ಇತ್ತೀಚಿನ ಸುದ್ದಿ
ಸ್ಪೀಕರ್ ಖಾದರ್ ಹಾಗೂ ಜನತೆಯ ನಡುವಿನ ಸಂಪರ್ಕ ಸೇತುವೆಯೇ ಲಿಬ್ಝತ್!: ದಶಕಗಳಿಂದ ಆಪ್ತ ಕಾರ್ಯದರ್ಶಿಯಾಗಿ ಸೇವೆ!!
18/07/2023, 18:37
ಮಂಗಳೂರು(reporterkarnataka.com): ಯು.ಟಿ. ಖಾದರ್, ಕರಾವಳಿ ಕರ್ನಾಟಕದ ರಾಜಕೀಯ ರಂಗದ ಬಹುದೊಡ್ಡ ಹೆಸರು. ಸೋಲಿಲ್ಲದ ಸರದಾರ. ಇದೀಗ ಸ್ಪೀಕರ್ ಆಗುವ ಮೂಲಕ ನಾಡಿನುದ್ದಗಲಕ್ಕೂ ಚಿರಪರಿಚಿತರು. ಸ್ಪೀಕರ್ ಆಗಿ ಆತ್ಮೀಯರೊಬ್ಬರ ಶವಕ್ಕೆ ಹೆಗಲು ಕೊಟ್ಟ ಕರ್ನಾಟಕದ ಮೊದಲ ಸ್ಪೀಕರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯೊಬ್ಬರಿದ್ದಾರೆ ಎಂದು ಹೇಳುತ್ತಾರೆ. ಆದರೆ ಪ್ರತಿಯೊಬ್ಬ ಯಶಸ್ವಿ ರಾಜಕಾರಣಿಯ ಹಿಂದೆ ಯಶಸ್ವಿ ಆಪ್ತ ಕಾರ್ಯದರ್ಶಿ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಖಾದರ್ ಅವರ ವಿಷಯದಲ್ಲಿ ಅವರ ಆಪ್ತ ಕಾರ್ಯದರ್ಶಿ ಮಹಮ್ಮದ್ ಲಿಬ್ಝತ್ ಪಾತ್ರ ಮಹತ್ವದ್ದು.ಖಾದರ್ ಅವರನ್ನು ಭೇಟಿಯಾಗಲು ಹೋಗುವವರಿಗೆ ಮೊದಲು ಭೇಟಿಗೆ ಸಿಗುವುದು ಆಪ್ತ ಕಾರ್ಯದರ್ಶಿ ಲಿಬ್ಝತ್. ಲುಂಗಿ ಉಟ್ಟುಕೊಂಡು ಬರುವ ಸಾಮಾನ್ಯ ವ್ಯಕ್ತಿಯಿಂದ ಆರಂಭಗೊಂಡು ಸೂಟು ಬೂಟು ಹಾಕಿಕೊಂಡು ಬರುವ ಧನಿಕರ ವರೆಗೆ ಸಮಾನವಾಗಿ ಕಾಣುವುದೇ ಲಿಬ್ಝಿತ್ ಅವರ ವಿಶೇಷತೆ. ಖಾದರ್ ಅವರ ಕಚೇರಿಗೆ ಬಂದವರಲ್ಲಿ ಮುನಿಸಿಕೊಂಡು ವಾಪಸ್ ಹೋದವರೇ ಇಲ್ಲ.
