ಇತ್ತೀಚಿನ ಸುದ್ದಿ
ರಾಜ್ಯಾದ್ಯಂತ ಸರಕಾರಿ ನೌಕರರ ಮುಷ್ಕರ: ಕಡಲನಗರಿ ಮಂಗಳೂರಿನಲ್ಲೂ ಸಾರ್ವಜನಿಕ ಸೇವೆ ಸ್ತಬ್ದ
01/03/2023, 22:24
ಮಂಗಳೂರು(reporterkarnataka.com): 7ನೇ ವೇತನ ಪರಿಷ್ಕರಣೆಗೆ ಆಗ್ರಹಿಸಿ ಕರಾವಳಿ ಜಿಲ್ಲೆ ಗಳು ಸೇರಿದಂತೆ ರಾಜ್ಯಾದ್ಯಂತ ರಾಜ್ಯ ಸರಕಾರಿ ನೌಕರರು ಬುಧವಾರ ಮುಷ್ಕರ ನಡೆಸಿದ್ದು, ಮುಷ್ಕರದ ಬಿಸಿ ಕಡಲನಗರಿ ಮಂಗಳೂರಿಗೂ ತಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗಿನಿಂದ ಸರಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಮಂಗಳೂರಿನ ಶಕ್ತಿಕೇಂದ್ರ ಮಂಗಳೂರು ಮಹಾನಗರಪಾಲಿಕೆ ಎದುರು ನೂರಾರು ಮಂದಿ ನೌಕರರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಅದೇ ರೀತಿ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ, ಜಿಲ್ಲಾ ಪಂಚಾಯತ್ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದರು. ಇದರಿಂದ ಸಾರ್ವಜನಿಕರಿಗೆ ನೀಡುವ ಸೇವೆಯನ್ನು ಸ್ಥಗಿತಗೊಂಡಿತ್ತು. ಹೆಚ್ಚಿನ ಕಚೇರಿಗಳಲ್ಲಿ ಬೆಳಗ್ಗೆ 11.30ರ ವರೆಗೆ ಮುಷ್ಕರ ನಡೆಸಿ ಸರಕಾರಿ ಸಿಬ್ಬಂದಿಗಳು ನಂತರ ಅಲ್ಲಿಂದ ತೆರಳಿದರು. ಕೆಲವು ಅಧಿಕಾರಿಗಳು ರಜೆ ಮೇಲೆ ತೆರಳಿದ್ದರು.
ಆರೋಗ್ಯ ಇಲಾಖೆಯಲ್ಲಿ ತುರ್ತು ಸೇವೆ ಹೊರತು ಪಡಿಸಿ ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿರುವುದು ಕಂಡು ಬಂತು. ಲೋಕೋಪಯೋಗಿ ಇಲಾಖೆ ಕಚೇರಿಯ ಮುಂದೆ ನೌಕರರು ಜಮಾವಣೆ ಆಗಿದ್ದರು.
ಉಳ್ಳಾಲ ತಾಲೂಕು ವ್ಯಾಪ್ತಿಯ ಸರಕಾರಿ ಶಾಲೆಗಳು ಶಿಕ್ಷಕರಿಲ್ಲದೇ ಮುಚ್ಚಿವೆ. ಬಬ್ಬುಕಟ್ಟೆ, ಕುತ್ತಾರ್, ತೊಕ್ಕೊಟು, ದೇರಳಕಟ್ಟೆ ಸರಕಾರಿ ಶಾಲೆಗಳಲ್ಲಿ ಶಿಕ್ಷಕರು ಗೈರು ಹಾಜರಾಗಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಮನೆಗೆ ಮರಳಿದ್ದಾರೆ.














