7:27 AM Sunday8 - September 2024
ಬ್ರೇಕಿಂಗ್ ನ್ಯೂಸ್
ಕಲಿಯುವ ಛಲದಿಂದ ಸಂಕಲ್ಪ ಸಾಧಿಸಿದ ತನ್ವಿ!: ಕೆಳ ಮಧ್ಯಮ ಕುಟುಂಬದ ವಿದ್ಯಾರ್ಥಿನಿ ಎಂಬಿಬಿಎಸ್… ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವ: ಶ್ರೀ ಬಸವ ಬುತ್ತಿ ಕಾರ್ಯಕ್ರಮಕ್ಕೆ ಚಾಲನೆ ಗಣೇಶೋತ್ಸವಕ್ಕೆ ಕಾಂಗ್ರೆಸ್‌ ಸರಕಾರ ಯಾವುದೇ ಅಡ್ಡಿ ಮಾಡಿಲ್ಲ; ಶಾಸಕ ಕಾಮತ್ ಸಂಕುಚಿತ ಭಾವನೆಯಿಂದ… ಓವರ್‌ಟೇಕ್ ವಿವಾದ: ಖಾಸಗಿ ಬಸ್ ಸಿಬ್ಬಂದಿಗಳ ನಡುವೆ ಬೀದಿ ಜಗಳ; ಪ್ರಕರಣ ದಾಖಲು ತೀರ್ಥಹಳ್ಳಿ: ಎದೆ ನೋವು ಚಿಕಿತ್ಸೆಗೆಂದು ಆಸ್ಪತ್ರೆಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಯುವಕ ರಸ್ತೆಗೆ ಬಿದ್ದು… ಭಾರಿ ಮಳೆ: ಆಗುಂಬೆ ಬಳಿಯ ಕಾರ್ ಬೈಲು ಗುಡ್ಡ ಕುಸಿತ ದಿಢೀರ್ ವಾಹನ ಸಂಚಾರ ಬದಲಾವಣೆಯಿಂದ ಸಾರ್ವಜನಿಕರಿಗೆ ತೊಂದರೆ: ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ಬಳ್ಳಾರಿಯಲ್ಲಿ ಸೆ.6ರಂದು ಗೋ ಬ್ಯಾಕ್ ಗವರ್ನರ್ ಚಳವಳಿ: ಕಪ್ಪುಪಟ್ಟಿ, ಬಾವುಟ ಪ್ರದರ್ಶನ ರಾಜಕೀಯ ರಣತಂತ್ರಕ್ಕೆ ಮುದುಡಿದ ಕಮಲ: ನಂಜನಗೂಡು ನಗರಸಭೆ ನೂತನ ಸಾರಥಿಗಳಾಗಿ ಕಾಂಗ್ರೆಸ್ ನ… ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಮಾಡಿ; ಸಾರ್ವಜನಿಕರಿಗೆ ಮಾರಕವಾಗುವ ಡಿಜೆ ಬೇಡ: ಡಿವೈಎಸ್’ಪಿ…

ಇತ್ತೀಚಿನ ಸುದ್ದಿ

ಸುಖ -ಸಮೃದ್ಧಿಯ ಗಣಿ, ಈ ವಿಷು ಹಬ್ಬದ ಕಣಿ

15/04/2022, 11:57

ಕಾಲನ ಉರುಳಿಗೆ ನಿಮಿಷವೇನು ವರುಷವೇನು….??????

ಹರುಷ ಒಂದೇ ಬಾಳಿಗೆ…..

ಸಿಹಿ ಕಹಿಯು ಬಾಳಲಿ  ಸಹಜವು…. .

ಕಹಿಯ ಮರೆತು ಸಿಹಿಯ  ನೆನಪಿರಲು …

ಬಾಳು ಬಂಗಾರವು…..

ನೋಡುತಿರಲು ಕಣ್ತುಂಬಾ ವಿಷು ಕಣಿ….

ಮನದೊಳಗೆ  ತುಂಬಲೀ  ಸಂತಸದ ಹನಿ…

ಭುವಿಯಾಗುವುದು ಸುಖ  ಸಮೃದ್ಧಿಯ ಗಣಿ…

ಹಬ್ಬಗಳು ನಮ್ಮ ನಾಡಿನ ಸಂಸ್ಕೃತಿಯ  ಪ್ರತೀಕ..ವಿಭಿನ್ನ ಸಂಸ್ಕೃತಿ,  ಭಾಷೆ  ,ವೈವಿಧ್ಯತೆಗಳು , ಆಚರಣೆಗಳನ್ನು ಹೊಂದಿರುವ ಭಾರತದಲ್ಲಿ ಹಬ್ಬಗಳು ಜನರ ಜೀವನದೊಂದಿಗೆ ಹಾಸುಹೊಕ್ಕಾಗಿವೆ.. 

