4:43 PM Wednesday23 - October 2024
ಬ್ರೇಕಿಂಗ್ ನ್ಯೂಸ್
ಪಂಚಾಯತ್ ಪಾಲಿಟಿಕ್ಸ್: ಅಧಿಕಾರ, ಅನುದಾನದ ಆಸೆಗೆ ಗ್ರಾಪಂ ಸದಸ್ಯೆಯ ಪತಿಯ ಭೀಕರ ಹತ್ಯೆ:… ಮೂಡಿಗೆರೆ ರೈತ ಭವನದಲ್ಲಿ ಅ.25ರಂದು ವೈವಿಧ್ಯಮಯ ‘ಮಲೆನಾಡು ಹಬ್ಬ’ ಸುರತ್ಕಲ್ ಎನ್ ಐಟಿಕೆ: ಯುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪರ್ಕಿಸುವ ‘ಜಂಬೋರಿ ಆನ್… ರೈಲ್ವೆ ಹಳಿ ಮೇಲೆ ಕಲ್ಲು ಇಟ್ಟ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ: ಸಂಸದ ಕ್ಯಾ.… ಕ್ರೂರ ವಿಧಿಯಾಟ: ಮದುವೆ ನಿಶ್ಚಿತಾರ್ಥವಾದ ಯುವತಿ ರಸ್ತೆ ಅಪಘಾತಕ್ಕೆ ಬಲಿ; ಮುಂದಿನ ತಿಂಗಳು… ಚಿಕ್ಕಮಗಳೂರು: ಭಾರೀ ಮಳೆ; ಜನಜೀವನ ಅಸ್ತವ್ಯಸ್ತ; ಸಿಡಿಲಿಗೆ ಎತ್ತು ಬಲಿ ವಿಜ್ಞಾನ ಮೇಳ: ಸೆನ್ಸಾರ್ ಆಧಾರಿತ ಮಾದರಿಯಲ್ಲಿ ಸೇವಾ ಭಾರತಿ ವಿದ್ಯಾರ್ಥಿ ನಹುಷ್ ಪ್ರಥಮ ಏಷ್ಯಾದ ಗೇಮಿಂಗ್ ಮತ್ತು ಅನಿಮೇಷನ್ ರಾಜಧಾನಿಯಾಗುವುದು ಕರ್ನಾಟಕದ ಗುರಿ: ಐಜಿಸಿ 2024ರಲ್ಲಿ ಸಚಿವ… ಬಿಳಾಲುಕೊಪ್ಪ-ಬಸರೀಕಟ್ಟೆ ರಸ್ತೆ ಕೆಸರುಮಯ: ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ ಅ.19-21: ಎಸಿಪಿಐ ಮತ್ತು ಮಂಗಳೂರು ವಿವಿ ಕ್ರೈಸ್ತ ವಿದ್ಯಾಪೀಠದಿಂದ 47ನೇ ವಾರ್ಷಿಕ ಸಂಶೋಧನಾ…

ಇತ್ತೀಚಿನ ಸುದ್ದಿ

ಪಂಚಾಯತ್ ಪಾಲಿಟಿಕ್ಸ್: ಅಧಿಕಾರ, ಅನುದಾನದ ಆಸೆಗೆ ಗ್ರಾಪಂ ಸದಸ್ಯೆಯ ಪತಿಯ ಭೀಕರ ಹತ್ಯೆ: 4 ಮಂದಿ ಅಂದರ್

23/10/2024, 15:56

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಕೇವಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಅಧಿಕಾರಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಂದ ಕಿರಾತಕರನ್ನು ಜೈಲಿಗಟ್ಟಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಪತಿ ಅನುಮಾನಾಸ್ಪದವಾಗಿ ಸಾವಿಗೀಡಾದ ಪ್ರಕರಣವನ್ನು ನಂಜನಗೂಡು ಗ್ರಾಮಾಂತರ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಬಿಜೆಪಿ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಗೋವರ್ಧನ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.


