4:25 AM Wednesday29 - July 2026
ಬ್ರೇಕಿಂಗ್ ನ್ಯೂಸ್
ಮಂಗಳೂರು ಪೊಲೀಸರಿಂದ ಸುಮಾರು 82 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ: 157… ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ: ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕಿಯರೇ ಡ್ರಗ್ಸ್ ಜಾಲದ ಡಾನ್‌ಗಳು!! ಅಸ್ಸಾಂ ಪ್ರವಾಹ ಕೊಂಚ ಇಳಿಮುಖ: 70ಕ್ಕೂ ಅಧಿಕ ಸಾವು; 4.45 ಲಕ್ಷಕ್ಕೂ ಹೆಚ್ಚು… Mysore | ಮಲೆಮಹದೇಶ್ವರ ಅಭಯಾರಣ್ಯದಲ್ಲಿ ಅರಣ್ಯ ಸಿಬ್ಬಂದಿ ಫೈರಿಂಗ್: ಕಾಡುಹಂದಿ ಬೇಟೆಗಾರನಿಗೆ ಬಿತ್ತು… Bangalore | ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಯ ‘ರೇಟ್‌’ ಕೇಳಿದ ಕಾಮುಕ ಅರೆಸ್ಟ್ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಸತೀಶ್ ಬೈಕಂಪಾಡಿ ಸೇರಿ 4 ಮಂದಿ ಆರೋಪಿಗಳಿಗೆ… Bangalore | ಅಗ್ನಿ ದುರಂತ: ಚಂದಾಪುರದಲ್ಲಿ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು ಭಾರತದ ಇತಿಹಾಸದಲ್ಲೇ ಮಕ್ಕಳ ಮೇಲೆ ಈ ರೀತಿ ಹಲ್ಲೆ ನಡೆದಿಲ್ಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷದ… ನೀಟ್ ಪ್ರತಿಭಟನೆ | ಹೋರಾಟಗಾರರಿಗೆ ಉಚಿತ ಆಹಾರ ಹಂಚಿದವನ ಬಂಧನ; ನನ್ನನ್ನು ಅಪಹರಿಸಿದ್ದರು:… *ಲಗೇಜ್​ ರೂಮ್​ನಲ್ಲಿ ಹೊಗೆ: ರಾಜ್‌ಕೋಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ 194 ಮಂದಿ ಹೊತ್ತೊಯ್ಯುತ್ತಿದ್ದ…

ಇತ್ತೀಚಿನ ಸುದ್ದಿ

ಸಾವಿನಲ್ಲೂ ಸಾರ್ಥಕತೆ ಮೆರೆದ ಗಟ್ಟಿಗಿತ್ತಿ: ಸೈಂಟ್ ಅಲೋಶಿಯಸ್ ಕಾಲೇಜಿನ ಯುವ ಉಪನ್ಯಾಸಕಿಯ ಅಂಗಾಂಗ ದಾನ

