ಇತ್ತೀಚಿನ ಸುದ್ದಿ
ಸಿಡ್ನಿ: ಪ್ರಧಾನಿ ಮೋದಿ ಎದುರಲ್ಲೇ ನಡೆಯಲಿದೆ ಕುಡ್ಲದ ಕುವರಿಯ ನಾಟ್ಯ ವೈಭವ!!
22/05/2023, 11:01
ಅಭಿನಯ ಪ್ರವೀಣ್ ಮಂಗಳೂರು
info.reporterkarnataka@gmail.com
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಡ್ನಿಯಲ್ಲಿ ಕುಡ್ಲದ ಕುವರಿ ಎದುರಾಗಲಿದ್ದಾರೆ. ಮೋದಿ ಅವರಿಗೆ ಸ್ವಾಗತ ಕೋರುವ ಅಂಗವಾಗಿ ಸಿಡ್ನಿಯಲ್ಲಿ ಆಯೋಜಿಸಲಾದ ನೃತ್ಯ ಕಾರ್ಯಕ್ರಮದ ನೇತೃತ್ವವನ್ನು ಮಂಗಳೂರಿನ ಅನಿಶಾ ಪೂಜಾರಿ ವಹಿಸಲಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಮೇ 23ರಂದು ಸಿಡ್ನಿಯಲ್ಲಿ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಪ್ರಧಾನಿ ಮೋದಿಯವರ ಸಮ್ಮುಖದಲ್ಲಿ ತುಳುನಾಡಿನ ಕುವರಿ ಮಂಗಳೂರು ಬಿಜೈ ಕಾಪಿಕಾಡಿನ ಅನಿಶಾ ಪೂಜಾರಿ ಅವರ ತಂಡ ನಾಟ್ಯ ಪ್ರದರ್ಶನ ನೀಡಲಿದ್ದಾರೆ.
ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾದ ಸಿಡ್ನಿಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ನಂತರ ಸಮುದಾಯ ಸ್ವಾಗತ ನಡೆಯಲಿದೆ. ಇದರ ಭಾಗವಾಗಿ ನೃತ್ಯ ಕಾರ್ಯಕ್ರಮ ಜರುಗಲಿದೆ.
ಯಾರೀಕೆ ಅನಿಶಾ?: ಅನಿಶಾ ಅವರು ‘ನಾಟ್ಯೋಕ್ತಿ’ ನೃತ್ಯ ಗುಂಪಿನಲ್ಲಿರುವ ಏಕೈಕ ಮಂಗಳೂರಿನವರು. ತಂಡವು ತುಳು ಜಾನಪದ ಮತ್ತು ಕಾಂತಾರ ಚಿತ್ರಗೀತೆಯನ್ನು ಪ್ರದರ್ಶಿಸಲಿದೆ.
ಅನಿಶಾ ಪೂಜಾರಿ ಅವರು ಪದ್ಮನಾಭ ಪೂಜಾರಿ ಮತ್ತು ರೂಪ ಪದ್ಮನಾಭ ದಂಪತಿಯ ಪುತ್ರಿ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಂಗಳೂರಿನಲ್ಲಿ ನಡೆಸಿದರು. ನಂತರ ಬಿಬಿಎ ಮತ್ತು ಎಂಬಿಎ ಮಂಗಳೂರಿನ ಎಸ್ ಡಿಎಂ ಕಾಲೇಜಿನಲ್ಲಿ ಪೂರೈಸಿದರು. ಪ್ರಸ್ತುತ ಅನಿಶಾ ಕಳೆದ 6 ವರ್ಷಗಳಿಂದ ಸಿಡ್ನಿಯ ಪ್ರಸಿದ್ಧ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.