ಇತ್ತೀಚಿನ ಸುದ್ದಿ
ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಫೆಬ್ರವರಿ ತಿಂಗಳ ಟಾಪರ್ ಆಗಿ ಭೀಮಪ್ಪ ಬೇನಾಳ ಮತ್ತು ಸುನಿಕ್ಷಾ ಪೂಜಾರಿ ಆಯ್ಕೆ
12/03/2024, 14:49

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ
ಫೆಬ್ರವರಿ ತಿಂಗಳ ಟಾಪರ್ ಆಗಿ ಭೀಮಪ್ಪ ಬೇನಾಳ ಮತ್ತು ಸುನಿಕ್ಷಾ ಪೂಜಾರಿ ಆಯ್ಕೆಯಾಗಿದ್ದಾರೆ.
ಮಹೇಶ್ ಬೇನಾಳ ಮತ್ತು ಚಂದ್ರಕಲಾ ಬೇನಾಳ ದಂಪತಿಯ ಪುತ್ರನಾದ ಭೀಮಪ್ಪ ಬೇನಾಳ ಮೂಲತಃ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಢಾಣಕಶಿರೂರು ಎಂಬ ಗ್ರಾಮದ ಬಾಲಕ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾನೆ. ಈತ ಬೆಂಗಳೂರಿನ ಆಂಗ್ಲ ಮಾಧ್ಯಮ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿ. ಸಂಗೀತದಲ್ಲಿ ತುಂಬಾ ಆಸಕ್ತಿ ಉಳ್ಳವನಾಗಿದ್ದು, ಗುರುವಿಲ್ಲದೆ ಯೂಟ್ಯೂಬ್ ನೋಡಿಕೊಂಡು ತಂದೆಯ ಸಹಾಯದೊಂದಿಗೆ ಕೀಬೋರ್ಡ್ ನುಡಿಸುವುದು ಮತ್ತು ಹಾಡನ್ನು ಹಾಡುವುದು ಕಲಿಯುತ್ತಿದ್ದಾನೆ. ಈತ ಚಲನಚಿತ್ರ ಗೀತೆಗಳು, ಭಕ್ತಿ ಗೀತೆಗಳು, ದೇಶಭಕ್ತಿ ಗೀತೆಗಳು, ಜಾನಪದ ಗೀತೆಗಳು ಹಾಗೂ ದಾಸರ ಪದಗಳು ಮತ್ತು ವಚನಗಳನ್ನು ಕೀಬೋರ್ಡ್ ನುಡಿಸುತ್ತಾ, ಹಾಡಲು ಶಕ್ತನಾಗಿದ್ದಾನೆ. ಸ್ವಾತಂತ್ರ್ಯ ದಿನಾಚರಣೆ ಗಣರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಮತ್ತು ಗಣೇಶನ ಹಬ್ಬ ಹೀಗೆ ಹಲವಾರು ಕಾರ್ಯಕ್ರಮದ ವೇದಿಕೆಗಳಲ್ಲಿ ಹಾಡಿ ಪ್ರಶಸ್ತಿಗಳನ್ನು ಪಡೆದಿದ್ದಾನೆ. ವಿಜಯಪಥ ನಡೆಸಿದ ರಾಜ್ಯಮಟ್ಟದ ವಚನಾಮೃತದಲ್ಲಿ ಭಾಗವಹಿಸಿ ಬಾಲಬಸವ ಪ್ರಶಸ್ತಿ-2023 ಪಡೆದಿದ್ದಾನೆ. ವರ್ಷದ ಸಾಧಕರತ್ನ ಪ್ರಶಸ್ತಿ-2023 ದೊರಕಿದೆ. ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾನೆ. ಚಿತ್ರಕಲೆ ಹಾಗೂ ಕರಾಟೆಯಲ್ಲಿ ಬಹುಮಾನಗಳು ಮತ್ತು ಪ್ರಶಸ್ತಿಗಳನ್ನು ಪಡೆದಿದ್ದಾನೆ. ಹಾಗೂ ಪ್ರತೀ ದಿನ ವಾಯ್ಸ್ ಆಫ್ ಆರಾಧನದಲ್ಲಿ ಭಾಗವಹಿಸಿ ಅಕ್ಟೋಬರ್ ತಿಂಗಳು-2022 ಏಪ್ರಿಲ್ ಮತ್ತು ಜೂನ್ ತಿಂಗಳು-2023 ಫೆಬ್ರುವರಿ ತಿಂಗಳು-2024 ವಿಜೇತರಾಗಿದ್ದಾನೆ.
ಸುನಿಕ್ಷಾ ಪೂಜಾರಿ ಮೂಡುಬಿದಿರೆಯ ಅಮನಬೆಟ್ಟು ಪಡುಮಾರ್ನಾಡಿನ ಬಾಲಕಿ.
ತಂದೆಯ ಹೆಸರು ಸುರೇಂದ್ರ ಸಿ. ಪೂಜಾರಿ, ತಾಯಿ ಆಶಾ ಸುರೇಂದ್ರ ಪೂಜಾರಿ. ಮೂಡುಬಿದ್ರೆ ಅಲಂಗಾರಿನ ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದಾಳೆ. ಚಿತ್ರ ಬಿಡಿಸುವುದು, ಯಕ್ಷಗಾನ, ಕುಣಿತ ಭಜನೆ , ಸಂಗೀತ , ಭಜನೆಯಲ್ಲಿ ಈಕೆಗೆ ಆಸಕ್ತಿ.
ಸಂಗೀತವನ್ನು ತುಳಸಿ ರಾಘವೇಂದ್ರ ಪೆಜತ್ತಾಯ ಇವರಲ್ಲಿ, ಕುಣಿತ ಭಜನೆಯನ್ನು ಕೋಟೆ ಬಾಗಿಲು ಮಹಮ್ಮಾಯಿ ಭಜನ ಮಂಡಳಿಯ ಅಶೋಕ್ ನಾಯಕ್ ಕಳಸಬೈಲು ಅವರಲ್ಲಿ ಹಾಗೂ ಯಕ್ಷಗಾನವನ್ನು ಶಿವಕುಮಾರ್ ಕಟೀಲ್ ಅವರ ಬಳಿ ಕಲಿಯುತ್ತಿದ್ದಾಳೆ. ಧರ್ಮಸ್ಥಳದವರು ಆಯೋಜಿಸಿದ ಯೋಗ ಶಿಬಿರದಲ್ಲಿ ಪಾಲ್ಗೊಂಡಿರುತ್ತಾಳೆ. ಇವಳು ಛದ್ಮವೇಷ, ಕಥೆ ಹೇಳುವುದು, ಆಕ್ಷನ್ ಸಾಂಗ್, ಜಾನಪದ ಹಾಡು, ಭಕ್ತಿಗೀತೆ ಮುಂತಾದರಲ್ಲಿ ಪ್ರಥಮ ಸ್ಥಾನ ಹೊಂದಿರುತ್ತಾಳೆ ಮತ್ತು ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿ ಎಂದು ಹೆಸರುಗಳಿಸಿರುತ್ತಾಳೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸುರಕ್ಷತಾ ಇಲಾಖೆ ಆಯೋಜಿಸಿದ ಮೂಡುಬಿದಿರೆ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ 2022- 23ರಲ್ಲಿ ಕಥೆ ಹೇಳುವುದರಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಸಾರ್ವಜನಿಕ ವಲಯದಲ್ಲಿ ಹಲವು ಪ್ರಶಸ್ತಿಗಳನ್ನು ಮತ್ತು ಅಭಿನಂದನೆ ಪತ್ರಗಳು ಬಂದಿರುತ್ತದೆ.