ಇತ್ತೀಚಿನ ಸುದ್ದಿ
ಸ್ಪೀಕರ್ ಪೀಠಕ್ಕೆ ಕಾಗದ ಪತ್ರ ಎಸೆತ: ಆರ್. ಅಶೋಕ್, ಅಶ್ವಥ್ ನಾರಾಯಣ, ಸುನಿಲ್ ಕುಮಾರ್ ಸಹಿತ 10 ಮಂದಿ ಬಿಜೆಪಿ ಶಾಸಕರ ಅಮಾನತು
19/07/2023, 18:22
ಬೆಂಗಳೂರು(reporterkarnataka.com):ವಿಧಾನಸಭೆ ಅಧಿವೇಶನದ ಸಮಯದಲ್ಲಿ ಡೆಪ್ಯುಟಿ ಸ್ವೀಕರ್ ಆಸೀನರಾಗಿದ್ದ ಸ್ಪೀಕರ್ ಪೀಠಕ್ಕೆ ಕಾಗದ ಪತ್ರ ಎಸೆದ ಘಟನೆಗೆ ಸಂಬಂಧಿಸಿದಂತೆ ಕರಾವಳಿಯ ಐವರು ಶಾಸಕರು ಸೇರಿದಂತೆ 10 ಮಂದಿ ಬಿಜೆಪಿ ಶಾಸಕರನ್ನು ಬುಧವಾರ ಅಮಾನತು ಮಾಡಲಾಗಿದೆ.
ಪ್ರಸಕ್ತ ಅಧಿವೇಶನದ ಅವಧಿ ಮುಗಿಯುವ ವರೆಗೂ ಶಾಸಕರನ್ನು ಅಮಾನತು ಮಾಡಲಾಗಿದೆ.
ಡಾ. ಅಶ್ವತ್ಥನಾರಾಯಣ, ವೇದವ್ಯಾಸ ಕಾಮತ್, ಅರವಿಂದ ಬೆಲ್ಲದ್, ಧೀರಜ್ ಮುನಿರಾಜು, ಯಶಪಾಲ್ ಸುವರ್ಣ, ಸುನಿಲ್ ಕುಮಾರ್, ಆರ್. ಅಶೋಕ್, ಉಮಾನಾಥ್ ಕೋಟ್ಯಾನ್, ಅರಗ ಜ್ಞಾನೇಂದ್ರ ಹಾಗೂ ಭರತ್ ಶೆಟ್ಟಿ ಅವರ ಹೆಸರನ್ನು ಉಲ್ಲೇಖಿಸಿದ ಸ್ಪೀಕರ್ ಯು.ಟಿ. ಖಾದರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಏನಿದು ಪ್ರಕರಣ?:
ಬಜೆಟ್ ಮೇಲಿನ ಚರ್ಚೆ ನಡೆಯುತ್ತಿತ್ತು. ಸ್ಪೀಕರ್ ಪೀಠದಲ್ಲಿ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಕುಳಿತ್ತಿದ್ದರು.
ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಾತನಾಡುತ್ತಿದ್ದರು. ರಾಜ್ಯದ ಸರಕಾರದ 5 ಗ್ಯಾರಂಟಿ ಮತ್ತು ಇತರ ಯೋಜನೆಗಳನ್ನು ಹೊಗಳುತ್ತಿದ್ದರು. ಈ ವೇಳೆ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಧರಣಿ ನಡೆಸಿದರು.
ಉಪಸಭಾಧ್ಯಕ್ಷರು ಸ್ಪೀಕರ್ ಪೀಠದಲ್ಲಿ ಕುಳಿತಿದ್ದರು. ಬಿಜೆಪಿ ಶಾಸಕರು ಬಜೆಟ್ ಪ್ರತಿಗಳನ್ನ ಹರಿದು ಚೂರು ಮಾಡಿ ಎಸೆದಿದ್ದಾರೆ. ಉಪ ಸ್ಪೀಕರ್ ರುದ್ರಪ್ಪ ಲಮಾಣಿ ಆಕ್ರೋಶ ಹೊರ ಹಾಕಿದ್ದು, ನಿಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಮತದಾರರಿಗೆ ಈ ರೀತಿ ವರ್ತನೆ ತೋರಿ ಅವಮಾನ ಮಾಡಬೇಡಿ ಎಂದಿದ್ದಾರೆ. ಆದರೆ ಬಿಜೆಪಿ ಶಾಸಕರು ತಮ್ಮ ವರ್ತನೆಯನ್ನು ಮುಂದುವರಿಸಿದರು. ನಂತರ ಉಪ ಸಭಾಪತಿಯವರು ಸದನವನ್ನು ಮಧ್ಯಾಹ್ನ 3 ಗಂಟೆ ವರೆಗೆ ಮುಂದೂಡಿದರು.