ಇತ್ತೀಚಿನ ಸುದ್ದಿ
20ಗಂಟೆಯೊಳಗೆ ಕಳ್ಳರನ್ನು ಬಂಧಿಸಿದ ಪೊಲೀಸರು ; ಮೂರು ಮನೆಯಿಂದ 20ಲಕ್ಷ ಮೌಲ್ಯದ ಕಳವು ಮಾಡಿದ್ದ ಖದೀಮರು ಅಂದರ್ !
21/10/2025, 19:21

ಮಂಗಳೂರು(reporterkarnataka.com): ಮಂಗಳೂರು ಲಾಲ್ ಬಾಗ್ ಹ್ಯಾಟ್ ಹಿಲ್ನ ಅಪಾರ್ಟ್ಮೆಂಟ್ನಲ್ಲಿ ನಡೆದ ₹20 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಾಗೂ ವಿದೇಶಿ ಕರೆನ್ಸಿ ಕಳವು ಪ್ರಕರಣವನ್ನು ಉರ್ವಾ ಪೊಲೀಸರು ಕೇವಲ 20 ಗಂಟೆಗಳಲ್ಲಿ ಪತ್ತೆಹಚ್ಚಿ ಇಬ್ಬರು ಅಸ್ಸಾಂ ಮೂಲದ ಕಳ್ಳರಾದ ಅಭಿಜಿತ್ ದಾಸ್ (24) ಮತ್ತು ದೇಬಾ ದಾಸ್ (21)ರನ್ನು ಬಂಧಿಸಿದ್ದಾರೆ.
ಅ.19ರ ರಾತ್ರಿ ಕಳ್ಳರು ಮೂರು ಫ್ಲಾಟ್ಗಳಿಗೆ ನುಗ್ಗಿ ಚಿನ್ನಾಭರಣ, ₹5,000 ನಗದು, 3,000 ದಿರ್ಹಾಮ್ ಹಾಗೂ ಮೊಬೈಲ್ಫೋನ್ ಕಳವು ಮಾಡಿದ್ದರು. ರಿಯಾಜ್ ರಶೀದ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಾದ ಬಳಿಕ ಪೊಲೀಸರು ಶ್ವಾನ ದಳ ಹಾಗೂ ಫಿಂಗರ್ಪ್ರಿಂಟ್ ತಜ್ಞರ ಸಹಾಯದಿಂದ ತನಿಖೆ ಆರಂಭಿಸಿದರು.
ಮಂಗಳೂರು ಉರ್ವಾ ಠಾಣಾ ತಂಡವು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ಬಂಧನ ಕಾರ್ಯಾಚರಣೆ ನಡೆಸಿ ಕಳವು ಮಾಡಿದ ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆದಿದೆ. ಆರೋಪಿಗಳಲ್ಲಿ ಒಬ್ಬನಾದ ಅಭಿಜಿತ್ ದಾಸ್ ವಿರುದ್ಧ ಹಿಂದೆಯೂ ಬೆಂಗಳೂರು ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಮನೆ ಕಳ್ಳತನ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆಯನ್ನು ಡಿ.ಸಿ.ಪಿ. (ಕ್ರೈಂ) ಅವರ ಮೇಲ್ವಿಚಾರಣೆಯಲ್ಲಿ ಉರ್ವಾ ಠಾಣಾ ಸಿಬ್ಬಂದಿ ಯಶಸ್ವಿಯಾಗಿ ನಡೆಸಿದ್ದಾರೆ.