ಇತ್ತೀಚಿನ ಸುದ್ದಿ
ಸರಕಾರಿ ಕಚೇರಿಗಳಲ್ಲಿ ಫೋಟೋ, ವೀಡಿಯೊ ನಿಷೇಧ ಆದೇಶ ವಾಪಸ್: ಸಿಎಂ ಬೊಮ್ಮಾಯಿ ಹೇಳಿದ್ದೇನು?
16/07/2022, 13:21

ಬೆಂಗಳೂರು(reporterkarnataka.com): ಸರಕಾರಿ ಕಚೇರಿಗಳಲ್ಲಿ ಫೋಟೋ, ವೀಡಿಯೊ ಮಾಡಬಾರದೆನ್ನುವ ಆದೇಶ ಹೊರಡಿಸಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಬಂದ ತಕ್ಷಣ ಅದನ್ನು ವಾಪಸ್ ಪಡೆದಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶನಿವಾರ ಮಾಧ್ಯಮ ಜತೆ ಮಾತನಾಡಿದ ಅವರು, ಸರಕಾರಿ ನೌಕರರ ಸಂಘದವರು ಮನವಿ ಮಾಡಿಕೊಂಡ ಮೇರೆಗೆ ಆದೇಶ ಹೊರಡಿಸಲಾಗಿತ್ತು. ಕೆಲವು ಕಡೆ ಹಣ್ಣು ಮಕ್ಕಳ ಫೋಟೋ ತೆಗೆದು ಮಿಸ್ ಯೂಸ್ ಆಗಿತ್ತು. ಹಾಗಾಗಿ ಮನವಿ ಮಾಡಿದ್ದರು. ಅದು ನನ್ನ ಗಮನಕ್ಕೆ ಬಂದಿರಲಿಲ್ಲ ಎಂದರು.
ನಮ್ಮ ಸರಕಾರ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಮೊದಲಿನಂತೆಯೇ ವ್ಯವಸ್ಥೆ ಮುಂದುವರಿಯಲಿ ಎಂದು ಆದೇಶವನ್ನು ವಾಪಸ್ ಪಡೆಯಲಾಗಿದೆ ಎಂದು ಬೊಮಮ್ಮಾಯಿ ವಿವರಿಸಿದರು.
ಸರ್ಕಾರ 1 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಪಕ್ಷದ ವತಿಯಿಂದ ವಿಶೇಷ ಕಾರ್ಯಕ್ರಮ ನಡೆಸಲಾಗುವುದು. ಬೆಂಗಳೂರಿನಲ್ಲಿ ಸರ್ಕಾರದ ವತಿಯಿಂದ ಕಾರ್ಯಕ್ರಮ ನಡೆಯಲಿದೆ. ನಿನ್ನೆ ಸಚಿವ ಸಂಪುಟ ಸಹೋದ್ಯೋಗಿಗಳು ಹಾಗೂ ಪಕ್ಷದ ಪ್ರಮುಖರ ಜತೆ ಚಿಂತನಾ ಸಭೆ ನಡೆಸಲಾಗಿದೆ. ಸಮನ್ವಯತೆಯಿಂದ ಹೋಗುವ ಬಗ್ಗೆ ಚರ್ಚೆಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಚರ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳಲಾಗುವುದು ಎಂದು ತಿಳಿಸಿದರು.