ಇತ್ತೀಚಿನ ಸುದ್ದಿ
ಪ್ಯಾರಾ ಒಲಂಪಿಕ್ ನಲ್ಲಿ 2 ಚಿನ್ನ ಗೆದ್ದ ಅಂಧ ಕ್ರೀಡಾಪಟು ರಕ್ಷಿತಾರಾಜುಗೆ ಹುಟ್ಟೂರಿನಲ್ಲಿ ಭವ್ಯ ಸ್ವಾಗತ: ರೋಡ್ ಶೋ
10/11/2023, 21:39
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka.com
ಪ್ಯಾರಿಸ್ ನ ಹಾಂಗ್ ಝ್ ನಲ್ಲಿ ನಡೆದ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಅಂಧ ಕ್ರೀಡಾಪಟು ರಕ್ಷಿತಾರಾಜುಗೆ ತಾಯಿ ನಾಡಿನಲ್ಲಿ ವಾದ್ಯ ತಂಡದ ಮೂಲಕ ತೆರೆದ ವಾಹನದಲ್ಲಿ ರೋಡ್ ಶೋ ಮಾಡುವ ಮೂಲಕ ಭವ್ಯ ಸ್ವಾಗತ ನೀಡಲಾಯಿತು.
ಶುಕ್ರವಾರ ಬಣಕಲ್, ಕೊಟ್ಟಿಗೆಹಾರದ ವಿವಿಧ ಶಾಲೆಗಳ ಮಕ್ಕಳು, ಶಿಕ್ಷಕರು, ಬಣಕಲ್ ಪ್ರೆಂಡ್ಸ್ ಕ್ಲಬ್, ಕೊಟ್ಟಿಗೆಹಾರ ಗೆಳೆಯರ ಬಳಗ, ಆಟೋ ಚಾಲಕ ಮಾಲಕರ ಸಂಘ , ಅಂಬೇಡ್ಕರ್ ಸಂಘ, ಹಾಗೂ ವಿವಿಧ ಸಂಘಟನೆಗಳಿಂದ ರಕ್ಷಿತಾ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.ರೋಡ್ ಶೋ ನಂತರ ಬಣಕಲ್ ಗ್ರಾಮದ ಹಿರಿಯರಾದ ಬಿ.ಶಿವರಾಮ ಶೆಟ್ಟಿ ಮಾತನಾಡಿ’ರಕ್ಷಿತಾ ದೇಶದ ಹೆಮ್ಮೆಯ ಮಗಳು. ಕ್ರೀಡಾರಂಗದಲ್ಲಿ ಅವರ ಸಾಧನೆ ಅನನ್ಯವಾದುದು. ಸರ್ಕಾರ ಕ್ರೀಡಾ ಪ್ರತಿಭೆಗಳಿಗೆ ಕ್ರೀಡಾಶಾಲೆ ತೆರೆಯುವ ಮೂಲಕ ಪ್ರೋತ್ಸಾಹ ನೀಡಬೇಕು’ಎಂದರು. ಕಸಾಪ ಬಣಕಲ್ ಘಟಕದ ಅಧ್ಯಕ್ಷ ಟಿ.ಎಂ.ಆದರ್ಶ್ ಮಾತನಾಡಿ’ ದೇಶಕ್ಕೆ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎರಡು ಚಿನ್ನದ ಪದಕ ಪಡೆಯುವ ಮೂಲಕ ಯುವ ಪೀಳಿಗೆಯ ಗಮನ ಸೆಳೆದಿದ್ದಾರೆ. ಸರ್ಕಾರ ಅವರಿಗೆ ವಿವಿಧ ಸೌಲಭ್ಯ ನೀಡಬೇಕು’ಎಂದರು.ಬಣಕಲ್ ಗ್ರಾಮ ಪಂಚಾಯಿತಿ ಸದಸ್ಯರು, ಊರಿನ ಗ್ರಾಮಸ್ಥರು, ವಿವಿಧ ಸಂಘಟನೆಗಳ ಮುಖಂಡರು, ಸದಸ್ಯರು, ವಿವಿಧ ಶಾಲೆಗಳ ಮಕ್ಕಳು, ಶಿಕ್ಷಕರು ಭಾಗವಹಿಸಿದ್ದರು.