ಹಬ್ಬಗಳು ಎಲ್ಲರ ಮನೆ-ಮನಗಳಲ್ಲಿ ಸಂತಸವನ್ನು ತುಂಬುತ್ತವೆ..

ಹಿಂದೂ ಧಾರ್ಮಿಕ ಆಚರಣೆಯ ಪ್ರಕಾರ ಸೌರಮಾನ ಯುಗಾದಿ ಆಚರಣೆಯು ಹಿಂದೂಗಳ ಪವಿತ್ರ ಆಚರಣೆಯಲ್ಲಿ ಒಂದು. ಕೆಲವೆಡೆ ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ ಕೆಲವು ಕಡೆ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ಸೌರಮಾನ ಯುಗಾದಿಯನ್ನು ಬಿಸು, ವಿಷು ಎಂದೂ ಕರೆಯುತ್ತಾರೆ.

ಸೌರಮಾನ ಯುಗಾದಿಯು ಹೊಸ ವರ್ಷದ ಆರಂಭವನ್ನು ಸೂಚಿಸುವುದು.  ಸೂರ್ಯನು ಮೀನ ರಾಶಿಯಿಂದ ಮೇಷ ರಾಶಿಯ ಮನೆಗೆ ಪ್ರವೇಶ ಪಡೆಯುವುದು. ಸೂರ್ಯನು ಒಂದು ಮನೆಯಿಂದ ಇನ್ನೊಂದು ಮನೆಗೆ ಚಲಿಸುವುದರಿಂದಲೂ ದ್ವಾದಶ ರಾಶಿಯ ಮೇಲೆ ಆಳವಾದ ಪ್ರಭಾವ ಬೀರುವುದು. ಧಾರ್ಮಿಕ ಆಚರಣೆಯ ಪ್ರಕಾರ ಸೌರಮಾನ ಯುಗಾದಿ ಆಚರಣೆಯು ಹಿಂದೂಗಳ ಪವಿತ್ರ ಆಚರಣೆಯಲ್ಲಿ ಒಂದು. 

ಹಿಂದೂಗಳ ದೇವರಲ್ಲಿ ಸೂರ್ಯನಿಗೆ ವಿಶೇಷ ಸ್ಥಾನಮಾನವಿದೆ..ಸೂರ್ಯನು ಹೆಮ್ಮೆ, ಬೆಳಕು, ಶಾಖ, ಉಷ್ಣತೆ, ಗೌರವವನ್ನು ಸಂಕೇತಿಸುವನು. ಸೂರ್ಯನ ಪ್ರಭಾವ ಉತ್ತಮವಾಗಿದ್ದರೆ ವ್ಯಕ್ತಿ ಈ ಎಲ್ಲಾ ವಿಷಯದಲ್ಲೂ ಧನಾತ್ಮಕ ಫಲವನ್ನು ಪಡೆದುಕೊಳ್ಳುವನು.

ಸೌರಮಾನ ಯುಗಾದಿಯಂದು  ಸಂಕ್ರಾಂತಿಯ ಸಮಯಕ್ಕಿಂತ ಮೊದಲು ಹತ್ತು ನಿಮಿಷಗಳು ಹಾಗೂ ಸಂಕ್ರಾಂತಿ ಸಮಯದ ನಂತರದ 10 ನಿಮಿಷಗಳು ಅತ್ಯಂತ ಪವಿತ್ರ ಹಾಗೂ ಶ್ರೇಷ್ಠವಾದ ಸಮಯ ಎಂದು ಹೇಳಲಾವುದು. ಈ ವಿಶೇಷ ಸಮಯದಲ್ಲಿ ಜನರು ಕೋರಿಕೊಂಡ ಪ್ರಾರ್ಥನೆ ಹಾಗೂ ಅಭಿಲಾಷೆಗಳು ಸುಲಭವಾಗಿ ನೆರವೇರುವುದು ಎಂಬ ನಂಬಿಕೆಯಿದೆ ..

ಪರಶುರಾಮನ ಸೃಷ್ಟಿಯಾದ ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ತುಳು ಭಾಗ ಅಂದರೆ ಬ್ರಹ್ಮಾವರದ ಸೀತಾ ನದಿಯವರೆಗಿನ ಭಾಗದಲ್ಲಿ ಹೊಸವರ್ಷ ಸೌರಮಾನ ಯುಗಾದಿ ಅಥವಾ ವಿಷು(ಬಿಸು) ಆಗಿರುತ್ತದೆ.

