ಇತ್ತೀಚಿನ ಸುದ್ದಿ
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಸಿಬಿಐ ಕೋರ್ಟಿನಿಂದ ದೈವದ ಕೋರ್ಟಿಗೆ ಮೊರೆ; ಕಾನತ್ತೂರು ಕ್ಷೇತ್ರಕ್ಕೆ ತಿಮರೋಡಿಯ ಆಹ್ವಾನಿಸಿದ ಧೀರಜ್ ಕೆಲ್ಲಾ
30/06/2023, 20:06

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಧರ್ಮಸ್ಥಳ ಸಮೀಪ ನಡೆದ ಸೌಜನ್ಯ ಎಂಬ 18ರ ಹರೆಯದ ಹೆಣ್ಣು ಮಗಳ ಅಮಾನುಷ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣ ದಶಕದ ಬಳಿಕ ಮತ್ತೆ ಸದ್ದು ಮಾಡಲಾರಂಭಿಸಿದೆ. ಸಿಬಿಐ ನ್ಯಾಯಾಲಯವು ಆರೋಪಿ ಸಂತೋಷ್ ರಾವ್ ಅವರನ್ನು ನಿರ್ದೋಷಿ ಎಂದು ಘೋಷಿಸಿದ ಬಳಿಕ ಪ್ರಕರಣ ಮತ್ತೆ ಪ್ರಚಲಿತಕ್ಕೆ ಬಂದಿದ್ದು, ಇದೀಗ ಕೇಸ್ ಆಣೆ ಪ್ರಮಾಣದತ್ತ ಹೊರಳಿದೆ.
ಸೌಜನ್ಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಆಕೆಯ ತಾಯಿ, ಮಾವ ಮತ್ತು ಸಾಮಾಜಿಕ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಅವರು ಮಾಧ್ಯಮಗಳ ಮುಂದೆ ಹಾಜರಾಗಿ ತಾವು ನಿಶ್ಚಲ್ ಜೈನ್, ಉದಯ್ ಜೈನ್, ಮಲ್ಲಿಕ್ ಜೈನ್ ಹಾಗೂ ಧೀರಜ್ ಕೆಲ್ಲಾ ಅವರನ್ನು ವಿಚಾರಣೆಗೆ ಒಳಪಡಿಸುವಂತೆ ಅಂದೂ ಕೂಡ ಒತ್ತಾಯಿಸಿದ್ದೇವೆ, ಇಂದೂ ಕೂಡ ಒತ್ತಾಯಿಸುತ್ತೇವೆ. ಹಾಗೆ ಧರ್ಮಸ್ಥಳದಲ್ಲಿ ಇದುವರೆಗೆ ನಡೆದ ಅಸಹಜ ಸಾವಿನ ಬಗ್ಗೆಯೂ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತೇವೆ ಎಂದು ಹೇಳಿದ್ದರು. ಸೌಜನ್ಯ ಪರ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಸೌಜನ್ಯಳ ಮನೆ ಮುಂದೆ ಆಕೆಯ ಪ್ರತಿಮೆ ಸ್ಥಾಪಿಸುವುದಾಗಿ ಕೂಡ ಘೋಷಿಸಿದ್ದರು. ಪ್ರಕರಣ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಉದಯ್ ಜೈನ್, ಮಲ್ಲಿಕ್ ಜೈನ್ ಹಾಗೂ ಧೀರಜ್ ಕೆಲ್ಲಾ ಅವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ತಾವು ನಿರಪರಾಧಿಗಳು, ಮಹೇಶ್ ಶೆಟ್ಟಿ ತಿಮರೋಡಿ ಅವರು ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ನಮಗೂ ಸೌಜನ್ಯ ಕೊಲೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನಮಗೂ ಮದುವೆಯಾಗಿದೆ. ನಮಗೂ ಅಕ್ಕ- ತಂಗಿಯಂದಿರು ಇದ್ದಾರೆ. ಸೌಜನ್ಯ ಹತ್ಯೆ ನಡೆದಿರುವುದು ನಮಗೂ ನೋವುಂಟು ಮಾಡಿದೆ. ಆದರೆ ತಿಮರೋಡಿ ಅವರು ಈ ಪ್ರಕರಣದಲ್ಲಿ ಸುಮ್ಮನೆ ನಮ್ಮ ಹೆಸರು ಎಳೆಯುತ್ತಿದ್ದಾರೆ. ಸೌಜನ್ಯ ಹೆಸರಿನಲ್ಲಿ ಡಬ್ಬ ಇಟ್ಟು ಹಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ನಿರಪರಾಧಿತ್ವವನ್ನು ಸಾಬೀತುಪಡಿಸಲು ನಾವು ದೈವದ ಮೊರೆ ಹೋಗುತ್ತಿದ್ದೇವೆ. ಸೌಜನ್ಯ ಹತ್ಯೆ ಪ್ರಕರಣಕ್ಕೂ ನಮಗೆ ಮೂವರಿಗೂ ಏನೂ ಸಂಬಂಧವಿಲ್ಲ ಎಂದು ಕಾನತ್ತೂರು ದೈವಗಳ ಮುಂದೆ ಆಣೆ ಮಾಡಲು ಸಿದ್ಧರಿದ್ದೇವೆ. ಮಹೇಶ್ ಶೆಟ್ಟಿ ತಿಮರೋಡಿ ಅವರು ಕೂಡ ಬಂದು ಆಣೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಕಾನತ್ತೂರು ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಕಾಸರಗೋಡು ಜಿಲ್ಲೆಯಲ್ಲಿದೆ. ತುಂಬಾ ಕಾರಣೀಕದ ಕ್ಷೇತ್ರವೆಂಬ ಪ್ರತೀತಿಯನ್ನು ಪಡೆದಿದೆ. ವಾದ- ವಿವಾದವನ್ನು ಕಾನತ್ತೂರಿನ ದೈವಗಳ ಮುಂದೆ ಕೋರ್ಟ್ ಮಾದರಿಯಲ್ಲೇ ಇತ್ಯರ್ಥ ಪಡಿಸಲಾಗುತ್ತದೆ. ವಾದಿ- ಪ್ರತಿವಾದಿಗಳಿಗೆ ಇಲ್ಲಿನ ಆಡಳಿತ ಮಂಡಳಿಯಿಂದ ನೋಟಿಸ್ ಕಳುಹಿಸಿ ದೈವದ ಮುಂದೆ ಹಾಜರಾಗಲು ಸೂಚಿಸಲಾಗುತ್ತದೆ.
ಸುಮಾರು 11 ವರ್ಷಗಳ ಹಿಂದೆ ನಡೆದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ದೇಶದಲ್ಲೇ ಸದ್ದು ಮಾಡಿತ್ತು. ಇದರ ವಿರುದ್ಧ ಸಾಕಷ್ಟು ಹೋರಾಟ, ಪ್ರತಿಭಟನೆಗಳು ನಡೆದಿವೆ. ಪೊಲೀಸ್ ತನಿಖೆಯಿಂದ ಆರಂಭಗೊಂಡ ಪ್ರಕರಣ ಸಿಬಿಐ ವರೆಗೆ ಹೋಗಿದೆ. ದೀರ್ಘಕಾಲ ವಿಚಾರಣೆ ನಡೆದ ಬಳಿಕ ಸಿಬಿಐ ನ್ಯಾಯಾಲಯ ಆರೋಪಿ ಸಂತೋಷ್ ರಾವ್ ನಿರ್ದೋಷಿ ಎಂದು ತೀರ್ಪು ನೀಡಿದೆ. ಹಾಗಾದರೆ, ನಿಜವಾದ ಆರೋಪಿಗಳು ಯಾರು ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.