ಇತ್ತೀಚಿನ ಸುದ್ದಿ
ರಾಜ್ಯದ ಅಧಿಕಾರ ಗದ್ದುಗೆ: ಮುಖ್ಯಮಂತ್ರಿ ಸ್ಥಾನ ಏರಲು ಸಿದ್ದರಾಮಯ್ಯಗೆ 67 ಮಂದಿ ಕಾಂಗ್ರೆಸ್ ಶಾಸಕರ ಬೆಂಬಲ?
14/05/2023, 23:52

ಬೆಂಗಳೂರು(reporterkarnataka.com): ಮುಖ್ಯಮಂತ್ರಿ ಆಯ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ(ಸಿಎಲ್ ಪಿ) ಸಭೆಯಲ್ಲಿ ಶಾಸಕರುಗಳ ಅಭಿಪ್ರಾಯ ಕೇಳಲಾಗುತ್ತಿದ್ದು, 67 ಮಂದಿ ಶಾಸಕರು ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.
ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಭಾನುವಾರ ನಡೆದಿದ್ದು, ಮುಖ್ಯಮಂತ್ರಿ ಗಾದಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಹೊಟೇಲ್ ನ ಹೊರಗಡೆ ಇಬ್ಬರು ನಾಯಕರುಗಳ ಅಭಿಮಾನಿಗಳು ಜಮಾಯಿಸಿದ್ದು, ಘೋಷಣೆಗಳನ್ನು ಕೂಗುತ್ತಿದ್ದರು.
ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು ಸಿಎಲ್ ಪಿ ಸಭೆಯಲ್ಲಿ ಮಾತನಾಡಿ, ಒಗ್ಗಟ್ಟಿನಿಂದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದೇವೆ. ಇನ್ನು ಅಧಿಕಾರಕ್ಕಾಗಿ ಒಗ್ಗಟ್ಟು ಮುರಿಯುವುದು ಬೇಡ. ಬಣ ರಾಜಕೀಯ ಮಾಡುವುದು ಬೇಡ. ಶಾಸಕರ ಅಭಿಪ್ರಾಯ ಸಂಗ್ರಹಿಸಿ ಮುಖ್ಯಮಂತ್ರಿ ಆಯ್ಕೆ ಅಧಿಕಾರವನ್ನು ಹೈಕಮಾಂಡಿಗೆ ಬಿಟ್ಟು ಬಿಡೋಣ ಎಂದು ಹೇಳಿದ್ದರು. ಅದರಂತೆ ಶಾಸಕರುಗಳ ಅಭಿಪ್ರಾಯ ಕೇಳಲಾಯಿತು. ನೂತವಾಗಿ ಆಯ್ಕೆಗೊಂಡ ಕಾಂಗ್ರೆಸ್ ನ 135 ಶಾಸಕರ ಪೈಕಿ 67 ಮಂದಿ ಶಾಸಕರು ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದಾರೆ ಎಂದು ವಿಶ್ವಸನೀಯ ಮೂಲಗಳು ರಿಪೋರ್ಟರ್ ಕರ್ನಾಟಕಕ್ಕೆ ತಿಳಿಸಿದೆ.