ಇತ್ತೀಚಿನ ಸುದ್ದಿ
ಶಂಕಿತ ಉಗ್ರ ಅಖ್ತರ್ ಹುಸೇನ್‌ಗೆ ಅಲ್‌ಖೈದಾ ಜತೆ ಲಿಂಕ್ ?: ಬೆಂಗಳೂರು ಗಲಭೆಗೆ ಮಾಸ್ಟರ್ ಪ್ಲ್ಯಾನ್ ಹಾಕಿದ್ನೇ ಈತ?
25/07/2022, 23:10
ಬೆಂಗಳೂರು: (reporterkarnataka.com): ಬೆಂಗಳೂರಿನಲ್ಲಿ ಸೋಮವಾರ ಮುಂಜಾನೆ ಸಿಸಿಬಿ ಪೊಲೀಸರಿಂದ ಬಂಧನಕ್ಕೀಡಾದ ಶಂಕಿತ ಉಗ್ರ ಅಖ್ತರ್ ಹುಸೇನ್‌ನನ್ನು ಅಡುಗೋಡಿ ಟೆಕ್ನಿಕಲ್ ಸೆಲ್ ನಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಈತ ಅಲ್‌ಖೈದಾ ಉಗ್ರ ಸಂಘಟನೆ ಜತೆ ಸಂಪರ್ಕದಲ್ಲಿದ್ದ ಎನ್ನುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಶಂಕಿತ ಉಗ್ರನ ಬಂಧನದೊಂದಿಗೆ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿಯ ಅತಂಕವನ್ನು ನಿವಾರಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಖ್ತರ್ ಹುಸೇನ್‌ನನ್ನು ಸೋಮವಾರ ಮುಂಜಾನೆ ತಿಲಕ್‌ನಗರದಲ್ಲಿರುವ ಬಾಡಿಗೆ ಮನೆಯಲ್ಲಿ ಬಂಧಿಸಲಾಯಿತು. ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಲ್‌ನಲ್ಲಿ ಆತನ ವಿಚಾರಣೆ ನಡೆಯುತ್ತಿದೆ. ಇದರ ಬೆನ್ನಲ್ಲಿಯೇ ಆತನ ಲಿಂಕ್‌ಗಳು ಹಾಗೂ ಉದ್ದೇಶಗಳು ಬಹಳ ಆತಂಕಕಾರಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ. ಭಯೋತ್ಪಾದಕ ಸಂಘಟನೆ ಅಲ್‌ಖೈದಾ ಜೊತೆ ಆತನ ಸಂಪರ್ಕವಿದ್ದು, ಉಗ್ರನ ವಿದೇಶಿ ಸಂಘಟನೆ ಸಂಪರ್ಕದ ಬಗ್ಗೆ ಹಲವು ದಿನಗಳಿಂದ ಅಂತರಿಕ ಗುಪ್ತಚರ (ಐಬಿ) ನಿಗಾ ವಹಿಸಿತ್ತು. ಆತ ಎಲ್ಲಿರುತ್ತಾನೆ ಎನ್ನುವ ಸೂಕ್ತ ಮಾಹಿತಿಯನ್ನು ಬೆಂಗಳೂರು ಪೊಲೀಸರೊಂದಿಗೆ ಹಂಚಿಕೊಂಡ ಬಳಿಕ, ಈತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉಗ್ರ ಅಖ್ತರ್ ಹುಸೇನ್ ಕೇವಲ 10ನೇ ತರಗಿ ಓದಿದ್ದ. ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನೆ ಮಾಡುವುದು ಈತನ ಪ್ರಮುಖ ಕೆಲಸವಾಗಿತ್ತು. ಸೋಷಿಯಲ್ ಮೀಡಿಯಾ ಬಳಸಿಕೊಂಡು ಭಾರತದಲ್ಲಿ ಹಾಗೂ ಬೆಂಗಳೂರಿನಲ್ಲಿ ಗಲಭೆ ಎಬ್ಬಿಸುವ ನಿಟ್ಟಿನಲ್ಲಿ ಪೋಸ್ಟ್‌ಗಳನ್ನು ಮಾಡುತ್ತಿದ್ದ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಶಾಂತಿ ಹದಗೆಡಿಸೋ ಕೆಲಸ ಮಾಡುತ್ತಿದ್ದ. ಬೆಂಗಳೂರು ಮತ್ತು ಬೇರೆ ಬೇರೆ ಜಿಲ್ಲೆಯ ಮಾಹಿತಿಯನ್ನು, ಅಲ್ಲಿನ ಬೇರೆ ಬೇರೆ ಸಂಘಟನೆಯ ಜೊತೆ ಹಂಚಿಕೊಳ್ಳುತ್ತಿದ್ದ. ಬೇರೆ ಸಂಘಟನೆಗಳ ಜೊತೆ ನಿರಂತರವಾಗಿ ಸಂಪರ್ಕ ಹೊಂದಿದ್ದ ಈತ ಸೋಷಿಯಲ್ ಮೀಡಿಯಾ ಬಳಸಿಕೊಂಡು ಭಾರತದ ಮೇಲೆ ದಾಳಿ ಮಾಡುವ ಯೋಜನೆ ರೂಪಿಸಿದ್ದ. ಸ್ಥಳೀಯವಾಗಿ ಗಲಭೆ ಎಬ್ಬಿಸೋದು ಈತನ ಉದ್ದೇಶ ಆಗಿತ್ತು ಅದಕ್ಕಾಗಿ ಧಾರ್ಮಿಕ ಭಾವನೆಗಳ ಮೂಲಕ ಪ್ರಚೋದನೆ ಮಾಡುತ್ತಿದ್ದ.
