ಇತ್ತೀಚಿನ ಸುದ್ದಿ
ಪರಶುರಾಮನ ನಕಲಿ ಮೂರ್ತಿ ಸ್ಥಾಪನೆ; ಬಿಜೆಪಿಯ ಸುನಿಲ್ ಕುಮಾರ್ ಅವರನ್ನು ತಕ್ಷಣ ಶಾಸಕ ಸ್ಥಾನದಿಂದ ಅಮಾನತುಗೊಳಿಸಿ: ಮಿಥುನ್ ರೈ ಆಗ್ರಹ
07/11/2023, 21:20
ಮಂಗಳೂರು(reporterkarnataka.com): ಕಾರ್ಕಳದ ಬೈಲೂರಿನಲ್ಲಿ ಗೋಮಾಳಕ್ಕೆ ಮೀಸಲಿಟ್ಟಿದ್ದ ಜಾಗದಲ್ಲಿ ಪರಶುರಾಮ ಥೀಂ ಪಾರ್ಕ್ ನಿರ್ಮಿಸಿ ಅಲ್ಲಿ ಪರಶುರಾಮನ ನಕಲಿ ಮೂರ್ತಿ ಸ್ಥಾಪಿಸಿದ ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರನ್ನು ತಕ್ಷಣ ಶಾಸಕ ಸ್ಥಾನದಿಂದ ಅಮಾನತುಗೊಳಿಸಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಶುರಾಮ ಥೀಂ ಪಾರ್ಕ್ ಮತ್ತು ನಕಲಿ ಪ್ರತಿಮೆ ಸ್ಥಾಪನೆ ಅವ್ಯವಹಾರದಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಪರಶುರಾಮನ ನೈಜ ಮೂರ್ತಿ ನಿರ್ಮಾಣ ಮಾಡಬೇಕು. ಅದು ಅವಿಭಜಿತ ದ.ಕ. ಜಿಲ್ಲೆಯ ಎಲ್ಲಿ ಬೇಕಾದರೂ ನಿರ್ಮಾಣ ಮಾಡಲಿ.
ಪರಶುರಾಮನ ಮೂರ್ತಿ ನಿರ್ಮಾಣದಲ್ಲಿ ಆಗಿರುವ ಅನ್ಯಾಯ, ಅವ್ಯವಹಾರದ ವಿರುದ್ಧ ಧ್ವನಿ ಎತ್ತದೆ ಇದ್ದರೆ ಖಂಡಿತ ಪರಶುರಾಮನ ಶಾಪ ತಟ್ಟಬಹುದು ಎಂದು ಬಿಜೆಪಿ ನಾಯಕರಿಗೆ ಪರೋಕ್ಷವಾಗಿ ಮಿಥುನ್ ರೈ ಅವರು ಎಚ್ಚರಿಕೆ ನೀಡಿದರು.
ತಾನೊಬ್ಬ ನೈಜ ಹಿಂದೂ ಆಗಿ ಪರಶುರಾಮನ ಮೂರ್ತಿ ನಿರ್ಮಾಣದಲ್ಲಿ ಆಗಿರುವ ಅನ್ಯಾಯದ ವಿರುದ್ಧ, ಅಧರ್ಮದ ವಿರುದ್ಧ ಹೋರಾಡಲು ಸಿದ್ಧನಿದ್ದೇನೆ. ಈ ನಿಟ್ಟಿನಲ್ಲಿ ತಾನು ಸ್ವಾಮೀಜಿಗಳನ್ನು ಹಾಗೂ ಮಠಾಧೀಶರನ್ನು ಭೇಟಿಯಾಗಿ ಅವರ ಆರ್ಶಿರ್ವಾದ ಮತ್ತು ಬೆಂಬಲ ಪಡೆಯುವ ಅಭಿಯಾನ ಆರಂಭಿಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಮಹಾನಗರಪಾಲಿಕೆಯ ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ ಮುಂತಾದವರು ಉಪಸ್ಥಿತರಿದ್ದರು.