ಇತ್ತೀಚಿನ ಸುದ್ದಿ
ಸಣ್ಣ ಚುನಾವಣೆಯೇ ಇರಬಹುದು, ಆದರೆ ಪುತ್ತಿಲ ಪರಿವಾರಕ್ಕೆ ಇದು ದೊಡ್ಡ ಫಲಿತಾಂಶವೇ: ಸುಬ್ರಹ್ಮಣ್ಯ ಬಲ್ಯಾಯರ ಗೆಲುವು ದಿಗ್ವಿಜಯಕ್ಕೆ ಮುನ್ನಡಿಯೇ?
27/07/2023, 15:13

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.ಕಂ
ಪುತ್ತಿಲ ಪರಿವಾರ ಮತ್ತೆ ಸದ್ದು ಮಾಡಲಾರಂಭಿಸಿದೆ. ಪುತ್ತೂರು ತಾಲೂಕಿನ ಆರ್ಯಾಪು ಗ್ರಾಪಂ ಚುನಾವಣೆಯ ವಾರ್ಡ್2ರ ಉಪ ಚುನಾವಣೆಯಲ್ಲಿ ಅಕೌಂಟ್ ಓಪನ್ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಯನ್ನು ಪಡೆಯುವಲ್ಲಿ
ಮೇಲುಗೈ ಸಾಧಿಸಿದೆ. ಇದು ದಿಗ್ವಿಜಯಕ್ಕೆ ಮುನ್ನುಡಿ ಎಂದೇ ವ್ಯಾಖ್ಯಾನಿಸಲಾಗಿದೆ.
ಇದು ತಳಮಟ್ಟದ ಪಂಚಾಯಿತಿ ಚುನಾವಣೆಯೇ ಇರಬಹುದು. ಆದರೆ ವ್ಯಕ್ತಿಗತವಾಗಿ ಅರುಣ್ ಕುಮಾರ್ ಪುತ್ತಿಲ ಅವರದ್ದು ಬಲು ದೊಡ್ಡ ಸಾಧನೆ. ಪ್ರಮುಖ ಎರಡು ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಮುಂದೆ ಪುತ್ತಿಲ ಪರಿವಾರದ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ ಅವರು ಗೆಲ್ಲುವ ಮೂಲಕ ಸಾಂವಿಧಾನಿಕ ನೆಲೆಗಟ್ಟಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬೇರೂರುವ ಪ್ರಯತ್ನಕ್ಕೆ ಸಣ್ಣ ಮಟ್ಟಿನ
ಸಫಲತೆ ದೊರಕಿದೆ ಎಂದು ರಾಜಕೀಯ ವಿಶ್ಲೇಷಕರು ವ್ಯಾಖ್ಯಾನ ಮಾಡುತ್ತಾರೆ.
ಯಾವುದೇ ಪಕ್ಷವಿರಲಿ, ಸಂಘಟನೆ ಇರಲಿ ತಳಮಟ್ಟದಿಂದಲೇ ಭದ್ರಗೊಳ್ಳುತ್ತಾ ಹೋಗಬೇಕು. ಈ ನಿಟ್ಟಿನಲ್ಲಿ ಪುತ್ತಿಲ ಪರಿವಾರ ಪಂಚಾಯತ್ ವಾರ್ಡ್ ವೊಂದನ್ನು ಗೆದ್ದುಕೊಂಡಿದೆ. ಇನ್ನೊಂದು ವಾರ್ಡ್ ನಲ್ಲಿ ಎರಡನೇ ಸ್ಥಾನ ಪಡೆದಿದೆ. ಈ ಎರಡೂ ವಾರ್ಡ್ ಗಳಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಯಾಕೆಂದರೆ ಪುತ್ತಿಲ ಅವರು ಬಿಜೆಪಿಯಿಂದ ನಿರ್ಲಕ್ಷಿಸಲ್ಪಟ್ಟವರು. ಸಂಘ ಪರಿವಾರದ ನಾಯಕರು ಅವರ ಅಭ್ಯರ್ಥಿತನವನ್ನು ಪ್ರಬಲವಾಗಿ ವಿರೋಧಿಸಿದ್ದರು. ಪುತ್ತಿಲರ ವಿಷಯ ಬರುವಾಗ ಬಿಜೆಪಿ ಅಂದ್ರೆ ಹಿಂದುತ್ವ. ಬಿಜೆಪಿಗಿಂತ ದೊಡ್ಡ ಹಿಂದುತ್ವ ಇದೆಯೇ ಎಂದು ಆರೆಸ್ಸೆಸ್ ಹಿರಿಯ ನಾಯಕರೊಬ್ಬರು ಪ್ರಶ್ನಿಸಿದ್ದರು. ಅಂದರೆ ಪುತ್ತಿಲರ ಹಿಂದುತ್ವವನ್ನು ಸಂಘಪರಿವಾರ ಪ್ರಶ್ನಿಸಿತ್ತು.
ಇದೀಗ ನಡೆದಿರುವುದು ಇದು ಸಣ್ಣ ಚುನಾವಣೆಯೇ ಇರಬಹುದು, ಆದರೆ ಪುತ್ತಿಲ ಪರಿವಾರಕ್ಕೆ ಇದು ದೊಡ್ಡ ಫಲಿತಾಂಶ. ಈ ಫಲಿತಾಂಶ ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ಇರಿಸುಮುರಿಸು ತರುವಂತದ್ದೇ ಆಗಿದೆ. ಸಾಮಾನ್ಯವಾಗಿ ಎಷ್ಟೇ ದೊಡ್ಡ ನಾಯಕನಾದರೂ ಪಕ್ಷ ಬಿಟ್ಟು ಪಕ್ಷೇತರನಾಗಿ ನಿಂತರೆ 5 ಸಾವಿರ ಮತ ಪಡೆಯುವುದು ಕಷ್ಟ. ಆದರೆ ಅರುಣ್ ಕುಮಾರ್ ಪುತ್ತಿಲ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎದುರು ಸೋಲು ಅನುಭವಿಸಿದ್ದಾರೆ. ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಇದೀಗ ಪಂಚಾಯತಿನ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲೂ ಬಿಜೆಪಿ ಮೂರನೇ ಸ್ಥಾನದಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದರ್ಥ ಪುತ್ತಿಲ ಪರಿವಾರ ಗ್ರಾಮೀಣ ಪ್ರದೇಶದಲ್ಲೂ ಬೇರೂರುತ್ತಿದೆ ಎನ್ನುವುದು.