ಆರಂಭದಲ್ಲಿ ಅಲ್ ಖೈದಾ ಉಗ್ರ ಸಂಘಟನೆ ಜೊತೆ ಸೇರಲು ಹವಣಿಸುತ್ತಾ ಇದ್ದ ಹುಸೇನ್ಗೆ ಜಿಹಾದಿ ಆಗಬೇಕು ಎನ್ನುವ ಉದ್ದೇಶವಿತ್ತು. ಜಿಹಾದ್ ಗಾಗಿ ಪ್ರಾಣ ಬಿಡಲು ತಯಾರಾಗಿರಬೇಕು ಜಿಹಾದಿಗಳಾಗಿ ನಮ್ಮನ್ನ ನಾವು ಅರ್ಪಿಸಿಕೊಳ್ಳಬೇಕು ಎಂದು ಪ್ರಚೋದನೆ ನೀಡುತ್ತಿದ್ದ. ಆಲ್ ಖೈದಾ ಉಗ್ರ ಸಂಘಟನೆ ಜತೆ ಸಂಪರ್ಕದಲ್ಲಿ ಇದ್ದಿದು ಪ್ರಾಥಮಿಕ ಮಾಹಿತಿಯಲ್ಲಿ ಬಹಿರಂಗ. ಫೇಸ್ ಬುಕ್, ವಾಟ್ಸಪ್, ಮೆಸೆಂಜರ್ ಮೂಲಕ ಉಗ್ರ ಸಂಘಟನೆ ಸಂಪರ್ಕದಲ್ಲಿ ಇದ್ದ ಅಖ್ತರ್. ದಾಳಿ ವೇಳೆ ಮೊಬೈಲ್ ನಲ್ಲಿ ಚಾಟ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯ. ಈಗಾಗಲೇ ಬಂಧಿತ ವ್ಯಕ್ತಿ ಯಾರ ಜತೆ ಸಂಪರ್ಕದಲ್ಲಿ ಇದ್ದ ಎಂಬುದರ ಬಗ್ಗೆ ಕೂಡ ಲಭ್ಯವಾಗಿದೆ. ಶಂಕಿತ ಉಗ್ರನ ಜತೆ ಸಂರ್ಪಕದಲ್ಲಿದ್ದ ಹಲವು ವ್ಯಕ್ತಿಗಳಿಗೆ ರಹಸ್ಯವಾಗಿ ಹುಡುಕಾಟ ಮಾಡಲಾಗುತ್ತಿದೆ. ರಾಜ್ಯವಲ್ಲದೆ ಬೇರೆ ರಾಜ್ಯಗಳಲ್ಲೂ ಹುಡುಕಾಟ ನಡೆಯುತ್ತಿದೆ.
