ಇತ್ತೀಚಿನ ಸುದ್ದಿ
ಸಮಗ್ರ ಅಭಿವೃದ್ಧಿ ಪಿಎಂ ಜನ್‍ಮನ್ ಕಾರ್ಯಕ್ರಮಕ್ಕೆ ದ.ಕ. ಜಿಲ್ಲಾಡಳಿತ ಸಜ್ಜು: ದುರ್ಬಲ ಬುಡಕಟ್ಟು ಸಮುದಾಯದವರ ಅಭಿವೃದ್ಧಿ ಮಿಷನ್
08/01/2024, 21:10
ಮಂಗಳೂರು(reporterkarnataka.com): ಪ್ರಧಾನಮಂತ್ರಿ ಜನ್ ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಯೋಜನೆ ಅಡಿ ವಿಶೇಷವಾಗಿ ದುರ್ಬಲ ಬುಡಕಟ್ಟು ಸಮುದಾಯದವರ ಅಭಿವೃದ್ಧಿ ಮಿಷನ್ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಜ್ಜುಗೊಂಡಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ತಿಳಿಸಿದ್ದಾರೆ.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಸಂಬಂಧ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರಗ ಸಮುದಾಯದವರು ಬುಡಕಟ್ಟು ಸಮುದಾಯದವರಾಗಿದ್ದು ಎಲ್ಲಾ ಹಂತದ ಸರಕಾರಿ ಯೋಜನೆಗಳನ್ನು ಅವರಿಗೆ ತಲುಪಿಸಲು ಕ್ರಮ ವಹಿಸಲು ಅವರು ಸೂಚಿಸಿದರು.
ಆರೋಗ್ಯ ಕಾರ್ಡ್, ಕಾರ್ಮಿಕ ಕಾರ್ಡ್, ಸೇರಿದಂತೆ ವಿವಿಧ ದಾಖಲೆಗಳನ್ನು ಶ್ರಮವಹಿಸಿ ನೀಡಬೇಕು. ಶಾಲಾ ಬಿಟ್ಟ ಮಕ್ಕಳನ್ನು ಗುರುತಿಸಿ ಮತ್ತೆ ಶಾಲೆ ಸೇರಿಸಬೇಕು. ಆಶ್ರಮ ಶಾಲೆಗಳ ಫಲಿತಾಂಶವನ್ನು ಸುಧಾರಿಸಬೇಕು. ಅಗತ್ಯವಿದ್ದಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವಂತೆ ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಕೊರಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಕೆಲವೆಡೆ ಮೊಬೈಲ್ ಸಿಗ್ನಲ್ ಗಳು ಇಲ್ಲದಿರುವ ಪ್ರದೇಶಗಳಲ್ಲಿ ಮೊಬೈಲ್ ಟವರ್ ಸ್ಥಾಪಿಸಲು ಕ್ರಮ ಕೈಗೊಳ್ಳಲು ಅವರು ಬಿಎಸ್‍ಎನ್‍ಎಲ್ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್ ಜಿ., ಐಟಿಡಿಪಿ ಅಧಿಕಾರಿ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.