11:57 PM Thursday17 - July 2025
ಬ್ರೇಕಿಂಗ್ ನ್ಯೂಸ್
ಬಿರುಸುಗೊಂಡ ಕಾಡಾನೆಗಳ ಅರಣ್ಯಕ್ಕೆ ಅಟ್ಟುವ ಕಾರ್ಯ: ನಾಡಿನಿಂದ ಕಾಡಿನತ್ತ ಆನೆಗಳ ಮತ್ತೊಂದು ಹಿಂಡು ಭಾರೀ ಮಳೆ: ಕೊಡಗು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ: ಶಾಲೆ- ಕಾಲೇಜುಗಳಿಗೆ ನಾಳೆಯೂ… ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ… ಭಾರೀ ಮಳೆ: ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜಿಗೆ… ಕರ್ಣಾಟಕ ಬ್ಯಾಂಕ್ ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ: ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ,… ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಅಭಿವೃದ್ಧಿಪಡಿಸಿದ ವಿಶೇಷ ಡಿಜಿಲಾಕರ್ ಲೋಕಾರ್ಪಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ… Kodagu | ಬೇಲೂರಿನಲ್ಲಿ ಉಪಟಳ ನೀಡುತ್ತಿದ್ದ ‘ಕರಡಿ’ ಆನೆಗೆ ದುಬಾರೆಯಲ್ಲಿ ‘ಬಬ್ರುವಾಹನ’ ಎಂದು… ಸಿಗಂಧೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ: ಪ್ರತಿಪಕ್ಷ ನಾಯಕ ಆರ್.ಅಶೋಕ್ Chikkamagaluru | ಮೂಡಿಗೆರೆ: ವಿದ್ಯುತ್ ತಂತಿ ಸ್ವರ್ಶಿಸಿ ಅನ್ನದಾತ ದಾರುಣ ಸಾವು ಕಾರ್ಕಳ ಥೀಮ್ ಪಾರ್ಕ್‌ ಪರಶುರಾಮ ಮೂರ್ತಿ ಹಿತ್ತಾಳೆಯದ್ದೇ ಹೊರತು ಕಂಚಿನಿಂದ ಮಾಡಿದ್ದು ಅಲ್ಲ:…

