ರಿಯೆಯನ್ನು ಕೈಗೊಳ್ಳುವ ಬದಲು ಚುನಾವಣೆಗೆ ಸ್ಪರ್ಧಿಸಲು ಅರ್ಹ ಅಭ್ಯರ್ಥಿಗಳೆಂದು ಈಗಾಗಲೇ ಘೋಷಿಸಲಾದ ಅಭ್ಯರ್ಥಿಗಳಾದ ಪ್ರಕಾಶ್ ನಾಯಕ್ ಮತ್ತು ಸಬಿತಾ ಸೆರಾವೋ ಅವರನ್ನು ಕೈ ಬಿಟ್ಟು ಬೇರೆ ಅಭ್ಯರ್ಥಿಗಳಿಂದ ನಾಮಪತ್ರ ಪಡೆದು ಅಕ್ರಮವಾಗಿ ಚುನಾವಣೆ ನಡೆಸಲು ಚುನಾವಣಾಧಿಕಾರಿ ಹಾಗೂ ಸಂಘದ ಪದಾಧಿಕಾರಿಗಳು ಸನ್ನದ್ಧರಾದರು.
ಈ ಕೃತ್ಯದಿಂದ ಬಾಧಿತರಾದ ಅಭ್ಯರ್ಥಿ ಸಬಿತಾ ಸೆರಾವೋ ಅವರು ದಿನಾಂಕ 10.1.2024 ರಂದು ನಡೆಯಲಿರುವ ಅಕ್ರಮ ಚುನಾವಣೆಗೆ ತಾತ್ಕಾಲಿಕ ನಿರ್ಬಂಧಕಾಜ್ಞೆ ನೀಡುವಂತೆ ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಚುನಾವಣೆ ನಡೆಸುವಂತೆ ಚುನಾವಣಾ ಅಧಿಕಾರಿಗೆ ನಿರ್ದೇಶನ ನೀಡುವಂತೆ ಕೋರಿ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪರ ವಕೀಲರಾದ ನವೀನ್ ಬನ್ನಿಂತಾಯ ಅವರು ಈ ಕೆಳಗಿನ ವಾದ ಮಂಡಿಸಿದರು.
ದ.ಕ. ಜಿಲ್ಲಾ ಸಂಘದ ಪದಾಧಿಕಾರಿಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ 27.11.2024ರಂದು ನಿಗದಿಯಾಗಿರುವುದರಿಂದ ದಿನಾಂಕ 26.11.2024 ರೊಳಗೆ ನ್ಯಾಯಾಂಗ ಇಲಾಖೆಯ ಚುನಾವಣೆ ನಡೆಸಬೇಕೆಂದು ದಿನಾಂಕ 22.11.2024ರಂದು ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯವು ಹೊರಡಿಸಿದ ಅಜ್ಞಾಪಕ ನಿರ್ಬಂಧಕಾಜ್ಞೆ ಆದೇಶವನ್ನು ಪ್ರಶ್ನಿಸಿ ಎದುರುದಾರರಾದ ಜಿಲ್ಲಾ ಸಂಘ ಹಾಗೂ ಚುನಾವಣಾ ಅಧಿಕಾರಿಯವರು ಕರ್ನಾಟಕ ಹೈಕೋರ್ಟ್ ನಲ್ಲಿ ಸಲ್ಲಿಸಿದ ರಿಟ್ ಅರ್ಜಿಯನ್ನು 5 ಲಕ್ಷ ರೂಪಾಯಿ ದಂಡ ವಿಧಿಸಿ ವಜಾ ಗೊಳಿಸಿ ದಿನಾಂಕ 27.12.2024 ರೊಳಗೆ ಚುನಾವಣೆ ನಡೆಸುವಂತೆ ಆದೇಶವಾಗಿತ್ತು. ಈ ಆದೇಶದ ವಿರುದ್ಧ ಸಲ್ಲಿಸಲಾದ ವಿಶೇಷ ಅನುಮತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ದಿನಾಂಕ 2.1.2025 ರಂದು ವಜಾಗೊಳಿಸಿ ಚುನಾವಣೆ ನಡೆಸುವ ದಿನಾಂಕವನ್ನು ಹೈಕೋರ್ಟಿನಿಂದ ಪಡೆಯುವಂತೆ ನಿರ್ದೇಶಿಸಿತ್ತು.
ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಕೆ. ರಾಮಲಿಂಗಪ್ಪ ಅವರು ಹೊರಡಿಸಿದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದರು. ನ್ಯಾಯಾಲಯ ಹೊರಡಿಸಿದ ಆದೇಶವನ್ನು ಪಾಲಿಸುವ ಬದಲು ತಮ್ಮ ಇಷ್ಟಾನುಸಾರ ಚುನಾವಣೆ ನಡೆಸುವ ಎದುರುದಾರರ ಕೃತ್ಯ ನ್ಯಾಯಾಂಗ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಆದುದರಿಂದ ಅಕ್ರಮ ಚುನಾವಣೆಗೆ ತಾತ್ಕಾಲಿಕ ನಿರ್ಬಂಧಕಾಜ್ಞೆ ನೀಡಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಚುನಾವಣೆ ನಡೆಸುವಂತೆ ಎದುರುದಾರರಿಗೆ ನಿರ್ದೇಶನ ನೀಡಬೇಕೆಂದು ಪ್ರಾರ್ಥಿಸಿದರು.
ಎದುರುದಾರರ ಪರ ವಕೀಲರು ದಿನಾಂಕ 16.01.2025ರ ಒಳಗೆ ಹೈಕೋರ್ಟ್ ಗೆ ಪಾಲನಾ ವರದಿಯನ್ನು ಸಲ್ಲಿಸುವ ಅನಿವಾರ್ಯತೆ ಇರುವುದರಿಂದ ಮರು ಚುನಾವಣೆ ಏರ್ಪಡಿಸಲಾಗಿದೆ. ಆದುದರಿಂದ ಅರ್ಜಿಯನ್ನು ವಜಾ ಗೊಳಿಸಬೇಕಾಗಿ ಪ್ರಾರ್ಥಿಸಿದರು.
ಉಭಯ ಪಕ್ಷಕಾರರ ವಾದವನ್ನು ಆಲಿಸಿದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೆ. ರಾಮಲಿಂಗಪ್ಪ ಅವರು ಎದುರುದಾರರ ಪರ ವಕೀಲರ ವಾದದಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ಮನಗಂಡು ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿ ದಿನಾಂಕ 10.1.2025 ರಂದು ನಡೆಸಲು ಉದ್ದೇಶಿಸಿದ ಚುನಾವಣೆಗೆ ತಾತ್ಕಾಲಿಕ ನಿರ್ಬಂಧಕಾಜ್ಞೆ ನೀಡಿ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಹೈಕೋರ್ಟಿನಿಂದ ದಿನಾಂಕವನ್ನು ಪಡೆದು ಚುನಾವಣೆ ನಡೆಸುವಂತೆ ಎದುರುದಾರರಿಗೆ ನಿರ್ದೇಶನ ನೀಡಿದರು.
ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯವು ನೀಡಿದ ಆದೇಶದನ್ವಯ ಮಾನ್ಯ ಕರ್ನಾಟಕ ಹೈಕೋರ್ಟ್ ನಿಂದ ದಿನಾಂಕವನ್ನು ಪಡೆದು ನ್ಯಾಯಾಂಗ ಇಲಾಖೆಯ ಚುನಾವಣೆ ನಡೆಸಬೇಕಾಗುತ್ತದೆ. ಆ ಬಳಿಕ ಜಿಲ್ಲಾ ಸಂಘದ ಪದಾಧಿಕಾರಿಗಳ ಚುನಾವಣೆಯನ್ನು ಕೂಡ ಹೈಕೋರ್ಟ್ ನೀಡಿದ ವೇಳಾಪಟ್ಟಿಯಂತೆ ನಡೆಸಬೇಕಾಗುತ್ತದೆ. ಒಂದು ವೇಳೆ ನ್ಯಾಯಾಂಗ ಇಲಾಖೆಯಿಂದ ಸ್ಪರ್ಧಿಸಿದ ಅಭ್ಯರ್ಥಿಗಳು ಜಿಲ್ಲಾ ಪದಾಧಿಕಾರಿಗಳ ಚುನಾವಣೆಯಲ್ಲಿ ಜಯಗಳಿಸಿದ್ದಲ್ಲಿ ರಾಜ್ಯ ಸಂಘದ ಪದಾಧಿಕಾರಿಗಳ ಚುನಾವಣೆಯ ವೇಳಾಪಟ್ಟಿಯನ್ನು ಹೈಕೋರ್ಟಿನಿಂದ ಪಡೆದು ರಾಜ್ಯಾಧ್ಯಕ್ಷ ಹಾಗೂ ರಾಜ್ಯ ಖಜಾಂಚಿ ಸ್ಥಾನಗಳಿಗೆ ಚುನಾವಣೆ ನಡೆಸಬೇಕಾಗುತ್ತದೆ ಎಂಬುದು ಕಾನೂನು ತಜ್ಞರ ಅಭಿಮತವಾಗಿದೆ.