ವಿಷುವಿನಂದು ತುಳುನಾಡಿನ ಜನತೆ ಬಹುಬೇಗ ಎದ್ದು. ಮಿಂದು, ದೇವರಿಗೆ ಪೂಜೆ ಸಲ್ಲಿಸುತ್ತಾರೆ. ತಾವು ಬೆಳೆದ ಎಲ್ಲ ತರಕಾರಿ ಹೂವು ಹಣ್ಣುಗಳನ್ನು ದೇವರ ಮುಂದಿಟ್ಟು, ಒಂದು ಕನ್ನಡಿಯನ್ನಿಟ್ಟು, ದೀಪವನ್ನು ಉರಿಸಿಡುತ್ತಾರೆ. ಇದನ್ನು ಹಿಂದಿನ ದಿನ ಸಂಜೆಯೇ ಮಾಡುತ್ತಾರೆ. ಬೆಳಗ್ಗೆ ಎದ್ದು ಮೊದಲಾಗಿ ಇದನ್ನೇ ನೋಡುತ್ತಾರೆ. ಇದನ್ನೇ ವಿಷು ಕಣಿ ಎನ್ನುವುದು. 

ಕಣಿಯಲ್ಲಿ ತೆಂಗಿನಕಾಯಿ, ವೀಳ್ಯದೆಲೆ,ದೇವರ ವಿಗ್ರಹ, ಫಲ ವಸ್ತುಗಳು, ನವ ಧಾನ್ಯ, ಹೊಸಬಟ್ಟೆ, ಧನ, ಕನಕ ,ಅಡಕೆ, ಹಳದಿ ಬಣ್ಣದ  ಕನ್ನ ಹೂ, ಅರಶಿನ ,ಕುಂಕುಮ ಅಕ್ಕಿ, ಲಿಂಬೆ, ಬಂಗಾರ ಬಣ್ಣದ ಸೌತೆಕಾಯಿ, ಹಲಸಿನ ಹಣ್ಣು, ಒಂದು ಕನ್ನಡಿ, ಪಂಚಾಂಗ ಪುಸ್ತಕ, ಮತ್ತು ನಾಣ್ಯಗಳು ಹಾಗೂ ನೋಟುಗಳು ಇರುವುದು. ಈ ಎಲ್ಲಾ ವಸ್ತುಗಳನ್ನು ಅಗಲವಾದ ಒಂದು ಪಾತ್ರೆಯಲ್ಲಿ ಹಾಕಲಾಗುತ್ತದೆ.ಇದನ್ನು ಮಲಯಾಳದಲ್ಲಿ “ಉರುಳಿ” ಎಂದು ಕರೆಯಲಾಗುತ್ತದೆ. 

ವಿಷುವಿನ ದಿನ ಪ್ರಾತಃ ಕಾಲ ಎದ್ದು ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ಗುರು ಹಿರಿಯರಿಗೆ ವಂದಿಸಿ, ಆಶೀರ್ವಾದ ಪಡೆದು ಆಮೇಲೆ ಕಣಿ ಕಾಣಬೇಕು. ಕಣಿಕಂಡ ನಂತರ ಕನ್ನಡಿಯಲ್ಲಿ ಮುಖ ನೋಡಬೇಕು. ಕನ್ನಡಿಯಲ್ಲಿ ಮುಖ ನೋಡಿದರೆ ಆಯುಷ್ಯವು ಹೆಚ್ಚುತ್ತದೆ, ಸಂಪತ್ತು ಉಂಟಾಗುತ್ತದೆ, ಪಾಪವು ದೂರವಾಗುತ್ತದೆ ಎಂಬ ನಂಬಿಕೆ ಇದೆ.

ವರ್ಷದ ಮೊದಲ ದಿನ ಈ ಕಣಿಯನ್ನು ನೋಡುವುದು ಪ್ರಯೋಜನದಾಯಕ, ಲಾಭದಾಯಕ ಎಂಬ ನಂಬಿಕೆ.

ವಿಷು ಕಣಿಯು ತುಂಬಾ ಅದೃಷ್ಟ ಹಾಗೂ ಸಮೃದ್ಧಿಯ ಸಂಕೇತ ಆಗಿದೆ. ಕಣಿಯನ್ನು ಮೊದಲು ನೋಡಿದರೆ ಆ ಹೊಸ ವರ್ಷದಲ್ಲಿಸಂಪೂರ್ಣವಾಗಿ ಸಮೃದ್ಧಿ ಸಿಗುವುದು ಎಂದು ಭಕ್ತರು ನಂಬುವರು.ಹತ್ತಿರದ ದೇವಾಲಯಗಳಿಗೂ ಹೋಗಿ ಅಲ್ಲಿ ಇಟ್ಟ ಕಣಿಯನ್ನು ಕಾಣುವುದೂ, ದೇವರಲ್ಲಿ ಪ್ರಾರ್ಥಿಸುವುದು, ಯಶಸ್ಸಿಗಾಗಿ ಬೇಡಿಕೊಳ್ಳುವುದು ನಡೆದು ಬಂದಿದೆ.