ಇತ್ತೀಚಿನ ಸುದ್ದಿ

ರಾಜ್ಯದ ಆರ್ಥಿಕ ನಿರ್ವಹಣೆಯಲ್ಲಿ ಸಿಎಂ ಸಿದ್ದರಾಮಯ್ಯ ವಿಫಲ: ಪ್ರತಾಪ್ ಸಿಂಹ ನಾಯಕ್

28/03/2024, 20:43

ಮಂಗಳೂರು(reporterkarnataka.com): ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ಸೋತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಮರೆಮಾಚಲು ಕೇಂದ್ರ ಸರಕಾರವನ್ನು ದೂರುವ ನಾಟಕ ಆಡುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಶಾಸಕ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ದಕ್ಷಿಣ ಜಿಲ್ಲಾ ಬಿಜೆಪಿಯ ಲೋಕಸಭಾ ಚುನಾವಣೆ ಕಾರ್ಯಾಲಯದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ತಮ್ಮ ತಪ್ಪು ಮುಚ್ಚಿಕೊಳ್ಳಲು ದಿನಕ್ಕೊಂದು ನಾಟಕವಾಡುತ್ತಿದ್ದಾರೆ ಸಿದ್ದರಾಮಯ್ಯ. ಮೊದಲು ಕೇಂದ್ರ ಸರಕಾರ ಪಡಿತರ ಅಕ್ಕಿ ಕೊಡುತ್ತಿಲ್ಲ ಎಂದು ದೂರಿದರು; ನಂತರ ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ನಾಟಕವಾಡಿ ದೆಹಲಿಗೆ ತೆರಳಿ ಪ್ರತಿಭಟನೆ ಮಾಡಿದರು. ಇದೀಗ ಎನ್‌ಡಿಆರ್‍‌ಎಫ್‌ ಗಾಗಿ ಆರ್ಟಿಕಲ್ 32ರ ಅಡಿಯಲ್ಲಿ ಸುಪ್ರೀಂ ಕೋರ್ಟಿಗೆ ಹೋಗುವ ನಾಟಕ ಮಾಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಈ ಯತ್ನ ನಡೆಸಿದ್ದಾರೆ. ಇದುವರೆಗೆ ಅವರು ನಿದ್ರೆ ಮಾಡುತ್ತಿದ್ದರೇ? ಎಂದು ಪ್ರತಾಪ್ ಸಿಂಹ ನಾಯಕ್ ಪ್ರಶ್ನಿಸಿದರು.
ಇಂತಹ ನಾಟಕಗಳ ಮೂಲಕ ಜನರ ಗಮನ ಬೇರೆಡೆಗೆ ಸೆಳೆದು ಚುನಾವಣೆ ಮುಗಿಸಿಕೊಳ್ಳಬೇಕೆಂದು ಯೋಚಿಸಿದ್ದರೆ ಅದು ಅವರ ಭ್ರಮೆಯಷ್ಟೇ. ರಾಜ್ಯದ ಜನರಿಗೆ ಕುಡಿಯುವ ನೀರು ಕೊಡಲು ಸಿದ್ದರಾಮಯ್ಯರಿಗೆ ಸಾಧ್ಯವಾಗುತ್ತಿಲ್ಲ. ಬರದಿಂದ ತತ್ತರಿಸಿರುವ ಜನತೆಗೆ ಪರಿಹಾರ ನೀಡಲು ಆಗುತ್ತಿಲ್ಲ ಎಂದು ಅವರು ಟೀಕಿಸಿದರು.
*ಶೇ 40ರಷ್ಟು ಗುರಿ ಸಾಧಿಸಲೂ ವಿಫಲ:*
ಕಳೆದ ಬಜೆಟ್‌ನಲ್ಲಿ ಘೊಷಣೆ ಮಾಡಿದ ಗುರಿಯನ್ನು ಶೇ 40ರಷ್ಟು ಸಾಧಿಸುವುದಕ್ಕೂ ಕಾಂಗ್ರೆಸ್ ಸರಕಾರಕ್ಕೆ ಸಾಧ್ಯವಾಗಿಲ್ಲ. ಕೃಷಿಕರಿಗೆ ಶೂನ್ಯ ಬಡ್ಡಿದರದಲ್ಲಿ ನೀಡುತ್ತೇವೆ ಎಂದಿದ್ದ ಸಾಲದ ಪ್ರಮಾಣವನ್ನು 3ರಿಂದ 5 ಲಕ್ಷಕ್ಕೆ ಹೆಚ್ಚಿಸಲು ಸಾಧ್ಯವಾಗಿಲ್ಲ. ಹಾಲು ಉತ್ಪಾದಕರಿಗೆ ನೀಡಬೇಕಿದ್ದ 1,200 ಕೋಟಿ ರೂ ಹಾಲಿನ ಪ್ರೋತ್ಸಾಹಧನವನ್ನು ಇದುವರೆಗೂ ನೀಡಿಲ್ಲ. ಕಾಂಗ್ರೆಸ್ ಬಂದ ನಂತರ ಈ ರಾಜ್ಯ ದಿವಾಳಿಯಾಗಿದೆ ಎಂದು ಪ್ರಧಾನಿಯವರೇ ಹೇಳಿದ್ದರು. ಅದನ್ನು ಇದೀಗ ರಾಜ್ಯ ಸರಕಾರವೇ ಸಾಬೀತುಪಡಿಸಿದೆ ಎಂದು ಪ್ರತಾಪ್‌ ಸಿಂಹ ನಾಯಕ್ ಹೇಳಿದರು.
15 ಬಜೆಟ್‌ಗಳನ್ನು ಮಂಡಿಸಿದ್ದೇನೆ ಎಂದು ಹೇಳಿಕೊಳ್ಳುವ ಆರ್ಥಿಕ ತಜ್ಞ ಸಿದ್ದರಾಮಯ್ಯನವರು ಹಣಕಾಸಿನ ನಿರ್ವಹಣೆಯಲ್ಲಿ ಸೋತಿರುವುದು ಎದ್ದು ಕಾಣುತ್ತದೆ. ಇದೇ ಮೊದಲ ಬಾರಿಗೆ ಕರ್ನಾಟಕವು ಜಿಡಿಪಿ ಬೆಳವಣಿಗೆಯಲ್ಲಿ ಭಾರತದ ಸರಾಸರಿಗಿಂತ ಕೆಳಮಟ್ಟಕ್ಕೆ ಕುಸಿದಿದೆ. ಯಾವಾಗಲೂ ದೇಶದ ಜಿಡಿಪಿಗಿಂತ ನಮ್ಮ ಜಿಡಿಪಿ ಹೆಚ್ಚಿರುತ್ತಿತ್ತು. 2021-22ರಲ್ಲಿ ದೇಶದ ಜಿಡಿಪಿ ಶೇ 9.1 ಇದ್ದಾಗ ಕರ್ನಾಟಕದ್ದು ಶೇ 9.8ರಷ್ಟಿತ್ತು. 2022-23ರಲ್ಲಿ ದೇಶದ ಜಿಡಿಪಿ ಶೇ 7.2 ಇದ್ದಾಗ ಕರ್ನಾಟಕದ್ದು ಶೇ 8.1 ಇತ್ತು. 2023-24ರಲ್ಲಿ ಭಾರತದ ಜಿಡಿಪಿ ಶೇ 7.3 ಇದ್ದು ಕರ್ನಾಟಕದ್ದು ಶೇ 6.6ಕ್ಕೆ ಕುಸಿದಿದೆ. ಇದಕ್ಕೆ ಕೇಂದ್ರ ಸರಕಾರದ ಮೇಲೆ ಆರೋಪ ಮಾಡಲು ಸಾಧ್ಯವೇ ಎಂದು ಶಾಸಕರು ಪ್ರಶ್ನಿಸಿದರು.
*ಬೀದಿಗೆ ಬಂದು ಸುಳ್ಳು ಹೇಳುವ ಸಿದ್ದರಾಮಯ್ಯ:*
ಸಿದ್ದರಾಮಯ್ಯನವರು ರಾಜ್ಯದ ಮಧ್ಯಂತರ ಆರ್ಥಿಕ ಯೋಜನೆಯ ವರದಿಯಲ್ಲಿ ಸಮರ್ಪಕ ಅಂಕಿ-ಅಂಶ ನೀಡುತ್ತಾರೆ. ಆದರೆ ಬೀದಿಗೆ ಬಂದು ಮಾತನಾಡುವಾಗ ಕೇಂದ್ರದ ವಿರುದ್ಧ ನಾಲಿಗೆ ಹರಿಬಿಡುತ್ತಾರೆ. ಈ ವರದಿಯ ಒಂದು ಕಡೆ 2021-22ಕ್ಕೆ ಹೋಲಿಸಿದರೆ 2022-23ರಲ್ಲಿ ಕೇಂದ್ರ ಸರಕಾರದ ಒಟ್ಟು ತೆರಿಗೆ ಸ್ವೀಕೃತಿಯು ಶೇ 12.6ರಷ್ಟು ಹೆಚ್ಚಳವಾಗಿದೆ ಎಂದಿದ್ದಾರೆ. ಇದನ್ನು ಇದೇ ಫೆಬ್ರವರಿಯಲ್ಲಿ ವಿಧಾನಸಭೆಯಲ್ಲೂ ಮಂಡಿಸಿದ್ದಾರೆ. 2022-23ರಲ್ಲಿ ಕೇಂದ್ರದಿಂದ ಪುರಸ್ಕೃತವಾದ ರಾಜ್ಯದ ಯೋಜನೆಗಳಿಗೆ ಕೇಂದ್ರದಿಂದ 16,579 ಕೋಟಿ ಸಹಾಯಧನ ಸ್ವೀಕೃತವಾಗಿದೆ. ಅಲ್ಲದೆ 6,739 ಕೋಟಿ ರೂ.ಗಳನ್ನು ಇಲಾಖೆಗಳ ಎನ್‌ಎಸ್‌ಎ ಖಾತೆಗಳಿಗೆ ನೇರವಾಗಿ ಬಿಡುಗಡೆ ಮಾಡಿದೆ.

