ಇತ್ತೀಚಿನ ಸುದ್ದಿ
ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು ಎನ್ನುವಂತೆ ಪತ್ರಕರ್ತರು ಕೆಲಸ ಮಾಡಬೇಕಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
12/11/2023, 22:28
ಶಿವರಾಯ ಲಕ್ಷ್ಮಣ ಕರ್ಕರಮುಂಡಿ ಬೆಳಗಾವಿ
info.reporterkarnataka@gmail.com
ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳ ಕುರಿತು ಇಂದು ವಿಮರ್ಶೆ ಮಾಡಬೇಕಾದ ಸ್ಥಿತಿ ಬಂದಿದೆ. ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು ಎನ್ನುವಂತೆ ಪತ್ರಕರ್ತರು ಕೆಲಸ ಮಾಡಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಂಘಟಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪತ್ರಿಕಾ ವಿತರಕರಿಗೆ ಸೈಕಲ್ ವಿತರಿಸಿ ಅವರು ಅವರು ಮಾತನಾಡಿದರು.
ಪದೇ ಪದೆ ನನ್ನ ಮತ್ತು ಸಚಿವ ಸತೀಶ್ ಜಾರಕಿಹೊಳಿ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನುವಂತೆ ಸುದ್ದಿ ಬರುತ್ತಿದೆ. ಇದಕ್ಕೆಲ್ಲ ಕೆಲವೊಮ್ಮೆ ಉತ್ತರಿಸಲೂ ಮುಜುಗರವಾಗುತ್ತದೆ. ಇಲ್ಲಿ ನಾವಿಬ್ಬರೂ ಇದ್ದೇವೆ. ನಮ್ಮ ಮಧ್ಯೆ ಯಾವ ಗೊಂದಲವೂ ಇಲ್ಲ. ಆದರೆ ಸುಳ್ಳನ್ನೇ ಪದೇ ಪದೇ ಹೇಳುವುದರಿಂದ ಜನರಲ್ಲಿ ಗೊಂದಲ ನಿರ್ಮಾಣವಾಗುತ್ತದೆ. ಇದರಿಂದಾಗಿ ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವಂತೆ ನಮ್ಮ ಸ್ಥಿತಿಯಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಪತ್ರಕರ್ತರು ರಾಜಕಾರಣಕ್ಕಿಂತ ಅಭಿವೃದ್ಧಿ ಕೆಲಸಗಳ ಕುರಿತು ಹೆಚ್ಚಿನ ಬೆಳಕು ಚೆಲ್ಲುವ ಕೆಲಸ ಮಾಡಬೇಕು. ಈ ವಿಷಯದಲ್ಲಿ ಉಡುಪಿಯ ಪತ್ರಕರ್ತರು ಬಹಳ ಜಾಣರು ಸಚಿವೆ ಹೆಬ್ಬಾಳಕರ್ ನುಡಿದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ ಸೇರಿದಂತೆ ಹಲವರಿಗೆ ಅಭಿನಂದಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಾನು ಸಾಮಾನ್ಯ ಹಳ್ಳಿಯ ಕುಟುಂಬದಿಂದ ಬಂದವಳು. ರಾಜಕಾರಣವನ್ನೇ ಇಷ್ಟಪಟ್ಟು ಬಂದವಳು. ಆದರೆ ನನಗೆ ನಾನೇ ಲಕ್ಷ್ಮಣ ರೇಖೆಯನ್ನು ಹಾಕಿಕೊಂಡಿದ್ದೇನೆ. ಅದನ್ನು ಎಂದೂ ದಾಟುವುದಿಲ್ಲ. ನಾನು ತಪ್ಪು ಮಾಡಿದಾಗ ತಿದ್ದಿ ಹೇಳಿ. ಆದರೆ ನೈಜ ಸುದ್ದಿ ಪ್ರಕಟಿಸಿ. ವಿಷಯಾಂತರ ಆಗುವುದು ಬೇಡ. ನಿಮ್ಮ ಸಹಕಾರವಿರಲಿ, ನಾವೆಲ್ಲ ಸೇರಿ ಅರ್ಥಪೂರ್ಣ ಕೆಲಸ ಮಾಡೋಣ. ಸರಕಾರದಿಂದ ಆಗಬೇಕಾದ ಅಭಿವೃದ್ಧಿ ಕೆಲಸಗಳ ಕುರಿತು ಗಮನ ಸೆಳೆದರೆ ಕೆಲಸ ಮಾಡಲು ಅನುಕೂಲವಾಗುತ್ತದೆ. ರಾಜಕಾರಣಕ್ಕಿಂತ ಅಭಿವೃದ್ಧಿ ಕುರಿತು ಹೆಚ್ಚು ಸುದ್ದಿ ಮಾಡುವಂತಾಗಲಿ. ನಾನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಅಲ್ಲಿನ ಪತ್ರಕರ್ತರನ್ನು ಹತ್ತಿರದಿಂದ ನೋಡುತ್ತಿದ್ದೇನೆ. ಅವರು ಸರಕಾರದಿಂದ ಆಗಬೇಕಾದ ಕೆಲಸಗಳ ಬಗ್ಗೇ ಕೇಳುತ್ತಾರೆ. ಹಾಗಾಗಿಯೇ ಉಡುಪಿ ಬುದ್ದಿವಂತರ ಜಿಲ್ಲೆ ಎನ್ನುತ್ತಾರೆ ಎಂದು ಅವರು ಹೇಳಿದರು.