ಇತ್ತೀಚಿನ ಸುದ್ದಿ
SIT | ಧರ್ಮಸ್ಥಳ ಪ್ರಕರಣ: ದೂರು ನೀಡಲು ಮತ್ತೊಬ್ಬ ದೂರುದಾರ ಎಸ್ಐಟಿ ಕಚೇರಿಗೆ ಆಗಮನ
02/08/2025, 22:06

ಬೆಳ್ತಂಗಡಿ(reporterkarnataka.com): ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ
ವಿಶೇಷ ತನಿಖಾ ತಂಡ (ಎಸ್‌ಐಟಿ) ಮುಂದೆ ಇನ್ನೊಬ್ಬ ವ್ಯಕ್ತಿ ದೂರು ನೀಡಲು ಮುಂದೆ ಬಂದಿದ್ದಾರೆ.
ಎಸ್‌ಐಟಿ ಮುಂದೆ ಮತ್ತೊಬ್ಬ ದೂರುದಾರರಾದ ಜಯಂತ ಶೆಟ್ಟಿ ಹಾಜರಾಗಿದ್ದು, ಕೆಲವು ಪ್ರಮುಖ ಸಾಕ್ಷ್ಯಗಳನ್ನು ನೀಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.
ಸುಮಾರು 20 ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಘಟನೆಗಳಿಗೆ ಸಂಬಂಧಿಸಿದಂತೆ, ಜಯಂತ ಶೆಟ್ಟಿ ಅವರು ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ತಡರಾತ್ರಿ ಆಗಮಿಸಿದ್ದರು. ಮಾಧ್ಯಮಗಳ ಜತೆ ಮಾತನಾಡಿದ ಜಯಂತ ಶೆಟ್ಟಿ, ಹಲವು ವರ್ಷಗಳ ಹಿಂದೆಯೇ ಧರ್ಮಸ್ಥಳದಲ್ಲಿ ಹಲವು ಕೊಲೆಗಳಾಗಿವೆ ಎಂದು ಸಾರ್ವಜನಿಕವಾಗಿ ಹೇಳಿದ್ದೆ. ಅಲ್ಲದೇ, ಈ ವಿಚಾರಗಳ ಬಗ್ಗೆ ಅನೇಕ ವೇದಿಕೆಗಳಲ್ಲಿ ಮಾತನಾಡಿದ್ದಾಗಿ ತಿಳಿಸಿದರು.
ಧರ್ಮಸ್ಥಳ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆಗಾಗಿ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದ್ದು ಉತ್ತಮ ಬೆಳವಣಿಗೆ ಎಂದು ಜಯಂತ ಶೆಟ್ಟಿ ಶ್ಲಾಘಿಸಿದರು. ತನಿಖಾ ತಂಡದ ಅಧಿಕಾರಿಗಳು ಭಾನುವಾರ ರಜೆ ಇರುವ ಕಾರಣ, ಸೋಮವಾರ ಬರುವಂತೆ ಸೂಚಿಸಿದ್ದು, ಸೋಮವಾರ ಎಲ್ಲ ಮಾಹಿತಿಯನ್ನು ಅವರಿಗೆ ನೀಡುತ್ತೇನೆ ಎಂದು ಜಯಂತ್ ಶೆಟ್ಟಿ ಹೇಳಿದರು.
ಧರ್ಮಸ್ಥಳದಲ್ಲಿ ನಡೆದಿದ್ದ ಕೊಲೆಗಳ ಬಗ್ಗೆ ಸ್ಥಳೀಯರಿಗೆಲ್ಲ ತಿಳಿದಿತ್ತು. ಆದರೆ, ‘ಭಯದಿಂದ ಯಾರೂ ಬಾಯಿ ಬಿಡುತ್ತಿರಲಿಲ್ಲ’ ಎಂದಿದ್ದಾರೆ. ಈಗ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿರುವುದರಿಂದ ಆ ಭಯ ದೂರವಾಗಿದೆ. ಹೀಗಾಗಿ, ತಾನು ದೂರು ನೀಡಲು ಮುಂದೆ ಬಂದಿರುವುದಾಗಿ ಅವರು ತಿಳಿಸಿದ್ದಾರೆ.
ತಮ್ಮ ಜೊತೆ ಇನ್ನೂ ಐದಾರು ಜನ ಸಾಕ್ಷಿಗಳು ಮುಂದೆ ಬರುವುದಾಗಿ ಹೇಳಿದ್ದಾರೆ ಎಂದು ಶೆಟ್ಟಿ ಬಹಿರಂಗಪಡಿಸಿದ್ದಾರೆ.
ಬಾಲಕಿಯೊಬ್ಬಳ ಮೃತದೇಹ ವಾರಗಟ್ಟಲೆ ಹಾಗೆಯೇ ಬಿದ್ದಿದ್ದರೂ, ಪೊಲೀಸರಿಗೆ ಮಾಹಿತಿ ನೀಡದೆ ಹೂತುಹಾಕಿದ್ದನ್ನು ತಾನು ಕಣ್ಣಾರೆ ನೋಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಆ ಸಮಯದಲ್ಲಿ ಯಾಕೆ ಧ್ವನಿ ಎತ್ತಲಿಲ್ಲ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ, ‘ಅಂದು ಬಾಯಿಬಿಡುವ ಪರಿಸ್ಥಿತಿ ಇರಲಿಲ್ಲ’ ಎಂದು ಜಯಂತ ಶೆಟ್ಟಿ ತಿಳಿಸಿದ್ದಾರೆ.