ವಿವಿಧ ಬಂಡವಾಳ ಯೋಜನೆಗಳಿಗೆ ಕೇಂದ್ರವು 3,399 ಕೋಟಿ ರೂ ಬಡ್ಡಿರಹಿತ ಸಾಲವನ್ನು ಬಿಡುಗಡೆ ಮಾಡಿದೆ. 22-23ರ ಆಯವ್ಯಯದಲ್ಲಿ ಅಂದಾಜಿಸಿದ ಜಿಎಸ್‌ಟಿ ಪರಿಹಾರದ ಮೊತ್ತವು 5 ಸಾವಿರ ಕಕೋಟಿಗೆ ಬದಲಾಗಿದೆ ಕೇಂದ್ರ ಸರರಕಾರದಿಂದ 20,288 ಕೋಟಿ ರೂ ಸ್ವೀಕೃತವಾಗಿದ್ದು ರಾಜ್ಯದ ರಾಜಸ್ವ ಸ್ವೀಕೃತಿ ಹೆಚ್ಚಾಗಿದೆ ಎಂದು ಅಧಿಕೃತ ದಾಖಲೆಗಳಲ್ಲಿ ಅವರೇ ಬರೆದುಕೊಂಡಿದ್ದಾರೆ. ಆದರೆ ಹೊರಗೆ ಬಂದು ಕೇಂದ್ರ ಹಣ ನೀಡುತ್ತಿಲ್ಲ ಎಂದು ದೂರುತ್ತಾರೆ. ಈ ಸುಳ್ಳನ್ನು ನಂಬಲು ಸಾಧ್ಯವೇ ಎಂದು ಪ್ರತಾಪ್ ಸಿಂಹ ನಾಯಕ್ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

