ಇತ್ತೀಚಿನ ಸುದ್ದಿ
SIT | ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ದೂರುದಾರನ ಮೂಲಕ ಸ್ಥಳ ಮಹಜರು ಪ್ರಕ್ರಿಯೆ ಆರಂಭ
28/07/2025, 15:25

ಧರ್ಮಸ್ಥಳ (reporterkarnataka.com): ಧರ್ಮಸ್ಥಳ ಗ್ರಾಮದಲ್ಲಿ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ದೂರದಾರನ ಮೂಲಕ ಸ್ಥಳ ಮಹಜರು ಪ್ರಕ್ರಿಯೆ ಇಂದು ಆರಂಭಿಸಿದೆ.
ನೇತ್ರಾವತಿ ಸೇತುವೆಯ ಬಳಿಯ ಕಾಡಿನೊಳಗೆ ಎಸ್ಐಟಿ ತಂಡ ದೂರದಾರನನ್ನು ಸಂಪೂರ್ಣ ಕಪ್ಪು ಮುಸುಕಿನ ವಸ್ತ್ರ ಧರಿಸಿ ಕರೆದು ತಂದಿದೆ. ಎಸ್ ಐಟಿ ತಂಡದ ಹಿರಿಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಫೊರೆನ್ಸಿಕ್ ತಜ್ಞರು ಸಾಥ್ ನೀಡಿದ್ದಾರೆ. ಶವಗಳನ್ನು ಹೂತ ಜಾಗವನ್ನು ಗುರುತಿಸುವ ಪ್ರಕ್ರಿಯೆ ಭರದಿಂದ ನಡೆಯುತ್ತಿದೆ.
ಕಳೆದ ಎರಡು ದಿನಗಳಿಂದ ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಐಬಿಯಲ್ಲಿ ಎಸ್ಐಟಿ ತಂಡದಿಂದ ದೂರುದಾರನ ವಿಚಾರಣೆ ನಡೆದಿದೆ. ಮೊದಲ ದಿನ ಐಪಿಎಸ್ ಅಧಿಕಾರಿ ಅನುಚೇತ್ ಅವರು ವಿಚಾರಣೆ ನಡೆಸಿದ್ದರು. ಎರಡನೇ ದಿನ ಎಸ್ ಐಟಿ ತಂಡದ ಮುಖ್ಯಸ್ಥ ಪ್ರಣವ್ ಮೊಹಂತಿಯವರೇ ಮಂಗಳೂರಿಗೆ ಆಗಮಿಸಿ ವಿಚಾರಣೆ ಕೈಗೆತ್ತಿಕೊಂಡಿದ್ದರು. ಮೊದಲ ದಿನವೇ ದೂರುದಾರ ಸ್ಫೋಟಕ ಮಾಹಿತಿಯನ್ನು ನೀಡಿದ ಹಿನ್ನೆಲೆಯಲ್ಲಿ ಎರಡನೇ ದಿನವಾದ ನಿನ್ನೆ ಸ್ವತಃ ಟೀಮ್ ಮುಖ್ಯಸ್ಥ ಮೊಹಂತಿ ಆಗಮಿಸಿದ್ದರು ಎನ್ನಲಾಗಿದೆ. ಇದಕ್ಕೆಲ್ಲ ಪುಷ್ಠಿ ನೀಡುವಂತೆ ಇಂದು ಸ್ಥಳ ಮಹಜರು ಆರಂಭವಾಗಿದೆ.