ಕೊಟ್ಟಿಗೆಹಾರದಲ್ಲಿ ತೆರೆದ ಪಿಕಪ್ ವಾಹನದಲ್ಲಿ ವಿವಿಧ ಸರ್ಕಾರಿ ಶಾಲೆ,ಪ್ರೌಢಶಾಲೆಯ ಮಕ್ಕಳು ರಕ್ಷಿತಾ ಅವರನ್ನು ಮೆರವಣಿಗೆ ಮೂಲಕ ರೋಡ್ ಶೋ ನಡೆಸಿ ಗೌರವ ಸಲ್ಲಿಸಿದರು. ಕೊಟ್ಟಿಗೆಹಾರದ ಹಿರಿಯರಾದ ಹಾಜಿ ಟಿ.ಎ. ಖಾದರ್ ಮಾತನಾಡಿ’ ದೇಶದ ಕ್ರೀಡೆಯ ಚಿನ್ನದ ರಾಣಿ ರಕ್ಷಿತಾ ಎಲ್ಲಾ ಮಕ್ಕಳಿಗೆ ಆದರ್ಶರಾಗಿದ್ದಾರೆ. ಅಂಗವಿಕಲತೆ ಇದ್ದರೂ ಯಾವ ಸಾಧನೆಯ ಛಲದೊಂದಿಗೆ ದೇಶ, ರಾಜ್ಯ ಅದರಲ್ಲೂ ಮಲೆನಾಡಿನ ಕೀರ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿರುವುದು ಸಂತಸ ತಂದಿದೆ ಎಂದರು.
ಏಕಲವ್ಯ ಶಾಲೆಯ ಪ್ರಾಂಶುಪಾಲ ಬಿ. ಟಿ.ವೆಂಕಟೇಶ್ ಮಾತನಾಡಿ’ ಕ್ರೀಡೆಯಲ್ಲಿ ರಕ್ಷಿತಾ ಸಾಧನೆ ಮೆಟ್ಟಿಲೇರಿ ಸೂರ್ಯನ ಕಿರಣದ ಪ್ರಕಾಶಮಾನದಂತೆ ಮಿಂಚಿದ್ದಾರೆ. ನಾವು ಅವಳ ಆದರ್ಶ ಪಡೆದು ಚಂದ್ರ, ನಕ್ಷತ್ರಗಳು ಹಣತೆಯಂತೆ ಮಿಂಚಲು ಪ್ರಯತ್ನಿಸಬೇಕು. ಎಲ್ಲ ಮಕ್ಕಳು ರಕ್ಷಿತಾರಂತೆ ಸಾಧನೆ ಮಾಡಬೇಕು’ ಎಂದರು. ಕೋಚ್ ರಾಹುಲ್ ಬಾಲಕೃಷ್ಣ ಮಾತನಾಡಿ’ ರಕ್ಷಿತಾ ಚಿನ್ನ ಗೆದ್ದಿರುವುದು ಸಂತಸ ತಂದಿದೆ. ಅದರಲ್ಲೂ ಊರಿನವರು ಅವಳ ಸಾಧನೆಗೆ ಸನ್ಮಾನಿಸಿ ಗೌರವಿಸಿರುವುದು ಇನ್ನಷ್ಟು ಪ್ರೇರಣೆಯಾಗಿದೆ ಎಂದರು.ಸನ್ಮಾನ ಸ್ವೀಕರಿಸಿದ ರಕ್ಷಿತಾರಾಜು ಮಾತನಾಡಿ’ ನನ್ನ ಗೆಲುವಿಗೆ ಅಜ್ಜಿಯ ಪ್ರೋತ್ಸಾಹ, ಕೋಚ್ ರಾಹುಲ್, ಗೈಡ್ ರನ್ನರ್ ತಬರೇಶ್, ಸೌಮ್ಯ ಹಾಗೂ ನನಗೆ ಎಲ್ಲ ಸಹಕಾರ ನೀಡಿದ ಸರ್ವರಿಗೂ ನಾನು ಅಭಾರಿಯಾಗಿದ್ದೇನೆ.ಸನ್ಮಾನ ಸ್ವೀಕರಿಸಿ ಮತ್ತಷ್ಟು ಸಾಧನೆ ಮಾಡಲು ನನಗೆ ಪ್ರೇರಣೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ರಕ್ಷಿತಾಳ ಅಜ್ಜಿ ಲಲಿತಮ್ಮ, ಚಿಕ್ಕಪ್ಪ ರವಿ, ಮುಖ್ಯ ಶಿಕ್ಷಕ ಪಿ.ವಾಸುದೇವ್, ಶಿಕ್ಷಕರಾದ ಜಿ.ಎಚ್ ಶ್ರೀನಿವಾಸ್, ಪ್ರವೀಣ್,ಅಕ್ರಂ, ಮುಖಂಡರಾದ ಅರುಣ್ ಪೂಜಾರಿ, ಎನ್.ಟಿ.ದಿನೇಶ್, ಸೋಮೇಶ್ ಮರ್ಕಲ್, ಸಂಜಯ್ ಗೌಡ, ಮಧುಕುಮಾರ್, ಬಿ.ಬಿ.ಮಂಜುನಾಥ್,
ಎ.ಆರ್.ಅಭಿಲಾಷ್,ಮಹೇಶ್,ಟಿ.ಎಂ.ನರೇಂದ್ರ ಮತ್ತಿತರರು ಇದ್ದರು.