ಬಿಜೆಪಿ ಗ್ರಾಮಾಂತರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಹಾಗೂ ಹಾಲಿ ದೇವರಸನಹಳ್ಳಿ ಗ್ರಾಪಂ ಸದಸ್ಯ ಗೋವರ್ಧನ್(36), ನಗರದ ನೀಲಕಂಠ ನಗರ ನಿವಾಸಿ ಜಾಹಿರ್ (25), ಹಳ್ಳದಕೇರಿ ನಿವಾಸಿ ಮಣಿಕಂಠ (24), ಕೆಎಚ್‌ಬಿ ಕಾಲೋನಿ ನಿವಾಸಿ ಮಹೇಂದ್ರ (25) ಬಂದಿತ ಆರೋಪಿಗಳು. ತಾಲ್ಲೂಕಿನ ದೇವರಸನಹಳ್ಳಿ ಗ್ರಾಪಂ ಸದಸ್ಯೆ ಸೌಭಾಗ್ಯ ಅವರ ಪತಿ ಕೆಬ್ಬೇಪುರ ಗ್ರಾಮದ ನಂಜುಂಡಸ್ವಾಮಿ(೪೭) ಕೊಲೆಯಾಗಿದ್ದ ವ್ಯಕ್ತಿ.
ಮೃತ ವ್ಯಕ್ತಿಯು ತಾಲೂಕಿನ ದೇವರಸನಹಳ್ಳಿ ಹೊಸೂರು ಸಮೀಪ ಅ 6ರ ಭಾನುವಾರ ರಾತ್ರಿ ಗಾಯಗೊಂಡ ಸ್ಥಿತಿಯಲ್ಲಿ ಗದ್ದೆಯ ಬದುವಿನಲ್ಲಿ ಬಿದ್ದಿದ್ದರು ಎನ್ನಲಾಗಿದೆ, ವಾಯು ವಿಹಾರಕ್ಕೆ ತೆರಳಿದ್ದವರು ಗಾಯಾಳು ನಂಜುಂಡಸ್ವಾಮಿಯವರನ್ನು ಸೋಮವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದರು.
ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ನಂಜುಂಡಸ್ವಾಮಿ ಮೃತಪಟ್ಟಿದ್ದರು.
ಈ ಸಂಬಂಧ ಗ್ರಾಪಂ ಸದಸ್ಯೆ ಸೌಭಾಗ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನನ್ನ ಪತಿಯನ್ನು ರಾಜಕೀಯ ಪ್ರೇರಿತ ಉದ್ದೇಶದಿಂದ ಕೊಲೆ ಮಾಡಿದ್ದು ತನಿಖೆ ನಡೆಸುವಂತೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ನೇತೃತ್ವದ ತಂಡ ತನಿಖೆ ಮುಂದುವರಿಸಿದ್ದರು.
ಕಳೆದ 20 ತಿಂಗಳ ಹಿಂದೆ ತನ್ನ ಸಂಬಂಧಿ ಸುಮತಿಯ ಅವರನ್ನು ದೇವರಸನಹಳ್ಳಿ ಗ್ರಾಪಂ ಅಧ್ಯಕ್ಷೆ ಯನ್ನಾಗಿ ಮಾಡಿದ್ದ ಗೋವರ್ಧನ್, ನೆಪ ಮಾತ್ರಕ್ಕೆ ಮಾತ್ರ ಅವರನ್ನು ಅಧ್ಯಕ್ಷೆ ಸ್ಥಾನದಲ್ಲಿ ಕೂರಿಸಿ, ಎಲ್ಲಾ ವ್ಯವಹಾರವನ್ನು ಗೋವರ್ಧನ್ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.
ಸದಸ್ಯರ ಒಪ್ಪಂದದ ಮಾತುಕತೆಯಂತೆ 20 ತಿಂಗಳ ನಂತರ ಹಾಲಿ ಸದಸ್ಯೆ ಸೌಭಾಗ್ಯ ರವರಿಗೆ ಅಧಿಕಾರ ಬಿಟ್ಟು ಕೊಡಬೇಕಿತ್ತು. ಆದ್ದರಿಂದ ನಂಜುಂಡಸ್ವಾಮಿ ನಮಗೆ ಮಾತುಕತೆಯಂತೆ ಅಧಿಕಾರ ಬಿಟ್ಟು ಕೊಡುವಂತೆ, ಗೋವರ್ಧನ್ ಬಳಿ ಕೇಳಿಕೊಂಡಿದ್ದ.
ಇನ್ನು ಮೂರು ತಿಂಗಳಲ್ಲಿ ಗ್ರಾಮ ಪಂಚಾಯಿತಿಗೆ 15ನೇ ಹಣಕಾಸು ಯೋಜನೆ ಅಡಿ 1 ಕೋಟಿ 20 ಲಕ್ಷ ಅನುದಾನ ಬರುತ್ತಿತ್ತು. ಒಂದು ವೇಳೆ ಅಧಿಕಾರ ಬಿಟ್ಟುಕೊಟ್ಟಲ್ಲಿ ಆ ಅನುದಾನದ ಬಳಕೆ ನನ್ನ ಮಿತಿಯಲ್ಲಿ ಇರುವುದಿಲ್ಲ ಅಲ್ಲದೇ ಕಮಿಷನ್ ಮೊತ್ತವು ಕೂಡ ನನಗೆ ದಕ್ಕುವುದಿಲ್ಲ ಎಂಬುದನ್ನು ಅರಿತು ಹಾಲಿ ಸದಸ್ಯೆ ಸೌಭಾಗ್ಯ ಪತಿ ನಂಜುಂಡಸ್ವಾಮಿಗೆ ಏನಾದರೂ ಗತಿ ಕಾಣಿಸಿದಲ್ಲಿ ಅಧಿಕಾರ ಸುಮತಿ ಅವರಲ್ಲೇ ಉಳಿಯುತ್ತದೆ ಎಂದು ಸಂಚು ರೂಪಿಸಿದ್ದ ಗೋವರ್ಧನ್ .
