ಇತ್ತೀಚಿನ ಸುದ್ದಿ
ಸುಗಮ ಸಂಚಾರಕ್ಕಿಲ್ಲ ಇಲ್ಲಿ ಮಾರ್ಗಸೂಚಿ!: ನಾರಾಯಣಗುರು ವೃತ್ತದಿಂದ-ಗಾಣದಪಡ್ಪು ಜಂಕ್ಷನ್‌ವರೆಗೆ ಡ್ರೈವಿಂಗ್ ಭಾರಿ ಡೇಂಜರ್
15/07/2023, 11:53
ಯಾದವ ಕುಲಾಲ್ ಅಗ್ರಬೈಲು ಬಂಟ್ವಾಳ
info.reporterarnataka@gmail.com
ಬಿ.ಸಿ.ರೋಡ್-ಕಡೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ವೃತ್ತದಿಂದ ಕೆಲವೇ ಮೀಟರ್ ಅಂತರದಲ್ಲಿ ಗಾಣದಪಡ್ಪು ವರೆಗೆ ಡೇಂಜರ್ ಝೋನ್ ಪ್ರದೇಶವಾಗಿ ಪರಿವರ್ತನೆಗೊಳ್ಳುತ್ತಿದೆ.
ಸುಗಮ ಸಂಚಾರಕ್ಕೆ ಇಲ್ಲಿ ಯಾವುದೇ ಮಾರ್ಗಸೂಚಿ ಇಲ್ಲ. ಪರಿಣಾಮ ಮತ್ತೆ ಮತ್ತೆ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ.
ಅತೀ ವೇಗದಿಂದ ವಾಹನ ಚಲಾಯಿಸುವ ಕಾರಣ ಆಗುವ ಅಪಘಾತವನ್ನು ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ಅಳವಡಿಸದ ಟ್ರಾಫಿಕ್ ಪೊಲೀಸ್ ಇಲಾಖೆ ಒಂದೆಡೆಯಾದರೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ತಮ್ಮ ಮನೆಗಳಿಗೆ ಹೋಗುವ ಪಾದಚಾರಿಗಳು ಈ ರಸ್ತೆಯಲ್ಲಿ ಹೋಗುತ್ತಿದ್ದರೂ ಪುಟ್ ಪಾತ್ ನಿರ್ಮಿಸದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಇನ್ನೊಂದೆಡೆ ಅಪಘಾತಕ್ಕೆ ತಮ್ಮ ಕಾಣಿಕೆ ನೀಡಿವೆ.
