ಇತ್ತೀಚಿನ ಸುದ್ದಿ
ಶಾಸಕ ಹರೀಶ್ ಪೂಂಜ ಬಂಧಿಸಲು ಹೋದ ಬೆಳ್ತಂಗಡಿ ಪೊಲೀಸರು ಬರಿಗೈಯಲ್ಲಿ ವಾಪಸ್: ನೋಟಿಸ್ ನೀಡಿ ಹಿಂತಿರುಗಿದ ಖಾಕಿ ಪಡೆ
22/05/2024, 22:48
ಬೆಳ್ತಂಗಡಿ(reporterkarnataka.com): ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರ ಬಂಧನನೋತ್ತರ ನಡೆದ ಘಟನೆಗಳಿಗೆ ಪೂರಕವಾಗಿ ದಾಖಲಾದ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸಲು ಹೋದ ಪೊಲೀಸರು ಶಾಸಕರಿಗೆ ನೋಟಿಸ್ ಕೊಟ್ಟು ಬರಿಗೈಯಲ್ಲಿ ವಾಪಸ್ ಬಂದ ಘಟನೆ ನಡೆದಿದೆ. ಈ ನಡುವೆ ನೋಟಿಸಿಗೆ ಉತ್ತರಿಸಲು ಶಾಸಕರು ಠಾಣೆಗೆ ಆಗಮಿಸಿದ್ದಾರೆ.
ಮೇಲಂತಬೆಟ್ಟು ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿ, ಬಿಜೆಪಿ ಯುವ ಮೋರ್ಚಾದ ಶಶಿರಾಜ್ ಅವರ ಬಂಧನವನ್ನು ಪ್ರಶ್ನಿಸಿ ಶಾಸಕ ಹರೀಶ್ ಪೂಂಜ ಅವರು ಬೆಳ್ತಂಗಡಿ ಠಾಣೆಗೆ ಹೋಗಿ ಪೊಲೀಸ್ ಠಾಣೆ ನಿಮ್ಮ ಅಪ್ಪಂದಾ? ಎಂದು ಸಬ್ ಇನ್ಸ್‌ಪೆಕ್ಟರ್ ಮುರಳೀಧರ ನಾಯಕ್ ಅವರಲ್ಲಿ ಪ್ರಶ್ನಿಸಿದ್ದರು. ನಂತರ ಠಾಣೆಯಲ್ಲಿ ರಾತ್ರಿ ಧರಣಿ ನಡೆಸಿದ್ದರು. ಮರುದಿನ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು ಬೆಳ್ತಂಗಡಿಯನ್ನು ಡಿಜೆ ಹಳ್ಳಿ, ಕೆಜೆ ಹಳ್ಳಿ ಮಾಡುತ್ತೇನೆ ಎಂದು ಭಾಷಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಾಗಿಸಲಾಗಿತ್ತು. ಶಾಸಕರ ಬಂಧನಕ್ಕೆ ಪೊಲೀಸರು ಅವರ ನಿವಾಸಕ್ಕೆ ತೆರಳಿದ್ದರು. ಅಲ್ಲಿ ಬಿಜೆಪಿ ಸಂಸದರು, ಶಾಸಕರುಗಳು, ಹರೀಶ್ ಪೂಂಜ ಪರ ವಕೀಲರು ಹಾಗೂ ಅಪಾರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ನೆರೆದಿದ್ದರು. ಪೊಲೀಸ್ ಹಾಗೂ ಬಿಜೆಪಿ ನಾಯಕರ ನಡುವೆ ವಾದ- ಪ್ರತಿವಾದ ನಡೆಯಿತು. ನೋಟಿಸ್ ಕೊಟ್ಟು ಬಂಧಿಸಿ ಎಂದು ಬಿಜೆಪಿ ನಾಯಕರು ಹಾಗೂ ಪೂಂಜ ಪರ ವಕೀಲರು ವಾದಿಸಿದರು. ಕೊನೆಗೂ ಪೂಂಜ ಬಂಧನ ಸಾಧ್ಯವಾಗದೆ ಪೊಲೀಸರು ನೋಟಿಸ್ ನೀಡಿ ಬರಿಗೈಯಲ್ಲಿ ವಾಪಸಾದರು. ನಂತರ ಶಾಸಕರು ನೋಟಿಸಿಗೆ ಉತ್ತರಿಸಲು ಠಾಣೆಗೆ ಆಗಮಿಸಿದರು.














