ಇತ್ತೀಚಿನ ಸುದ್ದಿ
ಪಕ್ಕದಲ್ಲೇ ಇದೆ ಕಾರಿಂಜೇಶ್ವರ ಸನ್ನಿಧಿ: ಪಟ್ಟಣವಾಗಿ ಬೆಳೆಯುತ್ತಿರುವ ವಗ್ಗಕ್ಕೆ ಬೇಕಿದೆ ಮೂಲಸೌಕರ್ಯ
08/06/2024, 20:23
ಯಾದವ ಕುಲಾಲ್ ಅಗ್ರಬೈಲು ಬಿ.ಸಿ.ರೋಡ್
info.reporterkarnataka@gmail.com
ಬಂಟ್ವಾಳದ ಕಾರಿಂಜ ಕ್ಷೇತ್ರ, ಬಿ.ಸಿ.ರೋಡು – ಪುಂಜಾಲಕಟ್ಟೆ ರಸ್ತೆ ಅಭಿವೃದ್ಧಿ, ಜನರಿಗೆ ಅನುಕೂಲವಾಗುವ ವಾರದ ಸಂತೆ ಇವೆಲ್ಲವುಗಳಿಂದ ವಗ್ಗದಲ್ಲಿ ದಿನದಿಂದ ದಿನಕ್ಕೆ ವ್ಯಾಪಾರಿಗಳ, ಪ್ರವಾಸಿಗರ, ಕೃಷಿಕರ ಆಗಮನ ಜಾಸ್ತಿಯಾಗಿದೆ. ಇದೊಂದು ಬೆಳೆಯುತ್ತಿರುವ ಪಟ್ಟಣವಾಗಿ ಬದಲಾಗುತ್ತಿದೆ. ಆದರೆ ಇಲ್ಲಿ ಯಾವುದೇ ಸರಿಯಾದ ಶೌಚಾಲಯ ಇಲ್ಲ. ಈ ಭಾಗದಲ್ಲಿ ಪ್ರವಾಸಿಗರು ಹಾಗೂ ಸಂಚರಿಸುವವರು ಹೆಚ್ಚಾಗಿದ್ದು, ನಗರದಲ್ಲಿರುವ ಅಂಗಡಿ ಇಲ್ಲವೇ ಮನೆಗಳಿಗೆ ತೆರಳುವ ಅನಿವಾರ್ಯ ಎದುರಾಗಿದೆ.
*ಹೇಗಿದೆ ಶೌಚಾಲಯ:*
ವಗ್ಗ ಜಂಕ್ಷನ್‌ನಲ್ಲಿರುವ ವಾರದ ಸಂತೆ ನಡೆಯುವ ಬಳಿಯಿಂದಲೇ ರಸ್ತೆ ಹಾದು ಹೋಗಿದ್ದು, ಇದರ ಬಳಿಯೇ ಇಕ್ಕಟ್ಟಾದ ಸ್ಥಳದಲ್ಲಿ ಪಂಚಾಯತ್‌ನಿಂದ ನಿರ್ಮಾಣವಾದ ಹಳೆಯ ಶೌಚಾಲಯ ಕಾಣಸಿಗುತ್ತದೆ. ಈ ಶೌಚಾಲಯದ ಕಟ್ಟಡದ ಬಳಿ ಹೋಗಲು ಸರಿಯಾದ ದಾರಿ ವ್ಯವಸ್ಥೆ ಇಲ್ಲ. ಒಂದೇ ಕಟ್ಟಡದಲ್ಲಿ ಗಂಡಸರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೊಠಡಿಗಳಿದ್ದು ಎರಡೂ ಹೀನಾಯ ಸ್ಥಿತಿಯಲ್ಲಿದೆ.
