ಇತ್ತೀಚಿನ ಸುದ್ದಿ
ರಸ್ತೆ ಅಗಲೀಕರಣ: ಸಂತ್ರಸ್ತರಿಗೆ ವೈಯಕ್ತಿಕ ಪರಿಹಾರ ವಿತರಿಸಿದ ಶಾಸಕ ನಾರಾ ಭರತ್ ರೆಡ್ಡಿ
08/12/2024, 20:05
ಗಣೇಶ್ ಇನಾಂದಾರ ಬಳ್ಳಾರಿ
info.reporterkarnataka@gmail.com
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ 7,8ನೇ ವಾರ್ಡಿನ ಬಾಪೂಜಿ ನಗರದಲ್ಲಿ ರಸ್ತೆ ಅಗಲೀಕರಣದ ವೇಳೆ ಸಂಪೂರ್ಣ ಮನೆ ತೆರವು ಮಾಡಿಕೊಂಡ 12 ಜನ ಸಂತ್ರಸ್ತರಿಗೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ವೈಯಕ್ತಿಕವಾಗಿ ತಲಾ 50 ಸಾವಿರ ರೂ. ಪರಿಹಾರ ವಿತರಿಸಿದರು.
ಬಳ್ಳಾರಿಯ ಗಾಂಧಿ ನಗರದ ತಮ್ಮ ಕಚೇರಿ ವಿಜಯೀಭವದಲ್ಲಿ ಭಾನುವಾರ ಮಧ್ಯಾಹ್ನ ಚೆಕ್ ಮೂಲಕ ಪರಿಹಾರ ವಿತರಿಸಿದರು.
ಬಾಪೂಜಿ ನಗರದ ಫಲಾನುಭವಿಗಳಾದ ಲಕ್ಷ್ಮೀ, ಇಂದು, ಹುಲಿಯಮ್ಮ, ಮೀನಾಕ್ಷಿ, ರತ್ನಮ್ಮ, ಗಂಗಮ್ಮ, ಮಾರೆಮ್ಮ, ಶಿವಮ್ಮ, ಹೆಚ್.ವಂದನಾ, ಬಿ.ಗಂಗಮ್ಮ, ಸರಸ್ವತಿ, ವಿದ್ಯಾಶ್ರೀ ಅವರು ಶಾಸಕ ನಾರಾ ಭರತ್ ರೆಡ್ಡಿಯವರಿಂದ ಚೆಕ್ ಪಡೆದುಕೊಂಡರು.
ಅಂದ್ರಾಳು ಸಮೀಪ ಈಗಾಗಲೇ ಸರ್ಕಾರಿ ಜಾಗವನ್ನು ಗುರುತಿಸಲಾಗಿದ್ದು, ಅಲ್ಲಿ ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮನೆ ಕಳೆದುಕೊಂಡಿರುವ 12 ಜನರಿಗೆ ಶೀಘ್ರ ಮನೆ ನಿರ್ಮಾಣ ಮಾಡಿ ಕೊಡಲಾಗುವುದು ಎಂದು ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದರು.
ಈ ಸಂದರ್ಭ ಪಾಲಿಕೆಯ ಸದಸ್ಯರಾದ ರಾಮಾಂಜನೇಯ, ಕಾಂಗ್ರೆಸ್ ಮುಖಂಡರಾದ ಎ.ಮಾನಯ್ಯ, ಶಿವರಾಜ್, ಶಂಕರ್, ನಾಗೇಂದ್ರಪ್ಪ, ಉದ್ಯಮಿ ಚಂದ್ರಶೇಖರ ರೆಡ್ಡಿ ಹಾಜರಿದ್ದರು.