ಬಿ.ಸಿ.ರೋಡು ಗಾಣದಪಡ್ಪುವಿನಿಂದ ಪುಂಜಾಲಕಟ್ಟೆ-ಬಿ.ಸಿ.ರೋಡ್ ಚತುಷ್ಪದ ರಸ್ತೆ ದೂರದ ಪ್ರಯಾಣಕ್ಕೆ ಯೋಗ್ಯವಾದ ರೀತಿಯಲ್ಲಿ ಕಾಮಗಾರಿಯಾಗಿದೆ. ಆದರೆ ಅದೇ ಬಿ.ಸಿ.ರೋಡ್ ಮುಖ್ಯ ವೃತ್ತದಿಂದ ಗಾಣದಪಡ್ಪು ವರೆಗಿನ ಕೆಲವೇ ಮೀಟರ್ ಅಂತರದ ರಸ್ತೆಯು ಈಗ ಅಪಾಯಕಾರಿ ರಸ್ತೆಯಾಗಿ ಪರಿಣಮಿಸಿದೆ. ಮುಖ್ಯ ವೃತ್ತದಿಂದ ನಾಲ್ಕು ಕವಲುಗಳಾಗಿ ಬಂಟ್ವಾಳ ಪೇಟೆ ರಸ್ತೆ, ಬೆಂಗಳೂರು ರಸ್ತೆ, ಪಾಣೆಮಂಗಳೂರು ಪೇಟೆ ರಸ್ತೆಯನ್ನು ಒಳಗೊಂಡಂತೆ ನಾಲ್ಕು ರಸ್ತೆಗಳು ಇದ್ದು, ಬಿ.ಸಿ.ರೋಡ್-ಕಡೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರಂತರ ವಾಹನ ಸಂಚರಿಸುವ ಪ್ರದೇಶವಾಗಿರುತ್ತದೆ. ಮಂಗಳೂರು, ಕಾಸರಗೋಡು, ಮೈಸೂರು, ಬೆಂಗಳೂರಿಂದ ಪ್ರವಾಸಿಗಳಿಗೆ ಧರ್ಮಸ್ಥಳ, ದಾವಣಗೆರೆ, ಮೂಡಬಿದ್ರೆ, ಕಾರ್ಕಳ, ಚಿಕ್ಕಮಗಳೂರು ತೆರಳಲು ಇದೇ ಮುಖ್ಯರಸ್ತೆಯಾಗಿರುತ್ತದೆ. ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಈ ಭಾಗದಲ್ಲಿ ಬಾರೀ ಹೆದರಿಕೆಯಿಂದಲೇ ಸಂಚಾರ ಮಾಡುತ್ತಿದ್ದಾರೆ.
ಗಾಣದಪಡ್ಪು ಬಳಿ ಏಕ ಪಥ ರಸ್ತೆಯಾಗಿದ್ದು ನಾರಾಯಣಗುರು ಸಭಾಂಗಣದಿಂದ ಆರಾಮವಾಗಿ ಪ್ರಯಾಣಿಸಬಹುದಾದರೂ, ಮತ್ತೊಂದು ರಸ್ತೆಯಲ್ಲಿ ಧರ್ಮಸ್ಥಳ-ಮೂಡಬಿದ್ರೆ ರಸ್ತೆಗಳಿಂದ ಬರುವ ವಾಹನಗಳಿಗೆ ರಸ್ತೆಯಲ್ಲಿ ಪ್ರಯಾಣ ಒಳ್ಳೆಯದಾದರೂ ಗಾಣದಪಡ್ಪು ಬಳಿಬರುವಾಗ ಗಲಿಬಿಲಿಯಾಗುತ್ತಾರೆ. ಇಲ್ಲಿ ಯಾವುದೇ ಬ್ಯಾರಿಕೇಡ್ ಇಲ್ಲ, ಮುಂದುಗಡೆ ಒಂದೇ ಪಥದಲ್ಲಿ ಎರಡೂ ಕಡೆಯ ವಾಹನ ಸಂಚಾರದ ಗುರುತೂ ಇಲ್ಲ, ಹತ್ತಿರದಲ್ಲೇ ಪೆಟ್ರೋಲ್ ಪಂಪಿನಿಂದ ವಾಹನಗಳು ಹೆದ್ದಾರಿಗೆ ಬರುವುದು ಎಲ್ಲವೂ ಒಂದೇ ಕಡೆಯಾಗುತ್ತದೆ.
