ಇತ್ತೀಚಿನ ಸುದ್ದಿ
ಸುಳ್ಳು ಸುದ್ದಿ ತಡೆಗಟ್ಟುವಲ್ಲಿ ಪಿಐಬಿ ಸತ್ಯಶೋಧನಾ ಘಟಕ ವಿಫಲ: ಲೋಕಸಭೆಯಲ್ಲಿ ಸಂಸದ ಕುಮಾರ ನಾಯಕ ಕಳವಳ
27/03/2025, 17:47

ನವದೆಹಲಿ(reporterkarnataka.com): ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪಿಐಬಿಯ (Press Information Bureau) ಸತ್ಯಶೋಧನಾ ಘಟಕದ ಕಾರ್ಯವೈಖರಿಯ ಬಗ್ಗೆ ರಾಯಚೂರು-ಯಾದಗಿರಿ ಸಂಸದ ಜಿ. ಕುಮಾರ ನಾಯಕ ಅವರು ಸಂಸತ್‌ನಲ್ಲಿ ಇಂದು ಕಳವಳ ವ್ಯಕ್ತಪಡಿಸಿದರು.
ಲೋಕಸಭೆಯಲ್ಲಿ ಮಾತನಾಡಿದ ಅವರು, ಸುಳ್ಳು ಸುದ್ದಿಗಳನ್ನು ಗುರುತಿಸಲು ಮತ್ತು ಪರಿಶೀಲಿಸಲು ಈ ಘಟಕ ಬಳಸುವ ಮಾನದಂಡಗಳು ಮತ್ತು ವಿಧಾನಗಳ ಕುರಿತು ಸ್ಪಷ್ಟತೆಯನ್ನು ಕೋರಿದರು. ಅಲ್ಲದೆ, ಈ ಘಟಕದ ಸತ್ಯ-ಶೋಧನಾ ಪ್ರಕ್ರಿಯೆಯು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ತೆಗೆದುಹಾಕುವಲ್ಲಿ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎನ್ನುವ ಮಾಹಿತಿ ಕೋರಿದರು. ಜೊತೆಗೆ ಸರ್ಕಾರವು ಸ್ವತಂತ್ರ, ಪಕ್ಷಾತೀತ ಸತ್ಯ-ಶೋಧನಾ ಸಂಸ್ಥೆಯನ್ನು ಸ್ಥಾಪಿಸುವ ಬಗ್ಗೆ ಪರಿಗಣಿಸುತ್ತಿದೆಯೇ ಎಂಬುದರ ಬಗ್ಗೆ ಪ್ರಶ್ನಿಸಿದರು. ಇದರೊಟ್ಟಿಗೆ ಕಳೆದ ಮೂರು ವರ್ಷಗಳಲ್ಲಿ ಸ್ವೀಕೃತ ಮತ್ತು ಪರಿಹರಿಸಿದ ದೂರುಗಳ ರಾಜ್ಯವಾರು ಮಾಹಿತಿಯನ್ನು ಒದಗಿಸಲು ಸರ್ಕಾರವನ್ನು ಒತ್ತಾಯಿಸಿದರು.
ಜಿ. ಕುಮಾರ ನಾಯಕ ಅವರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವರು “ಪಿಐಬಿ ಸತ್ಯ-ಶೋಧನಾ ಘಟಕವು 2019ರ ನವೆಂಬರ್‌ನಲ್ಲಿ ಸ್ಥಾಪನೆಯಾಗಿದ್ದು, ನಾಲ್ಕು ಹಂತದ ಪರಿಶೀಲನಾ ಪ್ರಕ್ರಿಯೆಯನ್ನು ಅನುಸರಿಸುತ್ತದೆ. ಈ ಘಟಕವು ಮುಖ್ಯವಾಗಿ ಭಾರತ ಸರ್ಕಾರಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿಗಳನ್ನು, ತಪ್ಪು ಮಾಹಿತಿಗಳನ್ನು ಸರಿಪಡಿಸುವ ಕಾರ್ಯವನ್ನು ನಿರ್ವಹಿಸುತ್ತದೆ ಎಂದು ಸ್ಪಷ್ಟನೆ ನೀಡಿದರು. ಅಧಿಕೃತ ಮಾಹಿತಿಗಳ ಪ್ರಕಾರ, ಘಟಕವು ವಾರ್ಷಿಕವಾಗಿ 20,000 ರಿಂದ 25,000 ದೂರುಗಳನ್ನು ಸ್ವೀಕರಿಸುತ್ತದೆ. ಆದರೆ, ಈ ದೂರುಗಳ ಪೈಕಿ ಕೇವಲ 30% ಮಾತ್ರ ಸರ್ಕಾರದ ನೀತಿಗಳು ಮತ್ತು ಯೋಜನೆಗಳಿಗೆ ಸಂಬಂಧಿಸಿದ್ದರಿಂದ ಅವನ್ನು ಮಾತ್ರ ಪರಿಗಣಿಸಿ, ಘಟಕದ ವ್ಯಾಪ್ತಿಗೆ ಬರದ ಕಾರಣ ಮಿಕ್ಕ ಶೇ 70ರಷ್ಟು ದೂರುಗಳನ್ನು ಪರಿಗಣಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಇದಕ್ಕೆ ಮರು ಪ್ರತಿಕ್ರಿಯಿಸಿದ ಜಿ. ಕುಮಾರ ನಾಯಕ ಅವರು, ಸರ್ಕಾರದ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೂ, ಪಿಐಬಿ ಸತ್ಯಶೋಧನಾ ಘಟಕದ ವ್ಯಾಪ್ತಿಯು ಸಂಕುಚಿತವಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದು ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳಿಗಷ್ಟೇ ಸೀಮಿತವಾಗಿರುವುದರಿಂದ, ಸಮಾಜದಲ್ಲಿ ಹರಡುವ ಹೆಚ್ಚಿನ ಸುಳ್ಳು ಸುದ್ದಿಗಳನ್ನು ಪರಿಹರಿಸಲು ವಿಫಲವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸುಳ್ಳು ಸುದ್ದಿಗಳ ಅಪಾಯವನ್ನು ಒತ್ತಿ ಹೇಳಿದ ಸಂಸದರು, ವಿಶೇಷವಾಗಿ ಸಾರ್ವಜನಿಕ ಆರೋಗ್ಯ, ಸಾಮಾಜಿಕ ಸೌಹಾರ್ದ ಮತ್ತು ರಾಷ್ಟ್ರೀಯ ಭದ್ರತೆ ಕ್ಷೇತ್ರಗಳಲ್ಲಿ ಸುಳ್ಳುಸುದ್ದಿಗಳು ಗಂಭೀರ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದರು.
ಸುಳ್ಳು ಮಾಹಿತಿಯು ಪ್ರಜಾಪ್ರಭುತ್ವ ಮತ್ತು ಸಾರ್ವಜನಿಕ ಚರ್ಚೆಗೆ ಒಂದು ಗಂಭೀರ ಬೆದರಿಕೆಯಾಗಿದೆ. ತಪ್ಪು ಮಾಹಿತಿಗಳನ್ನು ತಡೆಯುವ ನಿಟ್ಟಿನಲ್ಲಿ ಘಟಕದ ವ್ಯಾಪ್ತಿಯನ್ನು ವಿಸ್ತರಿಸುವ ಅಗತ್ಯವಿದೆ ಎಂದು ತಿಳಿಸಿದರು.
ಸರ್ಕಾರದ ನಿಯಂತ್ರಣದಲ್ಲಿ ಮಾತ್ರ ಕಾರ್ಯನಿರ್ವಹಿಸುವ ಘಟಕವು ಆಯ್ದ ವಿಷಯಗಳನ್ನು ಮಾತ್ರ ಪರಿಗಣಿಸುತ್ತಿರುವುದು ಪಾರದರ್ಶಕತೆ ಕೊರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇದರ ಬಗ್ಗೆ ಸಾರ್ವಜನಿಕ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಘಟಕವನ್ನು ರಾಜಕೀಯ ಪ್ರಭಾವದಿಂದ ಮುಕ್ತಗೊಳಿಸಿ ಸ್ವಾಯತ್ತ, ಪಕ್ಷಾತೀತವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದು ಪ್ರತಿಪಾದಿಸಿದರು.
ಇದು ಸರ್ಕಾರಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿಗಳನ್ನು ಸರಿಪಡಿಸುವ ಜೊತೆಗೆ ದೇಶಾದ್ಯಂತ ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ತಡೆಗಟ್ಟುವ ಒಂದು ಪರಿಣಾಮಕಾರಿ ವ್ಯವಸ್ಥೆಯಾಗಬೇಕೆಂದು ಅವರು ಒತ್ತಾಯಿಸಿದರು.
ಪಿಐಬಿ ಸತ್ಯಶೋಧನಾ ಘಟಕವನ್ನು ತ್ವರಿತವಾಗಿ ಸುಧಾರಣೆ ಮಾಡಬೇಕು. ಪಾರದರ್ಶಕತೆ, ಜವಾಬ್ದಾರಿತನ ಮತ್ತು ಸಮಗ್ರ ಸತ್ಯ-ಶೋಧನಾ ವ್ಯವಸ್ಥೆಯ ಮೂಲಕ ದೇಶದ ಜನತೆಗೆ ನಿಖರವಾದ ಮತ್ತು ನಿರ್ಬಂಧರಹಿತ ಮಾಹಿತಿ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಕುಮಾರ ನಾಯಕ ಅವರು ಸರ್ಕಾರಕ್ಕೆ ಮನವಿ ಮಾಡಿದರು.