ಇತ್ತೀಚಿನ ಸುದ್ದಿ
ಸಾಲದ ಶೂಲಕ್ಕೆ ಬಲಿಯಾದ ಕಾಲೇಜು ಉಪನ್ಯಾಸಕ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣು?
19/04/2024, 19:29

*ಬೆಳ್ಳಂ ಬೆಳಿಗ್ಗೆ ನಿರ್ಜನ ಪ್ರದೇಶದಲ್ಲಿ ಸಾವಿಗೆ ಶರಣಾಗಿರುವ ಉಪನ್ಯಾಸಕನ ಸಾವಿನ ಸುತ್ತ ಅನುಮಾನದ ಹುತ್ತ*
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡಿ ದಾರಿ ದೀಪವಾಗ ಬೇಕಿದ್ದ ಕಾಲೇಜು ಉಪನ್ಯಾಸಕ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಹೊಸಹಳ್ಳಿ ಗೇಟ್ ಬಳಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಇಂಗಲವಾಡಿ ಗ್ರಾಮದ ಮಹದೇವಪ್ಪ ಎಂಬುವರರ ಪುತ್ರ ಮಾದಪ್ಪ (45) ಮೃತ ಉಪನ್ಯಾಸಕ ಎಂದು ತಿಳಿದು ಬಂದಿದೆ.
ನಂಜನಗೂಡು ಪಟ್ಟಣದ ವಿ.ಎ. ಲೇ ಔಟ್ ನಲ್ಲಿ ಸ್ವಂತ ಮನೆ ಹೊಂದಿದ್ದು ವಾಸವಾಗಿದ್ದರು. ಕಳೆದ ಎರಡು ವರ್ಷಗಳ ಹಿಂದೆ ನೂತನ ಮನೆ ಗೃಹಪ್ರವೇಶವು ಕೂಡ ನಡೆದಿತ್ತು.
ಚಾಮರಾಜನಗರ ಜಿಲ್ಲಾ ಕೇಂದ್ರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಕಷ್ಟು ವರ್ಷಗಳಿಂದಲೂ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೃತ ಉಪನ್ಯಾಸಕ ಮಾದಪ್ಪ ಎಂಬುವವರ ಪತ್ನಿ ಪೂರ್ಣಿಮಾ ಎಂಬುವರು ಕೂಡ ಜೆಎಸ್ಎಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದು,ಪತಿ ಪತ್ನಿ ಅನ್ನೋನ್ಯವಾಗಿ ಜೀವನ ಸಾಗಿಸುತ್ತಿದ್ದರು. ಇವರಿಬ್ಬರಿಗೆ 16 ವರ್ಷದ ಪುತ್ರಿಯೂ ಕೂಡ ಇದ್ದಾಳೆ ಎಂಬ ಮಾಹಿತಿ ತಿಳಿದು ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ರಘು, ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣವನ್ನು ದಾಖಲು ಮಾಡಿಕೊಂಡು ಶವವನ್ನು ನಂಜನಗೂಡು ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಈಗಾಗಲೇ ನಿರ್ಜನ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿರುವ ಉಪನ್ಯಾಸಕನ ಸಾವಿನ ಸುತ್ತ ಹಲವು ಅನುಮಾನದ ಹುತ್ತ ಬೆಳೆದು ನಿಂತಿದೆ.
ಪೊಲೀಸರ ತನಿಖೆ ಬಳಿಕ ಸ್ಪಷ್ಟ ಮಾಹಿತಿ ತಿಳಿದು ಬರಲಿದೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.