ಇತ್ತೀಚಿನ ಸುದ್ದಿ
ಸೋಮವಾರಪೇಟೆ | ಬೋನಿಗೆ ಬೀಳದೆ ಚಳ್ಳೆಹಣ್ಣು ತಿನ್ನಿಸಿದ ಚಿರತೆ: ಬೆಚ್ಚಿ ಬೀಳುವ ಜನತೆ!
09/02/2026, 13:01
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕಳೆದ ಕೆಲವು ದಿನಗಳಿಂದ ಸೋಮವಾರಪೇಟೆ ಸಮೀಪದ ಕಾರೆಕೊಪ್ಪ, ಬೇಲೂರು ವ್ಯಾಪ್ತಿಯ ಗ್ರಾಮಸ್ಥರಿಗೆ ಚಿರತೆಯೊಂದು ಚಿಂತೆ ಗೀಡುಮಾಡಿದೆ.ಚಿರತೆಯ ಸೆರೆಗೆ ಬೋನ್ ಅಳವಡಿಸಿದ್ದರೂ ಕೂಡ ಅದರತ್ತ ಸುಳಿಯದೆ ಮನೆಯ ಸುತ್ತಾಮುತ್ತಾ ಹಾಗೂ ತೋಟಗಳಲ್ಲಿ ದಿಢೀರ್ ಪ್ರತ್ಯಕ್ಷವಾಗಿ ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸುತ್ತಾ ಸ್ಥಳೀಯರ ನಿದ್ದೆಗೆಡಿಸುತ್ತಿದೆ.
ಕೆಲವು ದಿನಗಳ ಹಿಂದೆ ನಡುರಾತ್ರಿ ಆಹಾರ ಅರಸಿ ಬಂದಿದ್ದ ಚಿರತೆ ಕಾರೆಕೊಪ್ಪದ ಗಿರೀಶ್ ಎಂಬುವವರ ಮನೆಯ ಸಾಕು ನಾಯಿಯ ಮೇಲೆ ಎರಗಿತ್ತು. ಮನೆಯವರು ಜೋರಾಗಿ ಬೊಬ್ಬಿಟ್ಟಿದ್ದರಿಂದ ನಾಯಿಯನ್ನು ಅಲ್ಲಿಯೇ ಬಿಟ್ಟ ಚಿರತೆ ತೋಟದೊಳಗೆ ಪರಾರಿ ಆಗಿತ್ತು. ಮರುದಿನ ಸುದ್ದಿ ತಿಳಿದ ಅರಣ್ಯ ಇಲಾಖೆಯವರು ಚಿರತೆಯನ್ನು ಸೆರೆ ಹಿಡಿಯಲೆಂದು ಗಿರೀಶ್ ರವರ ಮನೆ ಪಕ್ಕದಲ್ಲಿ ಬೋನ್ ಇರಿಸಿದ್ದರು.
ಆದರೆ ಬೋನ್ ನತ್ತ ಸುಳಿಯದ ಚಿರತೆ ಶನಿವಾರ ರಾತ್ರಿ ಗಿರೀಶ್ ಅವರ ಮನೆಯ ಪಕ್ಕದಲ್ಲಿಯೇ ಹೊಂಚುಹಾಕಿ ಸುಳಿದಾಡಿದೆ. ಅದಕ್ಕೂ ಮೊದಲು ಶುಕ್ರವಾರ ರಾತ್ರಿ ಬೇಲೂರು ಗ್ರಾಮದ ಶ್ರೀಕಂಠ ಎಂಬುವವರ ಕಣ್ಣಿಗೂ ಚಿರತೆ ಬಿದ್ದಿದೆ ಎನ್ನಲಾಗಿದೆ. ಹೀಗಾಗಿ ಸ್ಥಳೀಯರು ಚಿರತೆ ಎಂದೊಡನೆ ಬೆಚ್ಚಿ ಬೀಳುವಂತಾಗಿದೆ.
ಕೂಡಲೇ ಅರಣ್ಯ ಇಲಾಖೆಯವರು ಚಿರತೆ ಸೆರೆಗೆ ಸೂಕ್ತ ರೀತಿಯ ಕಾರ್ಯಾಚರಣೆ ನಡೆಸಿ ಸೆರೆಹಿಡಿದು ಮುಂದಿನ ಅನಾಹುತವನ್ನು ತಪ್ಪಿಸಲಿ ಎಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.












