ಇತ್ತೀಚಿನ ಸುದ್ದಿ
ರಾಷ್ಟ್ರಪತಿ ಮಂಗಳೂರು ವಾಸ್ತವ್ಯ: ಬಿಗಿ ಬಂದೋಬಸ್ತ್; ಅಂತಿಮ ಹಂತದ ಸಿದ್ದತೆಗೆ ಜಿಲ್ಲಾಧಿಕಾರಿ ಸೂಚನೆ
05/10/2021, 21:46
ಮಂಗಳೂರು(reporterkarnataka.com): ರಾಜ್ಯ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಶೃಂಗೇರಿಯ ಶ್ರೀ ಶಾರದಾ ದೇವಸ್ಥಾನಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಇದೇ ಅ.7ರಂದು ಮಂಗಳೂರಿಗೆ ಆಗಮಿಸಿ ವಾಸ್ತವ್ಯ ಮಾಡಿ, ಆ.8ರ ಸಂಜೆ ಮಂಗಳೂರಿನಿಂದ ನವದೆಹಲಿಗೆ ತೆರಳುವರು.
ರಾಷ್ಟಪತಿ ಭೇಟಿ ಹಿನ್ನಲೆಯಲ್ಲಿ ವಸತಿ, ಊಟೋಪಚಾರ ಹಾಗೂ ಬಂದೋಬಸ್ತ್ ಗೆ ಸಂಬಂಧಿಸಿದ ಅಂತಿಮ ಹಂತದ ಸಿದ್ದತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರಪತಿಗಳು ಮಂಗಳೂರಿನಲ್ಲಿ ವಾಸ್ತವ್ಯ ಮಾಡಲಿರುವ ಹಿನ್ನಲೆಯಲ್ಲಿ ಅಂತಿಮ ಹಂತದಲ್ಲಿ ಕೈಗೊಳ್ಳಬೇಕಾದ ಸಿದ್ದತೆಗಳು ಹಾಗೂ ಎಚ್ಚರಿಕಾ ಕ್ರಮಗಳ ಕುರಿತು ಅ.5ರ ಮಂಗಳವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅ.7 ರಂದು ಮಂಗಳೂರು ನಗರದಲ್ಲಿ ವಾಸ್ತವ್ಯ ಹಾಗೂ 8ರ ಸಂಜೆ ಏರ್‍ಪೋರ್ಟ್‍ನಿಂದ ನವದೆಹಲಿಗೆ ತೆರಳಲಿರುವ ರಾಷ್ಟ್ರಪತಿಗಳು, ಅವರೊಂದಿಗೆ ಆಗಮಿಸಲಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಉತ್ತಮ ವಾಸ್ತವ್ಯ, ಊಟೋಪಚಾರವನ್ನು ಒದಗಿಸುವ ಜವಬ್ದಾರಿ ಜಿಲ್ಲಾಡಳಿತಕ್ಕೆ ಒದಗಿಬಂದಿದೆ, ರಾಷ್ಟ್ರದ ಪ್ರಥಮ ಪ್ರಜೆಯ ವಾಸ್ತವ್ಯಕ್ಕೆ ಯಾವುದೊಂದು ಸಣ್ಣಪುಟ್ಟ ಲೋಪವಾಗದಂತೆಯೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಅತ್ಯುತ್ತಮವಾದ ರೀತಿಯಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿಕೊಡಬೇಕು ಎಂದರು.
ಅದಕ್ಕಾಗಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಅತಿಥಿ ಗೃಹ ಸಂಪೂರ್ಣ ಸಿಂಗಾರಗೊಳ್ಳಬೇಕು, ಅಂತಿಮ ಹಂತದ ಸಿದ್ದತೆಗಳು ಪರಿಪೂರ್ಣವಾಗಿರಬೇಕು, ಅಗತ್ಯ ಮೂಲಭೂತ ಸೌಕರ್ಯಗಳಲ್ಲಿ ಯಾವುದೇ ಕೊರತೆ ಎದುರಾಗಬಾರದು, ಸ್ಪಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕು, ಮಹಾನಗರ ಪಾಲಿಕೆ ವತಿಯಿಂದ ಅತಿಥಿ ಗೃಹದ ಆಸುಪಾಸಿನಲ್ಲಿಯೂ ಕೂಡ ಉತ್ತಮ ಸ್ಪಚ್ಚತೆ ಕಾಪಾಡಿಕೊಳ್ಳಬೇಕು, ಅದರಂತೆ ಏರ್‍ಪೋರ್ಟ್‍ನಿಂದ ಅತಿಥಿ ಗೃಹಕ್ಕೆ ಆಗಮಿಸುವ ರಸ್ತೆಗಳಲ್ಲಿ ಏನಾದರೂ ನ್ಯೂನ್ಯತೆಗಳಿದ್ದಲ್ಲೀ ಕೂಡಲೇ ದುರಸ್ತಿ ಪಡಿಸಿಕೊಳ್ಳಬೇಕು, ಅಂತಿಮ ಹಂತದ ಸಿದ್ದತೆಗಳು ಸಮಪರ್ಕವಾಗಿರಬೇಕು ಎಂದವರು ಹೇಳಿದರು.