23 ವರ್ಷದ ಹುಸೇನ್ ಅಸ್ಸಾಂ ಮೂಲದವನು. ಅಸ್ಸಾಂನಲ್ಲಿ ಈತನ ತಾಯಿ ವಾಸವಿದ್ದಾರೆ. ಕಡುಬಡತನದಲ್ಲಿದ್ದ ಈತ ಹಣಕ್ಕಾಗಿ ಜಿಹಾದ್ ಮಾಡುತ್ತಿದ್ದ. ಬೆಳಗ್ಗೆ ಮನೆಯಲ್ಲಿಯೇ ಇರುತ್ತಿದ್ದ ಈತ ರಾತ್ರಿಯ ವೇಳೆ ಮಾತ್ರ ಫುಡ್ ಡೆಲಿವರಿಗೆ ಹೋಗ್ತಿದ್ದ. ಮನೆಯಲ್ಲಿ ಲ್ಯಾಪ್ ಟಾಪ್, ಮೊಬೈಲ್‌ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಲ್‌ಖೈದಾ ಜೊತೆ ಸಂಬಂಧ ಹೊಂದಿದ್ದ ಅಖ್ತರ್ ಹುಸೇನ್ ಪೊಲೀಸರಿಗೆ ಸಿಕ್ಕಿದ್ದೇ ರೋಚಕ ಕಥೆ. ತನ್ನ ಮೊಬೈಲ್ ಕಾರಣದಿಂದಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಅದಲ್ಲದೆ, ಮೊಬೈಲ್ ಮೂಲಕವೇ ಈತ ಅಲ್‌ಖೈದಾ ಜೊತೆ ಸಂಬಂಧವಿರುವುದು ದೃಢಪಟ್ಟಿದೆ. ಕಳೆದ ಮೂರು ತಿಂಗಳಿನಿಂದ ಗುಪ್ತಚರ ಇಲಾಖೆ ಈತನ ಚಲನವಲನದ ಮೇಲೆ ನಿಗಾ ಇರಿಸಿತ್ತು. ಅಲ್‌ಖೈದಾಗೆ ಸಂಬಂಧಪಟ್ಟ ವ್ಯಕ್ತಿ
ಗಳಿಗೆ ನಿರಂತರ ಮೆಸೇಜ್‌ಗಳನ್ನೂ ಮಾಡಿದ್ದ. ಅಲ್ ಖೈದಾ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳಿಗೆ ಮೇಸೆಜ್ ಮಾಡಿದ್ದ. ಬೆಂಗಳೂರಿನಲ್ಲಿ ಅಹಿತಕರ ಘಟನೆಗಳು ನಡೆಸುವ ಬಗ್ಗೆ, ಅದನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಪ್ಲ್ಯಾನ್ ಮಾಡುತ್ತಿದ್ದ. ಅಲ್ ಖೈದಾ ಸಂಘಟನೆ ಜೊತೆ ಸಂಪರ್ಕ ಹೊಂದಿರೋ ಬಗ್ಗೆ ಧೃಡವಾದ ಬಳಿಕ ಬಂಧನ ಮಾಡಿದ ಸಿಸಿಬಿ ಹಾಗೂ ಐಬಿ ಈತನ ಬಂಧನ ಮಾಡಿದೆ.
ಕಳೆದ ಮೂರು ತಿಂಗಳಲ್ಲಿ ಹಲವು ಬಾರಿ ಬೆಂಗಳೂರಿಂದ ಮುಂಬೈಗೆ ಪ್ರಯಾಣ ಮಾಡಿದ್ದ ಅಖ್ತರ್‌ನನ್ನು ಅಡುಗೋಡಿ ಟೆಕ್ನಿಕಲ್ ಸೆಲ್‌ನಲ್ಲಿ ವಿಚಾರಣೆ ಮಾಡಲಾಗುತ್ತಿದೆ. ಆತನ ಮೊಬೈಲ್ ವಶಕ್ಕೆ ಪಡೆದು ಡೇಟಾಗಳನ್ನು ಪೊಲೀಸರು ಪಡೆಯುತ್ತಿದ್ದಾರೆ. ತಿಲಕ್‌ನಗರ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ಅನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ವಿಚಾರಣೆ ವೇಳೆ ಆರೋಪಿ ವಾಟ್ಸಪ್ ಗ್ರೂಪ್ ಬಗ್ಗೆ ಮಾಹಿತಿ ಸಿಕ್ಕಿದೆ. ಉಗ್ರವಾದದ ಬಗ್ಗೆ ಪ್ರಚೋದನೆ ನೀಡಲು ವಾಟ್ಸಪ್ ಗ್ರೂಪ್ ಬಳಕೆ ಮಾಡುತ್ತಿದ್ದ ಈತ ವಾಟ್ಸಪ್ ಗ್ರೂಪ್ ಮಾಡಿ ಪೋಸ್ಟ್ ಹಾಕುತ್ತಿದ್ದ, ಧಾರ್ಮಿಕ ಭಾವನೆ ಮೂಲಕ ಯುವಕರನ್ನು ಭಯೋತ್ಪಾದನೆಗೆ ಸೆಳೆಯುವ ತಂತ್ರ ಮಾಡುತ್ತಿದ್ದ.