ಇತ್ತೀಚಿನ ಸುದ್ದಿ
ಪಾಂಡೇಶ್ವರ ಕರ್ನಾಟಕ ಶಿವ ಸೇವಾ ಸಮಿತಿಯಿಂದ ಡಾ ಸುರೇಶ ನೆಗಳಗುಳಿ, ಮಣಿಕಾಂತ್ ಕದ್ರಿ ಸಹಿತ ಸಾಧಕರಿಗೆ ಸನ್ಮಾನ
21/12/2023, 13:36
ಮಂಗಳೂರು(reporterkarnataka.com): ಪಾಂಡೇಶ್ವರದಲ್ಲಿರುವ ಕರ್ನಾಟಕ ಶಿವ ಸೇವಾ ಸಮಿತಿ ವತಿಯಿಂದ ನಡೆಸಿದ 95ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಂಗಳೂರಿನ ಮೂಲವ್ಯಾಧಿ ಕ್ಷಾರ ಚಿಕಿತ್ಸಕ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಅವರಿಗೆ ಶಾಲು ಫಲಕ ಸಹಿತ ಸಾಧಕ ಸನ್ಮಾನ ಮಾಡಲಾಯಿತು.
ಸನ್ಮಾನಕ್ಕೆ ಉತ್ತರವಾಗಿ ನೆಗಳಗುಳಿಯವರು ಮಾತನಾಡುತ್ತಾ, ಸಣ್ಣ ಇರುವೆಯಂತಹ ನನಗೆ ದೈವ ಸನ್ನಿಧಿಯಲ್ಲಿ ನೀಡಿದ ಈ ಪುರಸ್ಕಾರ ಮೊದಲು ಲಭಿಸಿದ ನೂರಾರು ಪ್ರಶಸ್ತಿಗಳಿಂದ ಹೆಚ್ವಿನ ತುಲಾಭಾರ ಹೊಂದಿದೆ. ವೈದ್ಯನಾದ ನಾನು ನನ್ನ ಸೇವೆಯನ್ನು ಮಾಡಲು ಸದಾ ಸಿದ್ಧನಿದ್ದೇನೆ. ಮಂಗಳಾ ಆಸ್ಪತ್ರೆಯಲ್ಲಿ ಕರೆಮಾಡಿ ಸಂಪರ್ಕ ಮಾಡಲು ಈ ಮೂಲಕ ಕರೆ ನೀಡುತ್ತಿದ್ದು ತ್ಯಾಗೇ ನೈಕೇ ಅಮೃತತ್ವ ಮಾನುಷು; ಎಂಬ ಉಕ್ತಿ ಸದಾ ಯಶಸ್ಕರ ಎನ್ನುತ್ತಾ ಇದೇ ಕಾರ್ಯಕ್ರಮದ ವಿಷಯವಾದ ಸ್ವರಚಿತ ಮುಕ್ತಕ ಮಾಲೆಯ ವಾಚನ ಮಾಡಿದರು.
ಕಾಂತಪ್ಪ ಬಂಗೇರ ಬಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್,ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶಿತ್ ಪಿರೇರಾ, ಸಂಗೀತ ನಿರ್ದೇಶಕ ಮಣಿಕಾಂತ ಕದ್ರಿ, ನಟ ವಿಜಯ ಕುಮಾರ್ ಕೊಡಿಯಾಲ್ ಬೈಲ್, ಪಿಂಗಾರ ಮುಖ್ಯಸ್ಥ ರೇಮಂಡ್ ಡಿಕುನ್ಹ , ಚಲನ ಚಿತ್ರ ನಟ ರಾಜಗುಳಿಗ ಕ್ಷೇತ್ರ ಬಂದಲೆಯ ಧರ್ಮದರ್ಶಿ ಸತೀಶ್ ಬಂದಲೆ, ಮೂಡುಬಿದಿರೆಯ ಗಣೇಶ್ ಪ್ರಸಾದ್,ಹಿಂದುಳಿದ ವರ್ಗ ಅಧ್ಯಕ್ಷ ಸದಾಶಿವ ಕುಲಾಲ್ ,ದೈಹಿಕ ಶಿಕ್ಷಕ ಭಾಸ್ಕರ್ ಪಾಲಡ್ಕ, ಮರಿಪಿಲಿ ಪ್ರಶಸ್ತಿ ವಿಜೇತ ಮಾ. ಶಶಾಂಕ್ ಸಹಿತ ಇತರ ಹಲವು ಕಲಾವಿದರನ್ನು ಶಾಲು ಹಾರ ಸಹಿತ ಸನ್ಮಾನಿಲಾಯಿತು.
ಅಧ್ಯಕ್ಷರು ಮಾತನಾಡುತ್ತಾ ಶಿವ ಕ್ಷೇತ್ರದ ಸ್ಥಾಪನೆಯಾದ ಪರಿ ಹಾಗೂ ಶತಮಾನದತ್ತ ದಾಪು ಕಾಲು ಹಾಕುವ ವಿಚಾರ ತಿಳಿಸಿದರು.
ಅಧ್ಯಕ್ಷ ಯಾದವ ಅತ್ತಾವರ, ಅಮರನಾಥ ಪಾಂಡೇಶ್ವರ ಮತ್ತಿತರ ಪದಾಧಿಕಾರಿಗಳ ಉಸ್ತುವಾರಿಯಲ್ಲಿ ನಡೆದ ವಾರ್ಷಿಕೋತ್ಸವು ಗಣ ಹೋಮ,ಸತ್ಯನಾರಾಯಣ ಪೂಜೆ,ಕ್ಷೇತ್ರ ಪಾಲ ಗುಳಿಗ ದೈವ ಸೇವೆ,ಭಜನೆ ಸಹಿತವಾಗಿ ಮುಂಜಾನೆಯಿಂದ ರಾತ್ರಿ ಪರ್ಯಂತ ಅದ್ದೂರಿಯಿಂದ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಕೊಡಿಯಾಲ್ ಬೈಲ್ ರಚಿಸಿ ನಿರ್ದೇಶಿಸಿರುವ ಮೈತಿದಿ ತುಳು ಸಾಂಸಾರಿಕ ನಾಟಕ ನಡೆಯಿತು.