*ವಗ್ಗದಲ್ಲಿ ಯಾಕೆ ಅಗತ್ಯ:* ಬಿ.ಸಿ.ರೋಡು-ಪುಂಜಾಲಕಟ್ಟೆ ರಸ್ತೆ ಈಗ ಪ್ರಯಾಣಿಕರಿಗೆ ಅಚ್ಚುಮೆಚ್ಚಾಗಿದ್ದು, ಧರ್ಮಸ್ಥಳ, ದಾವಣಗೆರೆ, ಚಿಕ್ಕಮಂಗಳೂರು, ಹೀಗೆ ಹೊರ ಜಿಲ್ಲೆಗೆ ತೆರಳುವ ಪ್ರವಾಸಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ. ಅಷ್ಟೇ ಅಲ್ಲದೇ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಶ್ರೀ ಕಾರಿಂಜ ಕ್ಷೇತ್ರಕ್ಕೆ ತೆರಳಲು ಇದೇ ಮುಖ್ಯ ರಸ್ತೆಯಾಗಿದ್ದು, ಈ ಪ್ರವಾಸಿಗರು ವಗ್ಗದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಅಷ್ಟೇ ಅಲ್ಲದೇ ಬಂಟ್ವಾಳದ ನಂತರ ಸಿಗುವ ಪುಟ್ಟ ಪಟ್ಟಣ ವಗ್ಗ ಜಂಕ್ಷನ್ ಆಗಿದ್ದು, ಈ ಗ್ರಾಮದ ಹೆಚ್ಚಿನ ಗ್ರಾಮಸ್ಥರಿಗೆ ವಗ್ಗ ನಗರ ಆಸರೆಯಾಗಿದ್ದು ಗ್ರಾಮಸ್ಥರ ಬರುವಿಕೆಯೂ ವಗ್ಗದಲ್ಲಿ ಜಾಸ್ತಿ ಇರುತ್ತದೆ.
ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವುದು ಸರಕಾರದ ಆದ್ಯ ಕರ್ತವ್ಯ. ಆದ್ದರಿಂದ ವಗ್ಗ ಜಂಕ್ಷನ್‌ನಲ್ಲಿ ಒಂದು ಸುಸಜ್ಜಿತ ಶೌಚಾಲಯ, ವಿಶ್ರಾಂತಿ ಕೊಠಡಿ ನಿರ್ಮಾಣ ಮಾಡಬೇಕು ಎಂಬುದು ಇಲ್ಲಿಗೆ ಆಗಮಿಸುವ ಪ್ರಯಾಣಿಕರ ಹಾಗೂ ಗ್ರಾಮಸ್ಥರ ಆಶಯ.
ಈಗ ವಗ್ಗ ದೊಡ್ಡ ಪಟ್ಟಣವಾಗಿ ಬೆಳೆಯುತ್ತಾ ಇದೆ. ವಗ್ಗ ಜಂಕ್ಷನ್‌ನಲ್ಲಿ ಯಾವುದೇ ಶೌಚಾಲಯ ಇಲ್ಲ. ಈಗ ಇರುವ ಶೌಚಾಲಯ ದುರಸ್ಥಿಯಲ್ಲಿದೆ. ಇದು ಉಪಯೋಗಿಸಲು ಅನುಪಯುಕ್ತವಾಗಿದೆ. ಆದಷ್ಟು ಬೇಗ ಉಪಯೋಗಿಸಲಾಗದ ಶೌಚಾಲಯವನ್ನು ತೆಗೆದು ಸುಸಜ್ಜಿತವಾದ ಶೌಚಾಲಯ ನಿರ್ಮಾಣವಾಗಲಿ ಎಂದು ಸ್ಥಳೀಯ ನಿವಾಸಿ ವಿಶ್ವನಾಥ, ವಗ್ಗ ಹೇಳುತ್ತಾರೆ.
ವಗ್ಗ ಜಂಕ್ಷನ್‌ನಲ್ಲಿ ಹಲವಾರು ವರ್ಷಗಳಿಂದ ಪಂಚಾಯತ್ ನಿಂದ ನಿರ್ಮಾಣವಾದ ಶೌಚಾಲಯ ದುಸ್ಥಿತಿಯಲ್ಲಿದೆ. ಈಗ ನಿರ್ಮಾಣ ಮಾಡಿದ ಶೌಚಾಲಯದ ಬಳಿ ಸ್ಥಳದ ಕೊರತೆ ಇದ್ದು, ಪ್ರವಾಸಿಗರಿಗೆ ಮತ್ತು ಗ್ರಾಮಸ್ಥರಿಗೆ ಪೂರಕವಾಗಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಶೌಚಾಲಯ ನಿರ್ಮಿಸಲು ಸ್ಥಳ ಹುಡುಕುತ್ತಿದ್ದು, ಅದನ್ನು ಸರಕಾರಕ್ಕೆ ತಿಳಿಸಿ ಒಂದು ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡಲಾಗುವುದು ಎಂದು ಕಾವಳಪಡೂರು ಗ್ರಾಮ ಪಂಚಾಯತ್-ಲ ಅಭಿವೃದ್ಧಿ ಅಧಿಕಾರಿ ಭರವಸೆ ನೀಡುತ್ತಾರೆ.