ಇತ್ತೀಚಿನ ಸುದ್ದಿ
ಸಂಭ್ರಮ- ಸಡಗರಕ್ಕೆ ಸಾಕ್ಷಿಯಾದ ಕಡಲನಗರಿಯ ಮಂಗಳಾ ಕ್ರೀಡಾಂಗಣ: 4500 ಕ್ರೀಡಾಪಟುಗಳ ಪಾದಸ್ಪರ್ಶ
17/01/2025, 22:36
ಮಂಗಳೂರು(reporterkarnataka.com): ನಗರದ ಮಂಗಳಾ ಕ್ರೀಡಾಂಗಣ ಇಂದು ಸಂಭ್ರಮ- ಸಡಗರಕ್ಕೆ ಸಾಕ್ಷಿಯಾಯಿತು. ಸುಮಾರು 4500 ಕ್ರೀಡಾಪಟುಗಳ ಸಂಗಮದ ತಾಣವಾಯಿತು. ಇದಕ್ಕೆ ಕಾರಣ ಕರ್ನಾಟಕ ಕ್ರೀಡಾಕೂಟ 2025.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಯುವಜನ ಮತ್ತು ಕ್ರೀಡಾ ಇಲಾಖೆ ಮತ್ತು ಜಿಲ್ಲಾಡಳಿತ ಕ್ರೀಡಾಕೂಟವನ್ನು ಆಯೋಜಿಸಿತ್ತು. ಸಿಎಂ ಜತೆಗೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ.ಗೋವಿಂದರಾಜು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಐವನ್ ಡಿಸೋಜಾ, ಮಾಜಿ ಸಚಿವ ರಮಾನಾಥ ರೈ ಸೇರಿ ಜಿಲ್ಲೆಯ ಶಾಸಕರುಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಮಾತನಾಡಿ, ಕ್ರೀಡಾಪಟುಗಳು, ಕೋಚ್ ಗಳು ಮತ್ತು ಕ್ರೀಡಾ ಇಲಾಖೆ ಎಷ್ಟಾದರೂ ಹಣ-ಸವಲತ್ತು ಕೇಳಿ. ನಾನು ಕೊಡ್ತೀನಿ. ಆದರೆ ಒಲಂಪಿಕ್ ನಲ್ಲಿ ರಾಜ್ಯದ ಪಟುಗಳು ದೇಶಕ್ಕಾಗಿ ಮೆಡಲ್ ತನ್ನಿ ಎಂದು ಕರೆ ನೀಡಿದರು.
ಅಗತ್ಯ ವೇದಿಕೆ ಮತ್ತು ಉತ್ತಮ ಪ್ರೋತ್ಸಾಹ ಇಲ್ಲದಿದ್ದರೆ ಕ್ರೀಡಾ ಕ್ಷೇತ್ರ ಮತ್ತು ಕ್ರೀಡಾಪಟುಗಳು ಬೆಳವಣಿಗೆ ಆಗಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಸರ್ಕಾರ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಹಾಜರಾತಿ ಸೇರಿ ಇನ್ನಿತರೆ ರಿಯಾಯ್ತಿಗಳನ್ನು ಕೊಡುವ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.
ಒಲಂಪಿಕ್ ನಲ್ಲಿ ಮೆಡಲ್ ತಂದವರಿಗೆ 6 ಕೋಟಿ ರೂಪಾಯಿ ಕೊಡ್ತೀವಿ. ಹಾಗೆಯೇ ಏಷ್ಯಾ ಕ್ರೀಡಾಕೂಟ ಮತ್ತು ರಾಷ್ಟ್ರಮಟ್ಟದಲ್ಲಿ ಪದಕ ತಂದವರಿಗೂ ನಗದು ಬಹುಮಾನ ಕೊಡುತ್ತಿದ್ದೇವೆ. ಈ ಪ್ರೋತ್ಸಾಹ ಸದುಪಯೋಗಪಡಿಸಿಕೊಂಡು ಮೆಡಲ್ ಗಳನ್ನು ತಂದು ಕ್ರೀಡಾಕ್ಷೇತ್ರವನ್ನು ಬೆಳಗಿಸಿ, ಬೆಳೆಸಿ ಎಂದು ಕರೆ ನೀಡಿದರು.