ಇತ್ತೀಚಿನ ಸುದ್ದಿ
ರಾಜ್ಯ ವಿಧಾನ ಸಭೆ ಚುನಾವಣೆ: ಸಿಐಟಿಯು ಕಾರ್ಮಿಕ ಪ್ರಣಾಳಿಕೆ ಬಿಡುಗಡೆ; ಕನಿಷ್ಠ ವೇತನ 36 ಸಾವಿರ ನಿಗದಿಗೆ ಹಕ್ಕೊತ್ತಾಯ
30/04/2023, 11:43

ಮಂಗಳೂರು(reporterkarnataka.com): ಶಾಂತಿ ಸೌಹಾರ್ದ ಸಾಮರಸ್ಯದ ಕರ್ನಾಟಕಕ್ಕಾಗಿ, ದುಡಿಯುವ ಜನರ ಹಕ್ಕುಗಳು ಹಾಗೂ ಜೀವನೋಪಾಯದ ರಕ್ಷಣೆಗಾಗಿ, ಕಾರ್ಪೊರೇಟ್ ಪ್ರೇರಿತ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ರಾಜ್ಯದ ಲಕ್ಷಾಂತರ ಕಾರ್ಮಿಕರ ಹಕ್ಕೊತ್ತಾಯಗಳನ್ನೊಳಗೊಂಡ ಕಾರ್ಮಿಕ ಪ್ರಣಾಳಿಕೆಯನ್ನು ಸಿಐಟಿಯು ದ.ಕ. ಜಿಲ್ಲಾ ಸಮಿತಿಯ ಆಶ್ರಯದಲ್ಲಿ ನಗರದಲ್ಲಿ ಶನಿವಾರ ಬಿಡುಗಡೆ ಮಾಡಲಾಯಿತು.
ಕಳೆದ ಐದು ವರ್ಷಗಳ ಕಾರ್ಪೋರೇಟ್ ಪರ ಆರ್ಥಿಕ ನೀತಿಗಳು, ಕಳೆದ ಮೂರು ವರ್ಷಗಳ ಹಿಂದೆ ದಾಳಿ ನಡೆಸಿದ ಕೋರೋನ ಮತ್ತು ಕೋರೊನೋತ್ತರ ಕಾಲಘಟ್ಟದಲ್ಲಿ ಕಾರ್ಮಿಕ ವರ್ಗ ಎದುರಿಸಿದ ಸಾವು ನೋವುಗಳು ಮತ್ತು ದುಡಿಮೆಯ ಪ್ರಶ್ನೆಗಳು, ಕಳೆದ ನಾಲ್ಕು ವರ್ಷಗಳ ಬಿಜೆಪಿ ಸರ್ಕಾರ ಜಾರಿ ಮಾಡಿದ ಕಾರ್ಮಿಕ ವಿರೋಧಿ ನೀತಿಗಳು ಮತ್ತು ಜನರನ್ನು ಛಿದ್ರಗೊಳಿಸಲು ಅನುಸರಿಸಿದ ಮತೀಯವಾದಿ ನಿಲುವುಗಳು ರಾಜ್ಯದ ಜನತೆಯ ಬದುಕಿಗೆ ಹಾಗೂ ನಾಡಿನ ಸೌಹಾರ್ದ ಪರಂಪರೆಗೆ ತೀವ್ರ ಘಾಸಿಗೊಳಿಸಿದೆ. ಕಾರ್ಖಾನೆ ಕಾಯಿದೆಗೆ ತಿದ್ದುಪಡಿ ತಂದು 8 ಗಂಟೆಗಳ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಳಗೊಳಿಸಿದ್ದು ಹಾಗೂ ಮಹಿಳೆಯರಿಗೆ ರಾತ್ರಿ ಪಾಳಿಯ ಕೆಲಸವನ್ನು ಕಡ್ಡಾಯಗೊಳಿಸಿರುವ ರಾಜ್ಯ ಸರಕಾರದ ಕ್ರಮವು ಅತ್ಯಂತ ನಿರ್ದಯಿ ಹಾಗೂ ಕಠೋರತೆಯಿಂದ ಕೂಡಿದೆ. ಈ ಮೂಲಕ ಮೇ ದಿನದ 8 ಗಂಟೆಗಳ ದುಡಿಮೆಯ ಹಕ್ಕನ್ನು ಮೊಟಕುಗೊಳಿಸಿರುವ ದೇಶದ ಏಕೈಕ ರಾಜ್ಯವೆಂಬ ಕುಖ್ಯಾತಿಗೆ ಒಳಗಾಗಿದೆ. ಇಂತಹ ಭೃಷ್ಟ, ಕೋಮುವಾದಿ, ಕಾರ್ಮಿಕ ವಿರೋಧಿ ಬಿಜೆಪಿ ಸರಕಾರ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೇರದಂತೆ ತಡೆಗಟ್ಟಲು, ರಾಜ್ಯದ ಕಾರ್ಮಿಕ ವರ್ಗವನ್ನು ಜಾಗೃತಿಗೊಳಿಸುವ ಸಲುವಾಗಿ ಕಾರ್ಮಿಕ ಪ್ರಣಾಳಿಕೆಯನ್ನು ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ಹೊರ ತಂದಿದ್ದು, ಇದನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಿಡುಗಡೆ ಮಾಡುವ ಮೂಲಕ ಕಾರ್ಮಿಕ ವರ್ಗವನ್ನು ತಲುಪಲು ಸಾಧ್ಯವಾಗಬೇಕಾಗಿದೆ.
