ಇತ್ತೀಚಿನ ಸುದ್ದಿ
ಸ್ಮಾರ್ಟ್ ಸಿಟಿ ಕಾಮಗಾರಿಗಳ ತ್ವರಿತ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ: ಕದ್ರಿ ಪಾರ್ಕ್ ಫುಡ್ ಕೋರ್ಟ್ ಬಗ್ಗೆ ಚರ್ಚೆ
09/01/2024, 21:25
ಮಂಗಳೂರು(reporterkarnataka.com):ಸ್ಮಾರ್ಟ್ ಸಿಟಿ ಯೋಜನೆ, ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಂಗಳವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕದ್ರಿ ಪಾರ್ಕ್ ಅಭಿವೃದ್ಧಿಯ ಕುರಿತು, ಇಲ್ಲಿ ನಿರ್ಮಿಸಲಾದ ವೈಯಕ್ತಿಕ ಅಂಗಡಿಗಳ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಫುಡ್ ಕೋರ್ಟ್ ಗಳಿಗೆ ಪ್ರತ್ಯೇಕ ಘಟಕ ವನ್ನು ರೂಪಿಸುವ ಬಗ್ಗೆ ಚರ್ಚೆ ನಡೆಯಿತು.
ಕದ್ರಿ ಉದ್ಯಾನವನ, ಜಿಂಕೆವನ, ಪಾರ್ಕ್ ರಸ್ತೆ ಗಳನ್ನು ಏಕೀಕೃತವಾಗಿ ನಿರ್ವಹಣೆ ಮಾಡಲು ಗುತ್ತಿಗೆ ನೀಡುವ ಬಗ್ಗೆ ಪರಿಶೀಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಮೀನುಗಾರಿಕಾ ಕಾಲೇಜಿನಲ್ಲಿ ನಿರ್ಮಿಸಲಾದ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ಫೆಬ್ರವರಿಯಿಂದ ಆರಂಭಿಸಲು ಈಗಾಗಲೇ ವೇಳಾಪಟ್ಟಿ ತಯಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಜಲಾಭಿಮುಖ ರಸ್ತೆ ನಿರ್ಮಾಣ ದಲ್ಲಿ ಜಮೀನು ಸಮಸ್ಯೆ ಗಳನ್ನು ಕಾನೂನಾತ್ಮಕವಾಗಿ ಪರಿಹರಿಸಿ ಕೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಬಂದರು ಇಲಾಖೆಯ ಭೂಮಿಯನ್ನು ಹಸ್ತಾಂತರಿಸಲು ಕ್ರಮ ಕೈಗೊಳ್ಳಲು ತಿಳಿಸಿದರು.
ಎಮ್ಮೆಕೆರೆ ಈಜುಕೊಳವನ್ನು ಈಜು ಫೆಡರೇಷನ್, ಅಕಾಡೆಮಿಗಳಿಗೆ ಕಾರ್ಯಕ್ರಮ ಗಳನ್ನು ಆಯೋಜಿಸುವ ಜವಾಬ್ದಾರಿ ನೀಡಿ ಸ್ಥಳೀಯ ಮತ್ತು ರಾಷ್ಟ್ರಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಲಹೆಯನ್ನು ನೀಡಿದರು. ಇದರಿಂದ ಈಜುಕೊಳವು ಸಮರ್ಪಕ ರೀತಿಯಲ್ಲಿ ಉಪಯೋಗವಾಗುತ್ತದೆ ಮತ್ತು ಜನ ಮನ್ನಣೆಯನ್ನು ಗಳಿಸಲು, ಸಮರ್ಪಕ ಆದಾಯವನ್ನು ಗಳಿಸಬಹುದು ಎಂದರು. ಈಜು ತರಬೇತಿ ಪಡಿಸಲು ಬೇಕಾದ ಎಲ್ಲಾ ಸೌಕರ್ಯ ಹಾಗೂ ಅಕಾಡೆಮಿ ಗಳನ್ನು ಸಂಪರ್ಕಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸ್ಮಾರ್ಟ್ ಸಿಟಿ ವತಿಯಿಂದ ನಗರದಲ್ಲಿ ರಾಷ್ಟ್ರ ಧ್ವಜಸ್ತಂಭವನ್ನು ನಿರ್ಮಾಣ ಸಂಬಂಧ ಸೂಕ್ತ ಸ್ಥಳ ಅಂತಿಮಗೊಳಿಸಿ ಸರಿಯಾದ ಯೋಜನೆಯನ್ನು ರೂಪಿಸಿ ಮುಂದುವರೆಯುವಂತೆ ಸಲಹೆ ನೀಡಿದರು.
ಈಗಾಗಲೇ ಸ್ಮಾರ್ಟ್ ಸಿಟಿ ಕಾಮಗಾರಿಯಗಳನ್ನು ಕೈಗೊಂಡು ಐದು ವರ್ಷಗಳು ಕಳೆದಿವೆ. ಕೆಲಸಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಹಾನಗರಪಾಲಿಕೆ ಸದಸ್ಯ ಪ್ರೇಮಾನಂದ ಶೆಟ್ಟಿ, ಆಯುಕ್ತ ಆನಂದ್, ಸ್ಮಾರ್ಟ್ ಸಿಟಿ ಜನರಲ್ ಮ್ಯಾನೇಜರ್ ಅರುಣ ಪ್ರಭ ಮತ್ತಿತರರು ಇದ್ದರು.