ಇತ್ತೀಚಿನ ಸುದ್ದಿ
ಪಿಯು ವಿದ್ಯಾರ್ಥಿನಿ ನಿಗೂಢ ಸಾವು: ತಮಿಳುನಾಡಿನಲ್ಲಿ ಭಾರೀ ಹಿಂಸಾಚಾರ, ಕರ್ಫ್ಯೂ ಜಾರಿ
17/07/2022, 23:57
ಚೆನ್ನೈ(reporterkarnataka.com):
ತಮಿಳುನಾಡಿನ ಕಲ್ಲಕುರಿಚಿಯ ಚಿನ್ನಸೇಲಂನಲ್ಲಿರುವ ಖಾಸಗಿ ವಸತಿ ಶಾಲೆಯೊಂದರ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಆಕೆಯ ಸಾವಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆ ಭಾನುವಾರ ಹಿಂಸಾಚಾರಕ್ಕೆ ತಿರುಗಿದೆ.
ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಕಲ್ಲಕುರಿಚಿ ತಾಲೂಕು ಮತ್ತು ಚಿನ್ನಸೇಲಂ ತಾಲೂಕಿನ ಕೆಲವು ಭಾಗಗಳಲ್ಲಿ ಜುಲೈ 31ರವರೆಗೆ ಸೆಕ್ಷನ್ 144 ರ ಅಡಿಯಲ್ಲಿ ಜಿಲ್ಲಾಧಿಕಾರಿ ಪಿಎನ್ ಶ್ರೀಧರ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿಶಾಲಾ ಆವರಣಕ್ಕೆ ನುಗ್ಗಿ ಶಾಲಾ ಬಸ್ಸು ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಇತ್ತ ಖಾಸಗಿ ಶಾಲೆಯಲ್ಲಿ ಶಿಕ್ಷಕರ ಕಿರುಕುಳ ತಾಳಲಾರದೆ 12ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ವಿವರವಾದ ವರದಿ ನೀಡುವಂತೆ ಮುಖ್ಯ ಶಿಕ್ಷಣಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಕಲ್ಲಕುರಿಚಿಯ ಚಿನ್ನಸಲೇಂ ಎಂಬಲ್ಲಿ ಪ್ರತಿಭಟನಾಕಾರರು ಶಾಲೆಯ ಅವರಣದೊಳಗೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿ ನಿಲ್ಲಿಸಿದ್ದ ಶಾಲಾ ಬಸ್ಸುಗಳ ಕಿಟಕಿ ಗಾಜುಗಳನ್ನು ಮುರಿದು ಬೆಂಕಿ ಹಚ್ಚಿದರು. ಬಸ್ಸಿನ ಮೇಲೆ ಏರಿ ಕೇಕೆ ಹಾಕುತ್ತಾ, ಆಕ್ರೋಶ ವ್ಯಕ್ತಿಪಡಿಸುತ್ತಾ ಧ್ವಂಸ ಮಾಡಿದರು. ಪರಿಸ್ಥಿತಿಯನ್ನು ತಿಳಿಗೊಳಿಸಲು ಕಲ್ಲಕುರಿಚಿ ಜಿಲ್ಲಾ ಪೊಲೀಸರು ಲಾಠಿಪ್ರಹಾರ ಮಾಡಿದರು. ಆಶ್ರುವಾಯು ಸಿಡಿಸಿದರು. ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದರು. ಘಟನೆಯಲ್ಲಿ ಡಿಐಜಿ ಎಂ ಪಾಂಡಿಯಾನ್ ಸೇರಿದಂತೆ 20ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. 13ಕ್ಕೂ ಹೆಚ್ಚು ಬಸ್ಸುಗಳಿಗೆ ಬೆಂಕಿ ಹಚ್ಚಿ ಕೆಲವು ಬಸ್ಸುಗಳನ್ನು ಜಖಂಗೊಳಿಸಿದ್ದಾರೆ.
ಘಟನೆಯೇನು..?
ಜುಲೈ 13 ರಂದು ಮುಂಜಾನೆ ಕಡಲೂರು ಜಿಲ್ಲೆಯ ಪೆರಿಯನೆಸಲೂರು ಗ್ರಾಮದ 17 ವರ್ಷದ ಶ್ರೀಮತಿ ಎಂಬ ವಿದ್ಯಾರ್ಥಿನಿ ಶಾಲೆಯ ಹಾಸ್ಟೆಲ್ ಆವರಣದಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಶಾಲೆಯು ಕಲ್ಲಕುರಿಚಿ ಜಿಲ್ಲೆಯ ಚಿನ್ನಸೇಲಂ ಬಳಿಯ ಕಣಿಯಮೂರ್‌ನಲ್ಲಿದೆ. 12ನೇ ತರಗತಿ ವಿದ್ಯಾರ್ಥಿನಿ ಶ್ರೀಮತಿ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಳು.
ಹಾಸ್ಟೆಲ್‌ನ ಮೂರನೇ ಮಹಡಿಯ ಕೊಠಡಿಯೊಂದರಲ್ಲಿ ವಾಸವಾಗಿದ್ದ ವಿದ್ಯಾರ್ಥಿನಿ ಮೇಲಿನ ಮಹಡಿಯಿಂದ ನೆಲಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೇಹಕ್ಕೆ ಗಾಯವಾಗಿದ್ದು ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.