ಲಿಬ್ಝತ್ ಅವರ ಪ್ಯಾಂಟ್ ಮತ್ತು ಶರ್ಟ್ ಕಿಸೆಗಳಲ್ಲಿ 4 ಮೊಬೈಲ್ ಇರುತ್ತದೆ. ಇದರಲ್ಲಿ ಯಾವುದಾದರೊಂದು ರಿಂಗಣಿಸುತ್ತಲೇ ಇರುತ್ತದೆ. ಕೆಲವೊಮ್ಮ ನಾಲ್ಕು ಮೊಬೈಲ್ ಗಳು ಕೂಡ ರಿಂಗ್ ಆಗುತ್ತಲೇ ಇರುತ್ತದೆ. ಈ ಎಲ್ಲ ಮೊಬೈಲ್ ಗಳಿಗೆ ಬರುವ ಕರೆಯನ್ನು ಸ್ವೀಕರಿಸಿ ಅತ್ಯಂತ ವಿನಯದಿಂದ ಲಿಬ್ಝತ್ ಅವರು ಉತ್ತರ ಕೊಡುತ್ತಾರೆ. ಆಕಸ್ಮಾತ್ ಕಾಲ್ ತೆಗೆಯಲು ಸಾಧ್ಯವಾಗದಿದ್ದರೆ ಮತ್ತೆ ಲಿಬ್ಝತ್ ಮೊಬೈಲ್ ನಿಂದ ಕರೆ ಬರುತ್ತದೆ. ಲಿಬ್ಝತ್ ಅವರಿಗೆ ತಡರಾತ್ರಿ 12ರ ಬಳಿಕ ಕರೆ ಮಾಡಿದರೂ ಅವರು ಉತ್ತರಿಸುತ್ತಾರೆ.
ಮಿಸ್‌ಕಾಲ್ ಕೊಟ್ಟರೂ ತಿರುಗಿ ಕರೆ ಮಾಡುತ್ತಾರೆ.
ಖಾದರ್ ಅವರು ಸ್ಪೀಕರ್ ಆದ ಬಳಿಕ ಸ್ಪೀಕರ್ ಜತೆ ಆಪ್ತ ಕಾರ್ಯದರ್ಶಿ ಲಿಬ್ಝತ್ ಇರುತ್ತಾರೆ. ವಿಧಾನಸಭೆ ಕಲಾಪ ಆರಂಭಗೊಂಡ ಬಳಕ ಲಿಬ್ಝತ್ ಅವರ ಮೊಬೈಲ್ ಗೆ ಸ್ವಲ್ಪ ಸಮಸ್ಯೆ ಉಂಟಾಗಿದೆ. ವಿಧಾನ ಸಭೆಯೊಳಗೆ ಮೊಬೈಲ್ ಜಾಮರ್ ಅಳವಡಿಸಲಾಗಿದೆ. ಮೊಬೈಲ್ ಹೊರಗಿಟ್ಟೇ ಸದನದೊಳಗೆ ಹೋಗಬೇಕು.
ಹಾಗಾಗಿ ಲಿಬ್ಝತ್ ಅವರ ಯಾವುದೇ ಮೊಬೈಲ್ ಕಲಾಪದ ವೇಳೆ ರಿಂಗಣಿಸಿದರೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಖಾದರ್ ಅವರನ್ನು ನಾನಾ ಕಾರಣಗಳಿಗೆ ಸಂಪರ್ಕ ಬಯಸುವವರಿಗೆ ಕಷ್ಟವಾಗಿತ್ತು. ಇದೀಗ ಆ ಸಮಸ್ಯೆಯನ್ನು ಪರಿಹರಿಸಲಾಗಿದೆ. ಹೊರಗಡೆ ಮೊಬೈಲ್ ಇಡುವ ಜಾಗದಲ್ಲಿ ಸಿಬ್ಬಂದಿಯೊಬ್ಬರನ್ನು ನೇಮಿಸಲಾಗಿದೆ. ಕಲಾಪದ ಸಮಯದಲ್ಲಿ ಲಿಬ್ಝತ್ ಬದಲಿಗೆ ಅವರು ಉತ್ತರಿಸುತ್ತಾರೆ. ಪ್ರತಿಯೊಂದು ಸಮಸ್ಯೆ ಗೂ ಲಿಬ್ಝತ್ ಬಳಿ ಉತ್ತರವಿದೆ.