ರಸ್ತೆಯೇ ಮಾರುಕಟ್ಟೆಯಾಗಿರುವ ಬಿ.ಸಿ.ರೋಡ್ ವೃತ್ತ :
ನಾರಾಯಣಗುರು ವೃತ್ತದ ಬಳಿ ಸಾಲು ಸಾಲಾಗಿ ಚತ್ರಿ ಮಾರುವವರು, ರೈನ್‌ಕೋಟ್ ವ್ಯಾಪಾರಿಗಳು, ಪ್ಲಾಸ್ಟಿಕ್ ಬಕೆಟ್, ಚೆಯರ್ ಉತ್ಪನ್ನಗಳ ಮಾರಾಟಗಾರರು, ನೇರಳೆಹಣ್ಣು, ರೋಂಬಟ್ ಹಣ್ಣು ಹಂಪಲುಗಳನ್ನು ಮಾರುವವರು ಗ್ರಾಹಕರ ಗಮನ ಅವರತ್ತ ಸೆಳೆಯಲು ಹೆದ್ದಾರಿ ರಸ್ತೆಯಲ್ಲೇ ಮಾರಾಟಕ್ಕಿಟ್ಟಿದ್ದಾರೆ. ವಾಹನ ಸವಾರರು ಹೆದ್ದಾರಿ ರಸ್ತೆಯಲ್ಲೇ ನಿಲ್ಲಿಸಿ ವ್ಯವಹಾರ ಮಾಡುತ್ತಾ ಇರುತ್ತಾರೆ. ನಾರಾಯಣ ಗುರು ವೃತ್ತದ ಬಳಿ ಇರುವ ಪೊಸಳ್ಳಿ ಕುಲಾಲ ಭವನ ರಸ್ತೆಯ ತಿರುವಿನಲ್ಲೂ ಸಾಲು ಸಾಲಾಗಿ ವಾಹನಗಳು ನಿಂತಿರುವುದರಿಂದ ವಾಹನ ಸವಾರರಿಗೆ ಸ್ಥಳದ ಇಕ್ಕಟ್ಟು ಹಾಗೂ ಎದುರುಗಡೆ ಬರುವ ವಾಹನಗಳ ಬರುವಿಕೆ ಗೊತ್ತಾಗದೇ ಗೊಂದಲವಾಗುತ್ತದೆ. ಹೀಗಾಗಿ ಅಸ್ತವ್ಯಸ್ತವಾಗಿರುವ ರಸ್ತೆಯಿಂದ ನಿರಂತರ ಅಫಘಾತಗಳು ಸಂಭವಿಸುತ್ತಾ ಇರುತ್ತದೆ. ಈ ಅವ್ಯವಸ್ಥೆಯಿಂದಾಗಿ ಕೆಲವು ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳ ಸವಾರರರು ಮೃತರಾದ ಘಟನೆಯೂ ನಡೆದಿದೆ.
ಟ್ರಾಫಿಕ್ ಪೊಲೀಸ್ ವೈಫಲ್ಯ:
ನಿರಂತರ ವಾಹನಗಳ ಸಂಚಾರವಿರುವ ಈ ನಾರಾಯಣ ಗುರು ವೃತ್ತದಿಂದ ಗಾಣದಪಡ್ಪು ವರೆಗಿನ ವರೆಗೆ ಟ್ರಾಫಿಕ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ, ವೃತ್ತದ ಬಳಿ ಅಥವಾ ಗಾಣದ ಪಡ್ಪು ವೃತ್ತಕ್ಕೆ ಬರುವ ಮುಂಚೆ ಯಾವುದೇ ರಸ್ತೆ ವಿಭಜಕ ಇದೆ ಎಂಬ ಮಾರ್ಗ ಸೂಚಿ ಅಳವಡಿಸಿಲ್ಲ, ಯಾವುದೇ ಬ್ಯಾರಿಕೇಡ್ ಅಳವಡಿಸಿಲ್ಲ, ನಿರಂತರ ಅಪಘಾತವಾಗುವ ಸ್ಥಳವಾದರೂ ಇಲ್ಲಿ ಸುಗಮ ಸಂಚಾರಕ್ಕೆ ಯಾವುದೇ ಸಿಬ್ಬಂದಿಯನ್ನು ನೇಮಿಸಿರುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಜನರಿಗಾಗಿ ಇಲ್ಲವೇ ವಾಹನ ಸವಾರರಿಗೆ ಪ್ರಯೋಜನವಾಗುವಂತಹ ಕೆಲಸ ಮಾಡಿಲ್ಲ. ನೂತನವಾಗಿ ರಸ್ತೆಯಿಂದ ಪಾಕ್೯ ಬಳಿ ಸ್ಥಳಾವಕಾಶ ಇದ್ದರೂ ಸುಗಮ ಸಂಚಾರಕ್ಕೆ ರಸ್ತೆ ಅಗಲೀಕರಣ ಮಾಡಿಲ್ಲ.