14/11/2024, 11:05

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಆಕೆ ಸ್ನಾತಕೋತ್ತರ ಪದವಿ ಪೂರೈಸಿ ಮರು ವರ್ಷವೇ ತಾನು ಕಲಿತ ಶಿಕ್ಷಣ ಸಂಸ್ಥೆಯಲ್ಲೇ ಯುವ ಉಪನ್ಯಾಸಕಿಯಾಗಿ ಹೊಸ ಬದುಕು ಕಟ್ಟಿಕೊಂಡಿದ್ದರು. ಗ್ರಾಮೀಣ ಪ್ರದೇಶದಿಂದ ಬಂದ ಆಕೆ ವಿದ್ಯಾರ್ಥಿಗಳ, ಸಹೋದ್ಯೋಗಿಗಳ ಅಪಾರ ಪ್ರೀತಿ- ಒಲವುಗಳಿಸಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಮೊಗ್ಗು ಅರಳುತ್ತಿದ್ದಂತೆ ಅದು ಲೌಕಿಕ ಜಗತ್ತಿನಿಂದ ಮರೆಯಾಗಿಯೇ ಬಿಟ್ಟಿತು.
ಇದು ಮಂಗಳೂರಿನ ಪ್ರಸಿದ್ದ ಶಿಕ್ಷಣ ಸಂಸ್ಥೆಯಾದ ಸೈಂಟ್ ಅಲೋಶಿಯಸ್ ಕಾಲೇಜಿನ ಯುವ ಉಪನ್ಯಾಸಕಿಯ ವಾಸ್ತವ ಕತೆ. ಅಲೋಶಿಯಸ್ ನಲ್ಲೇ ಪಿಜಿ ಪೂರೈಸಿದ ಬಜಪೆ ಸಮೀಪದ ಗ್ಲೋರಿಯಾ ರೋಡ್ರಿಗಸ್ ಅವರು ಅಲ್ಲೇ ಉಪನ್ಯಾಸಕಿಯಾಗಿ ಕೆಲಸ ಗಿಟ್ಟಿಸಿಕೊಳ್ಳುವಷ್ಟು ಗಟ್ಟಿಗಿತ್ತಿಯಾಗಿದ್ದರು. ಆದರೆ, ಅಪರೂಪದ ಕಾಯಿಲೆ ಅವರನ್ನು ಕಡಿಮೆ ಅವಧಿಯಲ್ಲಿ ಹೊಸೆದು ಹಾಕಿತು.
ಉಪನ್ಯಾಸಕಿಯಾದ ಗ್ಲೋರಿಯಾ ಇದ್ದಕ್ಕಿದ್ದ ಹಾಗೆ ಕುಸಿದು ಬೀಳುತ್ತಾರೆ. ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗುತ್ತದೆ. ಊಟ ಮಾಡಿದ ಬಳಿಕ ಅವರ ದೇಹದಲ್ಲಿ ಅಲರ್ಜಿ ಕಾಣಿಸಿಕೊಂಡಿದೆ ಎಂದು ವೈದ್ಯರು ಹೇಳುತ್ತಾರೆ. ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ಅನಾಫಿಲ್ಯಾಕ್ಸಿಸ್ ರಿಯಾಕ್ಷನ್ ಎಂದು ಹೇಳುತ್ತಾರೆ. ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಆದರೆ, ಚಿಕಿತ್ಸೆ ಫಲಕಾರಿಯಾಗುವುದಿಲ್ಲ. ಮೆದುಳನ್ನು ಹಾನಿಗೊಳಿಸುವಷ್ಟು ರೋಗ ಉಲ್ಬಣಗೊಳ್ಳುತ್ತದೆ. ಗ್ಲೋರಿಯಾ ಅವರ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ವೈದ್ಯರು ಘೋಷಿಸುತ್ತಾರೆ.
ಇನ್ನೂ ಹಲವು ವರ್ಷ ಬಾಳಿ ಬದುಕಬೇಕಿದ್ದ ಗ್ಲೋರಿಯಾ ಅವರು ಅಲರ್ಜಿಗೆ ಸಂಬಂಧಿಸಿದ ಅನಾಫಿಲ್ಯಾಕ್ಸಿಸ್ ರಿಯಾಕ್ಷನ್ ನಿಂದ ಕೊನೆಯುಸಿರೆಳೆಯುತ್ತಾರೆ.
ಮುಂದೇನು..? ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಸುವುದು ಎಂದು ಎಲ್ಲರು ಲೆಕ್ಕಾಚಾರ ಹಾಕುತ್ತಿದ್ದಂತೆ, ಗ್ಲೋರಿಯಾ ಅವರ ಕುಟುಂಬ ತಮ್ಮ ಮುದ್ದು ಮಗಳ ಅಂಗಾಂಗ ದಾನಕ್ಕೆ ಮುಂದಾಗುತ್ತಾರೆ. ದುಃಖದ ಮಡುವಿನಲ್ಲೂ ಇನ್ನೊಂದು ಜೀವಕ್ಕೆ ನೆರವಾಗುವ ಹಂಬಲ ಅವರನ್ನು ಬಡಿದೆಬ್ಬಿಸುತ್ತದೆ. ಗ್ಲೋರಿಯಾ ಸಾವಿನಲ್ಲೂ ಸಾರ್ಥಕತೆ ಕಾಣುತ್ತಾರೆ. ಅವರ ಅಂಗಾಂಗಗಳನ್ನು ದಾನ ಮಾಡಲಾಗಿದೆ.
ಬಜಪೆ ಪಡು ಪೆರಾರ ನಿವಾಸಿ ಗ್ರೇಶನ್ ಅಲೆಕ್ಸ್ ರೋಡ್ರಿಗಸ್ ಮತ್ತು ಗ್ರೆಟ್ಟಾ ಫ್ಲೇವಿಯಾ ದಂಪತಿ ಪುತ್ರಿಯಾದ ಗ್ಲೋರಿಯಾ ಅವರ ಯಕೃತ್ತನ್ನು ಎ.ಜೆ. ಆಸ್ಪತ್ರೆಗೆ, ಶ್ವಾಸಕೋಶವನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ, ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ, ಮೂತ್ರಪಿಂಡವನ್ನು ಕೆಎಂಸಿ ಮಣಿಪಾಲಕ್ಕೆ ಮತ್ತು ಚರ್ಮ ಮತ್ತು ಕಾರ್ನಿಯಾವನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾನ ಮಾಡಲಾಗುತ್ತದೆ. ಸಾವಿನಲ್ಲೂ ಸಾರ್ಥಕತೆಯನ್ನು ಕಾಣುವುದೆಂದರೆ ಹೀಗೆ ತಾನೆ?

ಇತ್ತೀಚಿನ ಸುದ್ದಿ

ಜಾಹೀರಾತು