ಇತ್ತೀಚಿನ ಸುದ್ದಿ
ಸೂತಕದ ಮನೆಯಂತಿದ್ದ ಮುರುಡೇಶ್ವರ ಕಡಲ ಕಿನಾರೆಗೆ ಮತ್ತೆ ರಂಗು: ಮೋಜು- ಮಸ್ತಿಗೆ ಜಿಲ್ಲಾಡಳಿತ ಪರ್ಮಿಷನ್
29/12/2024, 21:06
ಭಟ್ಕಳ(reporterkarnataka.com): ಮೂವರು ಶಾಲಾ ಬಾಲಕಿಯ ಇತ್ತೀಚೆಗೆ ಆಹುತಿ ಪಡೆದು ಸೂತಕದ ಮನೆಯಂತಿದ್ದ ಮುರುಡೇಶ್ವರ ಕಡಲ ಕಿನಾರೆಗೆ ಮತ್ತೆ ರಂಗು ಬಂದಿದೆ. ಜಿಲ್ಲಾಡಳಿತ ಇಲ್ಲಿ ಜಲಕ್ರೀಡೆಗೆ ನಡೆಸಲು ಪ್ರವಾಸಿಗರಿಗೆ ಹೇರಿದ್ದ ನಿರ್ಬಂಧವನ್ನು ವಾಪಸ್ ಪಡೆದಿದೆ.
ಭಟ್ಕಳ ಸಮೀಪದ ಮುರುಡೇಶ್ವರ ದೇವಾಲಯ ದೇಶ- ವಿದೇಶಗಳ ಭಕ್ತರ, ಪ್ರವಾಸಿಗರ ಆಗಮನದ ತಾಣವಾಗಿದೆ. ಆಗಸದೆತ್ತರದ ಇಲ್ಲಿನ ಭಗವಾನ್ ಶಿವನ ಸುಂದರ ಮೂರ್ತಿ ವಿಶೇಷ ಆಕರ್ಷಣೆಯಾಗಿದೆ. ಇತ್ತೀಚೆಗೆ ಇಲ್ಲಿ ಪ್ರವಾಸಕ್ಕೆ ಆಗಮಿಸಿದ ಕೋಲಾರ ಜಿಲ್ಲೆಯ ಶಾಲಾ ಮಕ್ಕಳ ಪೈಕಿ ಮೂವರು ಬಾಲಕಿಯರು ಸಮುದ್ರಪಾಲಾಗಿ ಜೀವ ಕಳೆದುಕೊಂಡಿದ್ದರು. ಸುರಕ್ಷತೆಯ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯ ಬಗ್ಗೆ ಸಾರ್ವಜನಿಕರಿಂದ ಕಟು ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಮುದ್ರದಲ್ಲಿ ಜಲಕ್ರೀಡೆಗೆ ನಿರ್ಬಂಧ ವಿಧಿಸಿತ್ತು.
ಇದೀಗ ಜಿಲ್ಲಾಡಳಿತ ದುರಂತದ ನಡೆದು 19 ದಿನಗಳ ಬಳಿಕ ಕಡಲತೀರ ಪ್ರವಾಸಿಗರಿಗೆ ಮುಕ್ತವಾಗಿಸಿದೆ. ಕಡಲತೀರದಲ್ಲಿ ಅಪಾಯಕಾರಿ ವಲಯ (ಡೇಂಜರ್ ಜೋನ್) ಮತ್ತು ಸುರಕ್ಷಿತ ವಲಯ(ಸೇಫ್ ಜೋನ್) ಎಂದು ಎರಡು ವಿಭಾಗ ಮಾಡಿ ಗುರುತಿಸಲಾಗಿದೆ. ಜಿಲ್ಲಾಡಳಿತ ಗುರುತಿಸಿದ ಸೇಫ್ ಜೋನ್‌ನಲ್ಲಿ ಮಾತ್ರ ಪ್ರವಾಸಿಗರು ಈಜಾಡಬಹುದು.