ರಾಷ್ಟ್ರಪತಿಗಳ ವಾಸ್ತವ್ಯದ ವೇಳೆ ನಿಯೋಜಿಸಲಾಗಿರುವ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಆರ್‍ಟಿಪಿಸಿಆರ್ ತಪಾಸಣೆ ಆಗಬೇಕು ಹಾಗೂ ಆದ್ಯತೆ ಮೇರೆಗೆ ಅವರ ವರದಿಗಳನ್ನು ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದ ಜಿಲ್ಲಾಧಿಕಾರಿಯವರು, ಮೆಸ್ಕಾಂ ನಿಂದ ವಿದ್ಯುತ್ ಕಡಿತವಾಗಬಾರದು, ಬಿಎಸ್‍ಎನ್‍ಎಲ್‍ನಿಂದ ಹಾಟ್‍ಲೈನ್ ಎಳೆಯುವುದುನ್ನು ಕೂಡಲೇ ಪೂರ್ಣಗೊಳಿಸಬೇಕು ಹಾಗೂ ರಾಷ್ಟ್ರಪತಿಗಳ ಕರ್ತವ್ಯಕ್ಕೆ ನಿಯೋಜಿಸಲಾದ ಲೈಸನಿಂಗ್ ಅಧಿಕಾರಿಗಳು ಶಿಷ್ಟಾಚಾರದಂತೆಯೇ ವರ್ತಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆಯನ್ನು ಅವರು ನೀಡಿದರು.
ರಾಷ್ಟ್ರಪತಿಗಳ ಪ್ರವಾಸದಲ್ಲಿ ರಾಜ್ಯಪಾಲರು ಕೂಡ ಭಾಗವಹಿಸುತ್ತಿದ್ದಾರೆ, ಈ ದಿಸೆಯಲ್ಲಿ ಅವರ ವಾಸ್ತವ್ಯಕ್ಕೂ ಕಾಳಜಿ ನೀಡಬೇಕಿದೆ, ಸಂಬಂಧಿಸಿದ ಅಧಿಕಾರಿಗಳು ಜಾಗೃತರಾಗಿರಬೇಕು ಎಂದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಮಾತನಾಡಿ, ರಾಷ್ಟ್ರಪತಿಗಳ ಪ್ರವಾಸ ಕಾರ್ಯಕ್ರಮದಲ್ಲಿ ಬಿಗಿ ಭದ್ರತೆಯನ್ನು ಒದಗಿಸಲಾಗುತ್ತಿದೆ, ಈ ವೇಳೆ ಅಧಿಕಾರಿಗಳು ಸೇರಿದಂತೆ ಎಲ್ಲರನ್ನು ತಪಾಸಣೆಗೆ ಒಳಪಡಿಸಲಾಗುವುದು, ಆ ಸಮಯದಲ್ಲಿ ರಾಷ್ಟ್ರಪತಿಗಳ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು ಪೊಲೀಸರೊಂದಿಗೆ ಸಹಕರಿಸುವಂತೆ ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಮಾಣಿಕ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಯಶವಂತ್, ಸಹಾಯಕ ಕಮಾಂಡರ್ ಸಾಮ್ರಾಟ್, ಮಂಗಳೂರು ಏರ್‍ಪೋರ್ಟ್ ಅಧಿಕಾರಿ ಶ್ರೀಕಾಂತ್ ಟಾಟಾ, ಸಹಾಯಕ ಆಯುಕ್ತ ಮದನ್ ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿದ್ದರು.