ದೇವರಿಗೆ ಯಾವತ್ತೂ ಅರ್ಪಿಸದ ಕೊನ್ನೆ ಹೂ (ಕಕ್ಕೆಹೂ)ವನ್ನು ಕಾಣಿಕೆಯಾಗಿ ಈ ದಿನ ಅರ್ಪಿಸುತ್ತಾರೆ. ಮಲಯಾಳದಲ್ಲಿ ಕಣಿಕೊನ್ನ ಎಂದು ಕರೆಯುವ ಕಕ್ಕೆ ಹೂ ದೊಡ್ಡ ಐತಿಹ್ಯವನ್ನು ಹೊಂದಿದೆ. ಭೂಮಿಗೆ ಆಗಮಿಸಿದ ಐಶ್ವರ್ಯ ದೇವತೆಯಾದ ಲಕ್ಷ್ಮೀದೇವಿ ಮೀನ ಮಾಸದ ಬಿಸಿಲಿನ ಕಾಠಿಣ್ಯದಲ್ಲಿ ದಣಿದು ಒಂದು ಮರದ ನೆರಳಲ್ಲಿ ಕುಳಿತುಕೊಂಡು, ವಿಶ್ರಾಂತಿ ಪಡೆದುಕೊಂಡಿದ್ದಳು. ತನಗೆ ವಿಶ್ರಾಂತಿಗಾಗಿ ನೆರಳು ನೀಡಿದ ಮರವನ್ನು ದೇವಿ ಮುಟ್ಟಿದಾಗ ತಕ್ಷ ಣ ಹೂಗಳು ಆರಳಿರುವುದಾಗಿ ಅದರಂತೆ ಕಡು ಬಿಸಿಲಲ್ಲೂ ಕಕ್ಕೆ ಹೂ ಬಿಟ್ಟು ಸುಂದರವಾಗಿರುವುದು ಎಂಬುದು ನಂಬಿಕೆ..
o
ವಿಷು ಕಣಿ  ನೋಡುವುದರಿಂದ  ವರ್ಷವಿಡಿ ಅವರಿಗೆ ಒಳ್ಳೆಯ ಅದೃಷ್ಟ ಮತ್ತು ಸಮೃದ್ಧಿ ಸಿಗುವುದುಎಂಬ ನಂಬಿಕೆ ಇದೆ….

ಸೌರಮಾನ ಯುಗಾದಿಯ ಹೊಸವರ್ಷದ ಪರ್ವದಲ್ಲಿ ವಿಷು ಕಣಿಯನ್ನು ನೋಡುವುದರೊಂದಿಗೆ ಸಮೃದ್ಧಿಯು ಉಂಟಾಗಲಿ..ಭೂಮಿಯಲ್ಲಿ ಸುಖ ಶಾಂತಿ, ಸಂಪತ್ತು ನೆಲೆಸಲಿ.. ಪರಸ್ಪರ ಪ್ರೀತಿ , ನೆಮ್ಮದಿಯಿಂದ ಎಲ್ಲರೂ ಜೀವನವನ್ನು ನಡೆಸುವಂತಾಗಲಿ…ಹಬ್ಬಗಳು ಯಾವುದೇ ಇರಲಿ, ಆಚರಣೆ ಹೇಗೆಯೇ ಇರಲಿ….. 

ಹಬ್ಬಗಳು ಮನಸ್ಸು ಮನಸ್ಸುಗಳನ್ನು ಬೆಸೆಯಬೇಕು.  ಮನೆಮನೆಗಳನ್ನು ಬೆಳಗಬೇಕು.

ಸಮಾಜದಲ್ಲಿ  ಸಾಮರಸ್ಯವನ್ನು ಮೂಡಿಸಬೇಕು ಎಂಬುದೇ ಹಬ್ಬಗಳ ಆಚರಣೆಯ ಉದ್ದೇಶವಾಗಬೇಕು..

ಹೊಸ ವರ್ಷವು ಎಲ್ಲರಿಗೂ ಹೊಸ ಚೈತನ್ಯವನ್ನು ತುಂಬುತ್ತಾ ಹೊಸಯುಗಕ್ಕೆ ನಾಂದಿಯನ್ನು ಹಾಡಲಿ ಎಂಬ  ಆಶಯದೊಂದಿಗೆ ಸೌರಮಾನ ಯುಗಾದಿ ( ವಿಷು)  ಹಬ್ಬವನ್ನು ಆಚರಿಸೋಣ…

✍️ಜಯಲಕ್ಷ್ಮೀ ಜಿ ಕುಂಪಲ ಮಂಗಳೂರು

ಇತ್ತೀಚಿನ ಸುದ್ದಿ

ಜಾಹೀರಾತು