ಇತ್ತೀಚಿನ ಸುದ್ದಿ
ರಾಮ ಮಂದಿರದಿಂದ ಟೂರಿಸಂಗೆ ಭರ್ಜರಿ ಬೇಡಿಕೆ: ಅಯೋಧ್ಯೆಯಲ್ಲಿ ಬಂಡವಾಳ ಹೂಡಿಕೆಗೆ ವಿದೇಶಿ ಕಂಪನಿಗಳು ಆಸಕ್ತಿ
22/09/2022, 22:07

ಲಕ್ನೋ(reporterkarnataka.com): ಅಯೋಧ್ಯೆಯಲ್ಲಿ ಐತಿಹಾಸಿಕ ರಾಮಮಂದಿರ ನಿರ್ಮಾಣ ಕಾರ್ಯಾರಂಭ ಆಗಿದ್ದೇ ಆಗಿದ್ದು, ಜಿಲ್ಲೆ ಹಾಗೂ ಸುತ್ತ ಮುತ್ತಲ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಭರ್ಜರಿ ಬೇಡಿಕೆ ಬಂದಿದೆ.
ರಾಮ ಜನ್ಮಭೂಮಿ ಅಯೋಧ್ಯೆ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತಿದ್ದು, 5-6 ದೇಶಗಳನ್ನು ಪ್ರತಿನಿಧಿಸುತ್ತಿರುವ ವಿದೇಶಿ ಹೂಡಿಕೆದಾರರ ನಿಯೋಗ ಇತ್ತೀಚೆಗಷ್ಟೇ ಉದ್ಯಮ ಸಾಧ್ಯತೆಗಳನ್ನು ಪರಿಶೀಲಿಸುವುದಕ್ಕೆ ಅಯೋಧ್ಯೆಗೆ ಭೇಟಿ ನೀಡಿತ್ತು.
12 ಸದಸ್ಯರ ನಿಯೋಗಕ್ಕೆ ಇಲ್ಲಿನ ಸ್ಥಳೀಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ರಾಮಜನ್ಮಭೂಮಿ ಹಾಗೂ ಸುತ್ತಮುತ್ತಲ ಪ್ರದೇಶಗಳನ್ನು ತೋರಿಸಿದ್ದು, ವಿದೇಶಿ ನಿಯೋಗ ಭಗವಾನ್ ರಾಮನ ದರ್ಶನವನ್ನೂ ಪಡೆದಿದ್ದಾರೆ.
ಅಮೆರಿಕದ ಫ್ಯಾನ್‌ಕಾನ್ ಫೀನಿಕ್ಸ್ ಗ್ರೂಪ್‌ನ ಸಿಇಒ ಮಾಲಿ ಫಾಕ್ನರ್ ನೇತೃತ್ವದ ನಿಯೋಗದಲ್ಲಿ ಜಪಾನ್‌ನ ತಕಿತಾ ಯೋಶಿನೋರಿ, ರಿಪಬ್ಲಿಕ್ ಆಫ್ ಕೊರಿಯಾದ ಹಿಲೆನ್-ಜಂಗ್-ಹೀ, ಫ್ರಾನ್ಸಿಸ್ ಆಲಿವರ್ ಮತ್ತು ಗಯಾನಾದ ಕಂಬರ್ ಬಾಚ್, ವಿಯೆಟ್ನಾಂನ ಅಲೆಕ್ಸ್ ಆಂಡ್ರೆ, ಕ್ಯಾಲಿಫೋರ್ನಿಯಾದ ಶಾಂಡಲ್ ಪ್ಯಾಟ್ರಿಕ್, ಪೆರುವಿನ ಜೆಸ್ಸಿಕಾ ವಲ್ಕನ್, ಈಕ್ವೆಡಾರ್‌ನ ಮರಿಯಾ ಏಂಜೆಲ್ ಲಡೋರಾ ನೇತೃತ್ವದಲ್ಲಿ ಈ ನಿಯೋಗ ಅಯೋಧ್ಯೆಗೆ ಭೇಟಿ ನೀಡಿದೆ. ಅಯೋಧ್ಯೆ ದಾಟುವ ಲಖನೌ-ಗೋರಖ್ ಪುರ ಹೆದ್ದಾರಿಯ ಬಳಿ ಇರುವ ಭೂಮಿಗಳನ್ನು ಈ ನಿಯೋಗಕ್ಕೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಪ್ರಸಾದ್, 2023 ರ ಜನವರಿಯಲ್ಲಿ ಲಖನೌ ನಲ್ಲಿ ನಡೆಯಲಿರುವ ಹೂಡಿಕೆದಾರರ ಶೃಂಗಸಭೆಯಲ್ಲಿ ವಿವಿಧ ಯೋಜನೆಗಳಿಗೆ ಎಂಒಯು ಸಹಿ ಆಗುವ ಸಾಧ್ಯತೆ ಇದೆ ಎಂದು ವಿವರಿಸಿದ್ದಾರೆ.
ಪ್ರವಾಸೋದ್ಯಮ ಕ್ಷೇತ್ರದಲ್ಲಿ 2 ಬಿಲಿಯನ್ ಡಾಲರ್ ಹೂಡಿಕೆಯಾಗುವ ಸಾಧ್ಯತೆ ಇದೆ, ಇದಕ್ಕಾಗಿ ವಿದೇಶಿ ಹೂಡಿಕೆದಾರರಿಗೆ ಅಯೋಧ್ಯೆ ಹಾಗೂ ರಾಜ್ಯದ ಇತರ ನಗರಗಳನ್ನು ಪರಿಚಯಿಸಲಾಗುತ್ತಿದೆ.
ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಪ್ರಕಾರ, ನಿಯೋಗದ ಸದಸ್ಯರು ಥೀಮ್ ಪಾರ್ಕ್, ಲೈಟ್ ಶೋ, ರೆಸಾರ್ಟ್ ನಿರ್ಮಾಣ, ವೆಲ್ ನೆಸ್ ಕೇಂದ್ರಗಳು, ನವೀಕರಿಸಬಹುದಾದ ಶಕ್ತಿ, ಕೌಶಲ್ಯ ಅಭಿವೃದ್ಧಿ ಕೇಂದ್ರಗಳು, ಎಫ್ಎಂಜಿಸಿ, ಫಿಲ್ಮ್ ಮೀಡಿಯಾ ಸೇರಿದಂತೆ ಹಲವು ಯೋಜನೆಗಳತ್ತ ಆಸಕ್ತಿ ತೋರಿದ್ದಾರೆ.