ಇತ್ತೀಚಿನ ಸುದ್ದಿ
ಪುತ್ತೂರು ಮಾಜಿ ಶಾಸಕ ಕೆ. ರಾಮ ಭಟ್ ನಿಧನ: ಕರಾವಳಿಯಿಂದ ವಿಧಾನಸಭೆ ಪ್ರವೇಶಿಸಿದ ಮೊದಲ ಬಿಜೆಪಿ ನಾಯಕ
06/12/2021, 20:40
ಮಂಗಳೂರು(reporterkarnataka.com): ಪುತ್ತೂರಿನ ಮಾಜಿ ಶಾಸಕ, ಬಿಜೆಪಿಯ ಹಿರಿಯ ನಾಯಕ ಉರಿಮಜಲು ಕೆ.ರಾಮ(92) ಭಟ್ ಇಂದು ನಿಧನರಾದರು.
ರಾಮ ಭಟ್ ಅವರು ಕರಾವಳಿಯಿಂದ ಬಿಜೆಪಿಯಲ್ಲಿ ಆಯ್ಕೆಗೊಂಡ ಮೊದಲ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜನಸಂಘ ಮೂಲಕ ರಾಜಕೀಯ ಜೀವನ ಆರಂಭಿಸಿದ ರಾಮ ಭಟ್ ಅವರು ಪುತ್ತೂರು ಕ್ಷೇತ್ರದಿಂದ
1978ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ. ಸಂಕಪ್ಪ ರೈ ಅವರನ್ನು ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. 1983ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅವರು ಮತ್ತೆ ಆಯ್ಕೆಗೊಂಡಿದ್ದರು. 80ರ ದಶಕದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಂಗಳೂರು ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ನ ಬಿ. ಜನಾರ್ದನ ಪೂಜಾರಿ ಎದುರು ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
ಜನಸಂಘದ ಮೂಲಕ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಲು ಸಾಕಷ್ಟು ಶ್ರಮಪಟ್ಟಿದ್ದರು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಮಭಟ್ ಅವರನ್ನು ಫೋನ್ ಮೂಲಕ ಸಂಪರ್ಕಿಸಿ ಯೋಗಕ್ಷೇಮ ವಿಚಾರಿಸಿದ್ದರು.