ಅದರಂತೆ ತನ್ನ ಶಿಷ್ಯಂದರಾದ ಜಾಹಿರ್ ಬಳಿ ನಿನಗೆ ಆಟೋ ತೆಗೆದುಕೊಡುತ್ತೇನೆ, ಸ್ವಲ್ಪ ದುಡ್ಡನ್ನೂ ಕೊಡುತ್ತೇನೆ, ನೀನು ನಂಜುಂಡಸ್ವಾಮಿಗೆ ಏನಾದರೂ ಗತಿ ಕಾಣಿಸು ಎಂದು ಹೇಳಿದ್ದ ಎನ್ನಲಾಗಿದ್ದು,
ಜಾಹಿರ್ ತನ್ನ ಸ್ನೇಹಿತರಾದ ಮಣಿಕಂಠ ಮತ್ತು ಮಹೇಂದ್ರರನ್ನು ಸೇರಿಸಿಕೊಂಡು ಅ.5ರಂದು ನಂಜುಂಡಸ್ವಾಮಿಯನ್ನು ಹೊಡೆಯಲು ಸಂಚು ರೂಪಿಸಿದ್ದರು. ಆದರೆ ಆ ದಿನ ಮಳೆ ಹೆಚ್ಚಾದರಿಂದ ಯೋಜನೆ ವಿಫಲವಾಯಿತು.
ನಂತರ ಅ. 6ರಂದು ಗ್ರಾಪಂ ಇತರ ಸದಸ್ಯರನ್ನು ಒಪ್ಪಿಸುವ ಸಲುವಾಗಿ ಗೋವರ್ಧನ್ ನೇತೃತ್ವದಲ್ಲಿ ಮೃತ ನಂಜುಂಡಸ್ವಾಮಿ ಸೇರಿದಂತೆ ಎಲ್ಲರನ್ನೂ ಕರೆದುಕೊಂಡು ನಗರದ ಖಾಸಗಿ ಡಾಬಾ ಒಂದರಲ್ಲಿ ರಾತ್ರಿ ಪಾರ್ಟಿ ಮಾಡಿದ್ದರು.
ನಂತರ ಜಾಹಿರ್ ಗೆ ಕರೆ ಮಾಡಿದ ಗೋವರ್ಧನ್ ಈಗ ಇಲ್ಲಿ ಪಾರ್ಟಿ ಮುಗಿಸಿ ನಂಜುಂಡಸ್ವಾಮಿ ಹೊರಟಿದ್ದಾನೆ, ದೇವರಸನಹಳ್ಳಿ ಗ್ರಾಮ ಪಂಚಾಯಿತಿ ಬಿಟ್ಟ ನಂತರ ಅವನಿಗೆ ಗತಿ ಕಾಣಿಸು ಎಂದು ಕರೆ ಮಾಡಿ 20 ನಿಮಿಷಗಳಿಗೂ ಹೆಚ್ಚು ಕಾಲ ಸಂಭಾಷಣೆ ನಡೆಸಿ ನಂಜುಂಡಸ್ವಾಮಿ ಹೋಗುತ್ತಿರುವ ಬಗ್ಗೆ ಮಾಹಿತಿ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ. ಮಾರಕಾಸ್ತ್ರ ಗಳನ್ನು ಹಿಡಿದು ನಂಜುಂಡಸ್ವಾಮಿ ಬರುವಿಕೆಗಾಗಿ ಕಾದಿದ್ದ ಜಾಹಿರ್, ಮಣಿಕಂಠ ಮತ್ತು ಮಹೇಂದ್ರ ಅವರ ಬೈಕನ್ನು ಅಡ್ಡಗಟ್ಟಿ ಮೊದಲು ಕೈಕಾಲನ್ನು ಮುರಿದು, ತಲೆಗೂ ಕೂಡ ಒಡೆದು ಗಂಭೀರವಾಗಿ ಗಾಯಗೊಳಿಸಿ ಅಲ್ಲಿಂದ ಪರಾರಿಯಾಗಿದ್ದರು.
ಪೊಲೀಸರ ತನಿಖೆ ವೇಳೆ ಆರೋಪಿಗಳು ನೈಜ ಸಂಗತಿಯನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಮೃತನ ಪತ್ನಿ ಸೌಭಾಗ್ಯ ನೀಡಿದ ದೂರಿನನ್ವಯ, ತನಿಖೆ ಮುಂದುವರಿಸಿದಾಗ ಗೋವರ್ಧನ್ ರವರ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ ಅದರಂತೆ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಿ
ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಧಿಕಾರದ ದಾಹ ಅನುದಾನದ ಲೂಟಿಗೆ ಮುಂದಾಗಿ ಮುಗ್ಧ ವ್ಯಕ್ತಿಯ ಜೀವವನ್ನು ಬಲಿ ಪಡೆದಿದ್ದ ಕಿರಾತಕರನ್ನು ಕಂಬಿಯ ಹಿಂದೆ ನಿಲ್ಲಿಸಿದ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಮತ್ತು ತಂಡಕ್ಕೆ ಹ್ಯಾಟ್ಸಾಫ್ ಎನ್ನುತ್ತಾರೆ ಕೆಬ್ಬೆಪುರ ಗ್ರಾಮಸ್ಥರು.

