ಇತ್ತೀಚಿನ ಸುದ್ದಿ
ದಾವಣಗೆರೆಯಲ್ಲಿ ಎಸ್‌ಎಸ್ ಕೇರ್ ಟ್ರಸ್ಟ್ ವಿದ್ಯಾರ್ಥಿ ವಿಭಾಗದ “ಆರಂಭ”ಕ್ಕೆ ಚಾಲನೆ
03/09/2025, 20:14
ವಿದ್ಯಾರ್ಥಿಗಳಿಗೆ ನಾಯಕತ್ವ,ಸೇವಾಗುಣ ಬೋಧಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆ(reporterkarnataka): ಎಸ್‌ಎಸ್ ಕೇರ್ ಟ್ರಸ್ಟ್ ಆರೋಗ್ಯ ಸೇವೆ ಹಾಗೂ ಸಮಾಜಮುಖಿ ಚಟುವಟಿಕೆಗಳ ಮೂಲಕ ಜನರ ಜೀವನದಲ್ಲಿ ಆಶಾಕಿರಣವಾಗಿದೆ. ಈ ಸಂಸ್ಥೆಯ ವಿಶೇಷತೆಯೆಂದರೆ ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಮುಂದೆ ಬಂದು ಟ್ರಸ್ಟ್ ಜೊತೆಗೂಡಿ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವುದು.ಇದು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಕೌಶಲ್ಯ ಹಾಗೂ ಸೇವಾಭಾವ ಬೆಳೆಸುವ ಪಾಠಶಾಲೆಯಾಗಿದೆ ಎಂದು ಸಂಸದರು ಹಾಗೂ ಎಸ್ ಎಸ್ ಕೇರ್ ಟ್ರಸ್ಟ್ ನ ಲೈಫ್ ಟ್ರಸ್ಟಿಗಳಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ಬಾಪೂಜಿ ಆಡಿಟೋರಿಯಂನಲ್ಲಿ ಎಸ್ ಎಸ್ ಕೇರ್ ಟ್ರಸ್ಟ್ ನ ಸ್ಟೂಡೆಂಟ್ ವಿಂಗ್ ನಿಂದ ಬುಧವಾರ ಆಯೋಜಿಸಿದ್ದ “ಆರಂಭ” ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದರು ಕಳೆದ ಒಂದು ವರ್ಷದ ಅವಧಿಯಲ್ಲಿ ವಿದ್ಯಾರ್ಥಿ ವಿಭಾಗವು ಕೈಗೊಂಡಿದ್ದ “ಕ್ಯಾನ್ಸರ್ ಕಾಳಜಿ”, “ಸಂಸಾಧನದಂತಹ” ಕಾರ್ಯಕ್ರಮಗಳ ಮೂಲಕ ಆರೋಗ್ಯ ಸಮಸ್ಯೆಗಳ ಮಾನವೀಯ ಅಂಶಗಳನ್ನು ಶ್ಲಾಘಿಸಿದರು. “ಜಲ ಉಳಿಸಿ – ಜೀವ ಉಳಿಸಿ” ಅಭಿಯಾನ, “ಟ್ರೀ ಆಫ್ ಹೋಪ್” ಮೂಲಕ 200 ಗಿಡಗಳ ನೆಡುವ ಕಾರ್ಯ, ರಕ್ತದಾನ ಶಿಬಿರ, ವಯನಾಡ್ ಭೂಕುಸಿತ ಪರಿಹಾರ ಕಾರ್ಯಗಳಲ್ಲಿ ಸಹಾಯ ಹಾಗೂ ಅಗತ್ಯ ಸಾಮಗ್ರಿಗಳನ್ನು ಕಳುಹಿಸುವಂತಹ ನೂರಾರು ಕಾರ್ಯಗಳಲ್ಲಿ ತೊಡಗಿಕೊಂಡು ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ತೋರಿಸಿದ್ದಾರೆ ಎಂದು ಪ್ರಶಂಸಿಸಿದರು.
ಅಲ್ಲದೆ, ಅನಾಥಾಶ್ರಮ, ವೃದ್ಧಾಶ್ರಮ ಮತ್ತು ದೃಷ್ಟಿಹೀನ ಶಾಲೆಗಳಿಗೆ ಭೇಟಿ ನೀಡಿ ನೆರವು ನೀಡಿದ ವಿದ್ಯಾರ್ಥಿಗಳ ಕಾರ್ಯವು ಹೃದಯಸ್ಪರ್ಶಿಯಾಗಿದೆ ಎಂದು ಹೇಳಿದರು. “ನನ್ನ ಜನ್ಮದಿನದಂದು ವಿದ್ಯಾರ್ಥಿಗಳು ದೃಷ್ಟಿಹೀನ ಮಕ್ಕಳಿಂದ ಬ್ರೈಲ್‌ನಲ್ಲಿ ಬರೆದ ಶುಭಾಶಯ ಸಂದೇಶವನ್ನು ಕೊಟ್ಟ ಕ್ಷಣವನ್ನು ಎಂದಿಗೂ ಮರೆಯಲಾಗದು” ಎಂದು ಅವರು ಭಾವುಕರಾದರು.
ಎಸ್ ಎಸ್ ಕೇರ್ ಟ್ರಸ್ಟ್ ನ ವಿದ್ಯಾರ್ಥಿ ವಿಭಾಗ ಆಯೋಜಿಸಿದ ಜ್ಞಾನದಗೋಡೆ ಕುರಿತು ಶ್ಲಾಘಿಸಿದ ಸಂಸದರು ಎಲ್ಲಾ ಸಂಸ್ಥೆಗಳಲ್ಲಿ ಈ ರೀತಿ ಜ್ಞಾನ ಹರಡುವ ಕಾರ್ಯ ಅಳವಡಿಸಿಕೊಳ್ಳಬೇಕು ಎಂದರು.
ಹೊಸ ತಂಡಕ್ಕೆ ಶುಭಾಶಯ ಕೋರಿದ ಅವರು ಈ ಸಂದರ್ಭದಲ್ಲಿ ಪ್ರಮಾಣವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿಜಿಯವರ ಮಾತುಗಳನ್ನು ಉಲ್ಲೇಖಿಸಿದ ಅವರು, “ಇತರರಿಗೆ ಸೇವೆ ಮಾಡುವುದರಲ್ಲೇ ನಮ್ಮ ಬದುಕಿನ ನಿಜವಾದ ಅರ್ಥ ಇದೆ. ಸೇವೆಯ ಮೂಲಕವೇ ನೀವು ನಿಮ್ಮನ್ನು ಕಂಡುಕೊಳ್ಳಬೇಕು” ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.


ಈ ಸಂದರ್ಭದಲ್ಲಿ ಎಸ್ ಎಸ್ ಕೇರ್ ಟ್ರಸ್ಟ್ ಕೋರ್ ಕಮಿಟಿ ಸದಸ್ಯರುಗಳಾದ ಡಾ.ಮೂಗನಗೌಡ,ಡಾ.ಜಿ.ಎಸ್. ಲತಾ,ಡಾ.ಶುಭಾ ದಾವಳಗಿ, ಡಾ.ಅನಿತಾ,ವಿದ್ಯಾರ್ಥಿ ಘಟಕದ ಓಂ ದುಬೆ,ಟಿ.ಪ್ರಿಯಾ ಹಾಗೂ ಬಾಪೂಜಿ ಸಂಸ್ಥೆಯ ಕಾಲೇಜುಗಳ ಪ್ರಾಂಶುಪಾಲರುಗಳು ಉಪಸ್ಥಿತರಿದ್ದರು.