ಬಿ.ಸಿ.ರೋಡ್ – ಪುಂಜಾಲಕಟ್ಟೆ ರಸ್ತೆಯು ಈಗ ನಿರಂತರ ವಾಹನ ದಟ್ಟಣೆ ಇರುವ ರಸ್ತೆಯಾಗಿದೆ. ನಾರಾಯಣ ಗುರು ವೃತ್ತದಿಂದ ಗಾಣದಪಡ್ಪು ತಾತ್ಕಾಲಿಕವಾಗಿಯಾದರೂ ರಸ್ತೆಯನ್ನು ಅಗಲೀಕರಣ ಮಾಡಬೇಕಾಗಿದೆ. ಇನ್ನು ಮುಂದೆಯೂ ಬಿ.ಸಿ.ರೋಡ್ – ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಜಾಸ್ತಿಯಾಗಲಿದೆ. ಶಾಶ್ವತ ಪರಿಹಾರಕ್ಕಾಗಿ ಈ ಪ್ರವೇಶದಲ್ಲಿ ಅಂಡರ್‌ಪಾಸ್ ವ್ಯವಸ್ಥೆಯ ಯೋಜನೆಯನ್ನು ರೂಪಿಸುವುದು ಒಳ್ಳೆಯದು ಎಂದು ಸಂಜೀವ ಪೂಜಾರಿ (ಗುರುಕೃಪಾ, ಅಧ್ಯಕ್ಷರು, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ರಿ.) ಹೇಳುತ್ತಾರೆ.
ಬಿ.ಸಿ.ರೋಡ್ ವೃತ್ತದ ಬಳಿಯ ಪೊಸಳ್ಳಿ ರಸ್ತೆಯ ಬಳಿ ಅಡ್ಡಲಾಗಿ ಯಾವಾಗಲೂ ವಾಹನ ನಿಲುಗಡೆ ಮಾಡಿರುತ್ತಾರೆ. ಕುಲಾಲ ಮಠ, ದೈಪಲ, ಕುಲಾಲ ಸಮುದಾಯ ಭವನ ಈ ಪ್ರದೇಶಕ್ಕೆ ತೆರಳುವ ರಸ್ತೆಯ ಅಡ್ಡಲಾಗಿ ವಾಹನಗಳನ್ನು ನಿಲುಗಡೆ ಮಾಡುತ್ತಾರೆ. ಇಲ್ಲಿಯೂ ಬ್ಯಾರಿಕೇಡ್ ಅಳವಡಿಸಬೇಕು ಎಂದು ನಾರಾಯಣ ಸಿ. (ಪೆರ್ನೆ, ಅಧ್ಯಕ್ಷರು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ರಿ., ಪೊಸಳ್ಳಿ) ಅಭಿಪ್ರಾಯ ಪಡುತ್ತಾರೆ.
ನಾರಾಯಣ ಗುರು ಹಾಲ್ ಬಳಿ ಇರುವ ಡಿವೈಡರನ್ನು ಪಾರ್ಕ್‌ತನ ಅಗಲೀಕರಣ ಮಾಡಿ ಧರ್ಮಸ್ಥಳದಿಂದ ಬರುವ ವಾಹನಗಳನ್ನು ಈ ರಸ್ತೆಯಾಗಿ ಸಂಚರಿಸುವ ವ್ಯವಸ್ಥೆ ಮಾಡಿದರೆ ರಸ್ತೆಯಲ್ಲಾಗುವ ಜಂಜಾಟವನ್ನು ತಾತ್ಕಾಲಿಕವಾಗಿ ತಪ್ಪಿಸಬಹುದು. ಈಗ ನಿರಂತರವಾಗಿ ಸಣ್ಣಪುಟ್ಟ ಅಪಘಾತಗಳು ನಡೆಯಿತ್ತಿದ್ದು ಮುಂದೆ ದೊಡ್ಡ ಅನಾಹುತ ಆಗುವವರೆಗೆ ಎಚ್ಚೆತ್ತುಕೊಳ್ಳುವುದು ಒಳ್ಳೆಯದು ಎಂದು ಸುನೀಲ್ ಬಿ., (ಅಪೂರ್ವ, ಉದ್ಯಮಿ ಅಪೂರ್ವ ಜ್ಯುವೆಲ್ಲರ್‍ಸ್, ಬಿ.ಸಿ.ರೋಡ್) ಅಭಿಪ್ರಾಯಪಡುತ್ತಾರೆ.
ಬದಲಾವಣೆ ಏನಾಗಬೇಕು : ಶೀಘ್ರದಲ್ಲೇ ಬ್ಯಾರಿಕೇಡ್ ಅಗತ್ಯ. ಗಾಣದಪಡ್ಪುವಿನಿಂದ ಬಂಟ್ವಾಳ ಪೇಟೆಗೆ ಹೋಗುವ ರಸ್ತೆ ಪಾಕ್೯ನ ಎದುರುಗಡೆ ವರೆಗೆ ರಸ್ತೆ ಸುಗಮ ಸಂಚಾರಕ್ಕಾಗಿ ಅಗಲೀಕರಣ ಮಾಡುವುದು. ವೃತ್ತದ ಬಳಿ ಪಾಕ್೯ ಹತ್ತಿರ, ಪೊಸಳ್ಳಿ ರಸ್ತೆಯ ಬಳಿ ಘನ ವಾಹನಗಳ ನಿಲುಗಡೆ ನಿಷೇಧಿಸುವುದು, ಸುಗಮ ಸಂಚಾರಕ್ಕೆ ಟ್ರಾಫಿಕ್ ಸಿಬ್ಬಂದಿ ನೇಮಿಸುವುದು, ಪಾದಚಾರಿಗಳಿಗೆ ಪುಟ್‌ಪಾತ್ ನಿರ್ಮಾಣ ಮಾಡುವುದು. ಸೂಚನಾ ಫಲಕ ಅಳವಡಿಸುವುದು. ಇಷ್ಟೆಲ್ಲ ಬದಲಾವಣೆಗಳಾದರೆ ಮಾತ್ರ ಈ ಹೆದ್ದಾರಿಯು ಉತ್ತಮ ರಸ್ತೆಯಾಗುವುದರಲ್ಲಿ ಸಂಶಯವಲ್ಲ.
ಬಿ.ಸಿ.ರೋಡ್ - ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ನೂತನ ರಸ್ತೆಯಲ್ಲಿ ಗ್ರಾಮೀಣ ಭಾಗಗಳಿಗೆ ತೆರಳುವ ಒಳ ರಸ್ತೆಗಳ ಬಳಿಯೂ ಬ್ಯಾರಿಕೇಡ್ ಅಗತ್ಯವಾಗಿದೆ. ನಾರಾಯಣಗುರು ಮಂದಿರದಿಂದ ಕೆಲವೇ ದೂರದಲ್ಲಿರುವ ಮೈರಾನ್‌ಪಾದೆ, ಕಾಮಾಜೆ, ಸರಕಾರಿ ಪದವಿ ಕಾಲೇಜು ರಸ್ತೆಯಲ್ಲಿ ಜಂಕ್ಷನ್‌ನಲ್ಲಿ, ಭಂಡಾರಿಬೆಟ್ಟು ಬಳಿಯ ಕಲಾಯಿ ಜಂಕ್ಷನ್‌ನಲ್ಲಿ, ಅಜೆಕಲ ಬಳಿಯ ಕೆಂಪುಗುಡ್ಡೆ ಜಂಕ್ಷನ್‌ನಲ್ಲಿ ಬ್ಯಾರಿಕೇಡ್ ಅಳವಡಿಸಬೇಕಾಗುತ್ತದೆ.