*ಕೊಲೆ ಪ್ರಕರಣವನ್ನು ದಿಕ್ಕು ತಪ್ಪಿಸುತ್ತಿದ್ದ ವ್ಯಕ್ತಿಗೆ ಛೀಮಾರಿ..!*
ದೇವರಸನಹಳ್ಳಿ ಮತ್ತು ಕೆಬ್ಬೆಪುರ ಮಾರ್ಗದ ರಸ್ತೆಯಲ್ಲಿ ನಡೆದ ಕೊಲೆ ಪ್ರಕರಣವನ್ನು ಆಕ್ಸಿಡೆಂಟ್ ಎಂದು ಬಿಂಬಿಸಿ ಮೃತ ವ್ಯಕ್ತಿಯ ಪತ್ನಿ ಸೌಭಾಗ್ಯ ಎಂಬುವರ ಬಳಿ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ಇದೊಂದು ಹಿಟ್ ಅಂಡ್ ರನ್ ಕೇಸ್ ಎಂದು ದೂರು ನೀಡಲು ಬಿಜೆಪಿ ಪಕ್ಷದ ಮುಖಂಡ ಬಾಲಚಂದ್ರ ಎಂಬುವರು ಮುಂದಾಗಿದ್ದರು. ಇದನ್ನು ಕಟುವಾಗಿ ವಿರೋಧಿಸಿದ ಕೆಬ್ಬೆಪುರ ಗ್ರಾಮಸ್ಥರು ಮತ್ತು ಹಗಿನ ವಾಳು ಗ್ರಾಮದ ಹಿರಿಯ ರಾಜಕೀಯ ಮುಖಂಡ ಮೂಗ ಶೆಟ್ಟಿ ನೇತೃತ್ವದಲ್ಲಿ ಭಾರಿ ಮಟ್ಟದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆಗೆ ಮುಂದಾಗಿ ಆಕ್ರೋಶ ವ್ಯಕ್ತಪಡಿಸಿದರು ಇದೊಂದು ಕೊಲೆ ಪ್ರಕರಣ ತನಿಖೆ ಮಾಡಿ ಕೊಲೆ ಆರೋಪಿಗಳನ್ನು ಬಂಧಿಸಿ ಮೃತ ವ್ಯಕ್ತಿಯ ಕುಟುಂಬಕ್ಕೆ ನ್ಯಾಯ ಕಲ್ಪಿಸಿಕೊಡಿ ಎಂದು ಆಗ್ರಹಪಡಿಸಿದರು.
ಇದರಿಂದ ಬೆದರಿದ ಪೊಲೀಸರು ಎಚ್ಚೆತ್ತು ಕೊಲೆ ಪ್ರಕರಣವನ್ನು ಭೇದಿಸಲು ಯಶಸ್ವಿಯಾದರು.

ಇತ್ತೀಚಿನ ಸುದ್ದಿ

ಜಾಹೀರಾತು