*ಉತ್ತರನ ಪೌರುಷ:*

2004ರಿಂದ 2014ರ ವರೆಗೆ ಆಗಿನ ಕಾಂಗ್ರೆಸ್ ಸರಕಾರ ತೆರಿಗೆ ಹಂಚಿಕೆಯಲ್ಲಿ 81,000 ಕೋಟಿ ರೂ.ಗಳನ್ನು ನೀಡಿದರೆ, ಅನಂತರದ 10 ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರಕಾರ 2.36 ಲಕ್ಷ ಕೋಟಿ ರೂ.ಗಳನ್ನು ನೀಡಿದ್ದು ಶೇ 243 ಅಧಿಕ ಹಂಚಿಕೆ ಮಾಡಲಾಗಿದೆ. ಹಾಗಿದ್ದರೂ ಬೀದಿಗೆ ಬಂದು ಮಾತನಾಡುವಾಗ ಸಿದ್ದರಾಮಯ್ಯ ಕೇಂದ್ರ ಸರಕಾರ ಹಣ ಕೊಟ್ಟಿಲ್ಲ ಎನ್ನುತ್ತಾರೆ. ತಮ್ಮ ದೌರ್ಬಲ್ಯವನ್ನು ಮುಚ್ಚಿಕೊಳ್ಳಲು ಚರ್ಚೆಗೆ ಸಿದ್ದ ಎನ್ನುತ್ತ ಉತ್ತರನ ಪೌರುಷ ಮೆರೆಯುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಚುನಾವಣೆ ನಿರ್ವಹಣಾ ಸಮಿತಿಯ ದೇವದಾಸ್ ಶೆಟ್ಟಿ ಹಾಗೂ ದ.ಕ ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ವಸಂತ ಜೆ ಪೂಜಾರಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು