ಇತ್ತೀಚಿನ ಸುದ್ದಿ
ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ಸನ್ನಿಧಿಯಲ್ಲಿ ಪಾರ್ಕಿಂಗ್ ಶುಲ್ಕ ಸುಲಿಗೆ: ನಿಗದಿಗಿಂತ ಹೆಚ್ಚು ವಸೂಲಿ; ಭಕ್ತರ ಆಕ್ರೋಶ
08/02/2026, 19:47
*ಶ್ರೀಕಂಠೇಶ್ವರ ದೇವಾಲಯ ಆಡಳಿತ ಮಂಡಳಿ ಗಪ್ ಚುಪ್...!*
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರನ ದೇವಾಲಯಕ್ಕೆ ಬರುವ ಭಕ್ತರನ್ನ ಪಾರ್ಕಿಂಗ್ ಹೆಸರಿನಲ್ಲಿ ಸುಲಿಗೆ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ಪಾರ್ಕಿಂಗ್ ಶುಲ್ಕದಲ್ಲಿ ನಿಗದಿತ ದರಕ್ಕಿಂತಲೂ ಹೆಚ್ಚು ವಸೂಲಿ ಮಾಡುವ ಮೂಲಕ ಹಗಲು ದರೋಡೆ ಮಾಡುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.
ದಾಖಲೆ ಸಮೇತ ರೆಡ್ ಹ್ಯಾಂಡಾಗಿ ಹಿಡಿದರೂ ದೇವಾಲಯ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಕ್ಕೆ ಎಡ ಮಾಡಿಕೊಟ್ಟಿದೆ. ಬಸ್, ಲಾರಿ ಹಾಗೂ ಮಿನಿಬಸ್ ಗೆ 50 ರೂ., ಕಾರ್ ಜೀಪ್ ಗಳಿಗೆ 25 ರೂ., ಟೆಂಪೋಗಳಿಗೆ 35 ರೂ., ಬೈಕ್ ಸ್ಕೂಟರ್ ಗಳಿಗೆ 5 ರೂ. ಎಂದು ನಾಮಪಲಕದಲ್ಲಿ ದರನಿಗದಿಪಡಿಸಲಾಗಿದೆ.ಆದ್ರೆ ಟೆಂಡರ್ ದಾರರು ಬಸ್ ಗಳಿಗೆ 80 ರೂ. ಶುಲ್ಕ ವಸೂಲಿ ಮಾಡಿದ್ದಾರೆ. ಕಾರು, ಜೀಪ್ ಗಳಿಗೆ 30 ರೂ. ವಸೂಲಿ ಮಾಡಿದ್ದಾರೆ. ಇದಕ್ಕೆ ರಾಜಾರೋಷವಾಗಿ ರಸೀತಿಯನ್ನೂ ಸಹ ನೀಡಿದ್ದಾರೆ. ಪ್ರತಿದಿನ ಸಾವಿರಾರು ವಾಹನಗಳು ಪಾರ್ಕಿಂಗ್ ನಲ್ಲಿ ನಿಲ್ಲುತ್ತಿವೆ. ವಾಹನ ಮಾಲೀಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದರೂ ಆಡಳಿತ ಮಂಡಳಿ ಗಪ್ ಚುಪ್ ಆಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.ಮತ್ತೊಂದು ದುರಂತವೆಂದರೆ ರಸೀತಿಯಲ್ಲಿ *PARK AT YOUR OWN RISK…LOST AND DAMAGE WE ARE NOT RESPONCIBLE* ಎಂದು ನಮೂದಿಸಲಾಗಿದೆ.

ಪಾರ್ಕಿಂಗ್ ಶುಲ್ಕ ವಸೂಲಿ ಮಾಡಿದ್ರೂ ರಿಸ್ಕ್ ವಾಹನ ಮಾಲೀಕರದ್ದೇ ಎಂಬ ಕಂಡೀಷನ್ ಹಾಸ್ಯಾಸ್ಪದವಾಗಿದೆ. ಕಳೆದು ಹೋದ್ರೆ ಅಥವಾ ಹಾನಿಯಾದ್ರೂ ಅವರು ಜವಾಬ್ದಾರಿ ಅಲ್ಲವಂತೆ. ಹೀಗಿದ್ದಾಗ ಶುಲ್ಕ ವಸೂಲಿ ಯಾಕೆ..? ಎಂಬ ಪ್ರಶ್ನೆಗೆ ಆಡಳಿತ ಮಂಡಳಿ ಉತ್ತರಿಸಬೇಕಿದೆ. ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ಪಾವತಿಸಿದರೂ ವಾಹನಕ್ಕೆ ಯಾವುದೇ ಭದ್ರತೆ ಇಲ್ಲವಂತೆ. ಇದ್ಯಾವ ನ್ಯಾಯ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಕೂಡಲೇ ದೇವಾಲಯದ ಆಡಳಿತ ಮಂಡಳಿ ಮಧ್ಯ ಪ್ರವೇಶಿಸಿ ಸರಿಪಡಿಸದಿದ್ದಲ್ಲಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ತಾಲೂಕು ಆಡಳಿತವಾಗಲಿ ಅಥವಾ ಶಾಸಕ ದರ್ಶನ್ ಧೃವನಾರಾಯಣ್ ಆಗಲಿ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ.












