ಇತ್ತೀಚಿನ ಸುದ್ದಿ
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಮರು ಜೀವ?: ಎಸ್ ಐಟಿ ತನಿಖೆಗೆ ರಾಜ್ಯ ಸರಕಾರ ನಿರ್ಧಾರ?
29/07/2023, 20:50

ಆಶೋಕ್ ಕಲ್ಲಡ್ಕ ಮಂಗಳೂರು
info.reporterkarnataka@gmail.com
ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಎಸ್ ಐಟಿ(ವಿಶೇಷ ತನಿಖಾ ತಂಡ) ತನಿಖೆಗೆ ಕೊಡಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಸುಮಾರು 11 ವರ್ಷಗಳ ಹಿಂದೆ ಧರ್ಮಸ್ಥಳ ಸೌಜನ್ಯ ಎಂಬ 17ರ ಹರೆಯದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ನಡೆಸಿ ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧಿಸಿದಂತೆ ಸಂತೋಷ್ ರಾವ್ ಎಂಬವರನ್ನು ಬಂಧಿಸಲಾಗಿತ್ತು. ಇದೀಗ ಸಿಬಿಐ ನ್ಯಾಯಾಲಯ ಸಂತೋಷ್ ರಾವ್ ನಿರ್ದೋಷಿ ಎಂದು ತೀರ್ಪು ನೀಡಿದ ಹಿನ್ನೆಲೆಯಲ್ಲಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. ಸೌಜನ್ಯ ಅವರ ತಾಯಿ ಹಾಗೂ ಸೋದರ ಮಾವ 11 ವರ್ಷಗಳ ಹಿಂದೆ ಅನುಮಾನ ವ್ಯಕ್ತಪಡಿಸಿದ ವ್ಯಕ್ತಿಗಳನ್ನು ಬಂಧಿಸಿ ತನಿಖೆ ನಡೆಸಬೇಕೆಂಬ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ಇದಕ್ಕೆ ಹಲವಾರು ಸಂಘಟನೆಗಳು ಧ್ವನಿಗೂಡಿಸಿದೆ. ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸಬೇಕೆಂದು ರಾಜ್ಯಾದ್ಯಂತ ಪ್ರತಿಭಟನೆಗಳು ಆರಂಭವಾಗಿದೆ. ಮೈಸೂರಿನಲ್ಲಿ ವಾರದ ಹಿಂದೆ ಸೌಜನ್ಯ ಪರ ಭಾರೀ ಪ್ರತಿಭಟನೆ ನಡೆದಿತ್ತು. ಮೈಸೂರಿನ ಒಡನಾಡಿ ಸಂಸ್ಥೆ ಸೌಜನ್ಯಳ ಹೆತ್ತವರ ಜತೆ ಕೈಜೋಡಿಸಿ ಬೆಂಬಲಕ್ಕೆ ನಿಂತಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೂಡ ಪ್ರತಿಭಟನೆ ನಡೆದಿದೆ. ಸುಮಾರು 60ಕ್ಕೂ ಹೆಚ್ಚು ಸಂಘಟನೆಗಳು ಸೌಜನ್ಯ ಪರ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ದಿನ ಕಳೆದಂತೆ ಹೋರಾಟ ಬಲಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಶಾಸಕ ಹರೀಶ್ ಪೂಂಜ ಹಾಗೂ ಅದೇ ಭಾಗದವರಾದ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಇವೆಲ್ಲದರ ಪರಿಣಾಮ ಸರಕಾರ ಪ್ರಕರಣದ ಕುರಿತು ಎಸ್ ಐಟಿ ತನಿಖೆಗೆ ಮುಂದಾಗಿದೆ ಎಂದು ತಿಳಿದು ಬಂದಿದೆ.