ಹಕ್ಕೊತ್ತಾಯಗಳು: ರಾಜ್ಯದ್ಯಾಂತ ಶಾಸನಬದ್ಧ ಸಮಾನ ಹಾಗೂ ಏಕರೂಪದ ಕನಿಷ್ಠ ವೇತನ 36 ಸಾವಿರ ರೂ. ನಿಗದಿಯಾಗಬೇಕು. ನಿರಂತರವಾಗಿ ಏರುತ್ತಿರುವ ಅಗತ್ಯ ಹಾಗೂ ಜೀವನೋಪಾಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಮಾಡಬೇಕು. ಅಂಗನವಾಡಿ, ಬಿಸಿಯೂಟ, ಆಶಾ ಸೇರಿದಂತೆ ಎಲ್ಲ ಸ್ಕೀಂ ನೌಕರರ ಸೇವೆಯನ್ನು ಖಾಯಂಗೊಳಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಭವಿಷ್ಯನಿಧಿ ಕಲ್ಯಾಣನಿಧಿ ಸೇರಿ ಇತರೆ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲು ಕ್ರಮವಹಿಸಬೇಕು. ಅಧಿಕಾರ ವಿಕೇಂದ್ರೀಕರಣ ಬಲಪಡಿಸುವ ಮೂಲಕ ಗ್ರಾಮ ಪಂಚಾಯತ್ ನೌಕರರ ಕೆಲಸ ಖಾಯಂಗೊಳಿಸಿ ಕನಿಷ್ಟ ವೇತನ ಜಾರಿ ಮಾಡಬೇಕು. ವಸತಿ ರಹಿತ ಎಲ್ಲ ಕಾರ್ಮಿಕರಿಗೆ ಕೇರಳ ಮಾದರಿಯಲ್ಲಿ ವಾಸಯೋಗ್ಯ ವಸತಿ ಯೋಜನೆ ಜಾರಿ ಮಾಡಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಗುತ್ತಿಗೆ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಡಿಯಲ್ಲಿ ಎಲ್ಲಾ ವಿವಿಧ ಸ್ವರೂಪದಲ್ಲಿರುವ ಗುತ್ತಿಗೆ ಹೊರಗುತ್ತಿಗೆ ಮತ್ತು ಖಾಯಂಮೇತರ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾನೂನುಗಳನ್ನು ಪುನರ್ ಸ್ಥಾಪಿಸಿ ಮಂಡಳಿಯಲ್ಲಿ ನಡೆಯುತ್ತಿರುವ ಭ್ರಷ್ಟಚಾರಕ್ಕೆ ಕಡಿವಾಣ ಹಾಕಬೇಕು ಮತ್ತು ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಖಾತ್ರಿಪಡಿಸಬೇಕು. ಕಾರ್ಮಿಕ ಸಂಹಿತೆಗಳನ್ನು ವಾಪಸ್ಸು ಪಡೆಯಬೇಕು 12 ಗಂಟೆ ಕೆಲಸದ ಅವಧಿ ಹೆಚ್ಚಳವನ್ನು ಮತ್ತು ಮಹಿಳೆಯರ ರಾತ್ರಿ ಪಾಳಿ ಕೆಲಸವನ್ನು ರದ್ದುಪಡಿಸಬೇಕು.
ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ತಡೆಯಬೇಕು ಹಾಗೂ ಖಾಸಗಿ ಕ್ಷೇತ್ರಕ್ಕೂ ಮೀಸಲು ವಿಸ್ತರಣೆ ಮಾಡಬೇಕು, ಸಾರ್ವಜನಿಕ ಉಧ್ಯಮಗಳಲ್ಲಿನ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಬೀದಿಬದಿ ವ್ಯಾಪಾರ ಕಾನೂನುಬದ್ದಗೊಳಿಸಿ ಬೀದಿಬದಿ ವ್ಯಾಪಾರಿಗಳಿಗೆ ರಕ್ಷಣೆ ನೀಡಬೇಕು. ಎಲ್ಲ ಮುನ್ಸಿಫಲ್ ನೌಕರರ ಖಾಯಂಗೊಳಿಸಬೇಕು ಮತ್ತು ಸಫಾಯಿ ಕರ್ಮಚಾರಿಗಳ ಪುನರ್ವಸತಿ ಕಲಿಸಬೇಕು, ಉದ್ಯೋಗ ಖಾತ್ರಿ ಕಾರ್ಮಿಕರಿಗೆ ವರ್ಷಕ್ಕೆ 200 ದಿನಗಳ ಕೆಲಸ ಹಾಗೂ ದಿನಕ್ಕೆ ರೂ. 600 ವೇತನ ಹೆಚ್ಚಳ ಖಾತ್ರಿಗೊಳಿಸಿ ನಗರ ಉದ್ಯೋಗ ಪ್ರದೇಶಕ್ಕೂ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಬೇಕು, ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ತಡೆಯಬೇಕು. ಕರಾವಳಿ ಜಿಲ್ಲೆಗಳ ಜೀವನಾಡಿಗಳಾದ ಪಾರಂಪಾರಿಕ ಬೀಡಿ, ಹೆಂಚು, ಗೇರು ಹಾಗೂ ಮೀನುಗಾರಿಕೆ ಉದ್ಯಮಗಳನ್ನು ರಕ್ಷಿಸಬೇಕು.
ದುಡಿಯುವ ವರ್ಗವನ್ನು ವಿಭಜಿಸಿ ಬಂಡವಾಳಶಾಹಿಗಳಿಗೆ ಲಾಭವನ್ನು ಅಧಿಕಗೊಳಿಸುವ ಹಿಂದು-ಮುಸ್ಲಿಂ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ಮತೀಯ ಕೋಮುವಾದಕ್ಕೆ ಕಡಿವಾಣ ಹಾಕಬೇಕು. ಮತ್ತು ಶಾಂತಿ ಸೌಹಾರ್ದ ಹಾಗೂ ಸಾಮರಸ್ಯದ ಕರ್ನಾಟಕಕ್ಕಾಗಿ ಶ್ರಮಿಸಬೇಕು, ರಾಜ್ಯ ಸರ್ಕಾರ ಜಾರಿಗೊಳಿಸಿದ ಭೂ ತಿದ್ದುಪಡಿ, ಜಾನುವಾರು ಹತ್ಯೆ ತಿದ್ದುಪಡಿ ಹಾಗೂ ಎಪಿಎಂಸಿ ತಿದ್ದುಪಡಿ ಕಾನೂನುಗಳನ್ನು ವಾಪಸ್ಸು ಪಡೆಯಬೇಕು. ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಮತ್ತು ಬಜೆಟ್‌ನಲ್ಲಿ ಘೋಷಿಸುವ ಅನುದಾನವನ್ನು ದಲಿತರ ಅಭಿವೃದ್ಧಿಗಾಗಿಯೇ ವಿನಿಯೋಗಿಸಬೇಕು, ನೂತನ ಶಿಕ್ಷಣ ನೀತಿಯನ್ನು ಕೈ ಬಿಡಬೇಕು ಮತ್ತು ಉದ್ಯೋಗ ಆಧಾರಿತ ಶಿಕ್ಷಣಕ್ಕೆ ಆಧ್ಯತೆ ನೀಡಬೇಕು ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡಬೇಕು ಎಂಬಿತ್ಯಾದಿ ಕಾರ್ಮಿಕ ವರ್ಗದ ಹಕ್ಕೊತ್ತಾಯಗಳು ಚುನಾವಣಾ ಕಣದಲ್ಲಿ ಚರ್ಚಾ ವಿಷಯಗಳಾಗಬೇಕು. ಈ ಮೂಲಕ ಜನತೆಯ ಬದುಕಿನ ಪ್ರಶ್ನೆಗಳು ಮುಂಚೂಣಿಗೆ ಬರಬೇಕೆಂದು ಸಿಐಟಿಯು ರಾಜ್ಯದ ಮತದಾರರಲ್ಲಿ ಹಾಗೂ ಕಾರ್ಮಿಕ ವರ್ಗದಲ್ಲಿ ವಿನಂತಿಸಿದೆ.